ಇಂಗ್ಲೆಂಡ್ ಕ್ರಿಕೆಟಿನ ಭರವಸೆಯ ಅನುಭವಿ ಆಟಗಾರ ಜೋಸ್ ಬಟ್ಲರ್ ಅಂಥವರನ್ನು ನಮ್ಮ ಜತೆ ಉಳಿಸಿಕೊಳ್ಳಲಾಗದೇ ಹೋದುದಕ್ಕೆ ವಿಷಾದವಿದೆ. ನನ್ನ ಪಾಲಿಗೆ ಅವರೆಲ್ಲವೂ ಆಗಿದ್ದರು. ನನ್ನ ಹೃದಯದಲ್ಲಿರುವ ಅತ್ಯಂತ ಆತ್ಮೀಯ ಹಿರಿಯಣ್ಣನ ಸ್ಥಾನ ಅವರಿಗಿದೆ ಎಂದು ರಾಜಸ್ಥಾನ್ ರಾಯಲ್ಸ್ ನ ಕಪ್ತಾನ ಸಂಜು ಸಾಂಸನ್ ಮಾಧ್ಯಮವೊಂದರ ಮುಕ್ತ ಮಾತುಕತೆಯಲ್ಲಿ ಹೇಳಿದ್ದಾರೆ.
ಐಪಿಎಲ್ ಕ್ರಿಕೆಟ್ ಆಡುವುದೆಂದರೆ ಮಹೋನ್ನತ ಅನುಭವಗಳ ಸಂಭ್ರಮ. ಅದು ಅಂತರಾಷ್ಟ್ರೀಯ ಗುಣಮಟ್ಟದ ಆಟವನ್ನು ಆಡುತ್ತೇವೆಂದು ಮಾತ್ರವಲ್ಲ, ಅಂತರಾಷ್ಟ್ರೀಯ ಆಟಗಾರರ ಜತೆ ಬೆರೆಯುತ್ತೇವೆ ಹಾಗೂ ಅವರ ವೈವಿಧ್ಯ ಕ್ರಿಕೆಟ್ ಕೌಶಲ್ಯ ನೋಡುತ್ತೇವೆ. ಈ ಮೂಲಕ ವಿದೇಶಿ ಆಟಗಾರರ ಜತೆ ಸ್ನೇಹ, ಸಲುಗೆಯ ಸಂಬಂಧ ಕಾಪಾಡಿಕೊಳ್ಳಲಾಗುತ್ತದೆ. ಈ ರೀತಿಯಲ್ಲಿ ನನಗೆ ಒದಗಿದ ಆತ್ಮಬಂಧುವೇ ಸ್ಟಾರ್ ಕ್ರಿಕೆಟರ್ ಜೋಸ್ ಬಟ್ಲರ್. ಈ ಬಾರಿ ನಮ್ಮೊಂದಿಗೆ ಅವರಿಲ್ಲದಿರುವುದು ವಿಷಾದಕರ ಎಂದು ಸಂಜು ಹೇಳಿದರು.
ಏಳು ವರ್ಷ ನಾವು ಒಟ್ಟಾಗಿ ಆಡಿದೆವು. ಯಾವುದೇ ವಿಷಯದಲ್ಲೂ ಪರಸ್ಪರ ಮುಚ್ಚುಮರೆ ಇಲ್ಲದೇ ಮಾತಾಡಿ, ಸಲಹೆ ಪಡೆದು
ನಾವು ಬೆರೆತಿದ್ದೆವು. ನನ್ನ ಪಾಲಿಗೆ ಅವರೊಬ್ಬ ಮಾರ್ಗದರ್ಶಿ ಸಹೋದರನಿದ್ದಂತೆ. ಈ ಬಾರಿಯ ಐ.ಪಿ.ಎಲ್ ನಲ್ಲಿ ಅವರಿಲ್ಲ ಎಂಬುದೇ ಬೇಸರ ಎಂದಿದ್ದಾರೆ ಮಲಯಾಳಿ ಸ್ಟಾರ್ ಬ್ಯಾಟರ್ ಸಂಜು ಸಾಮ್ಸನ್.
ಏಳು ವರ್ಷಗಳ ಕಾಲ ರಾಜಸ್ಥಾನ್ ರಾಯಲ್ಸ್ ಪಾಲಿನ ಭರವಸೆಯ ಆರಂಭಿಕನಾಗಿದ್ದ ಜೋಸ್ ಬಟ್ಲರ್ ಅವರನ್ನು ರಾಜಸ್ಥಾನ್ ಈ ಬಾರಿ ಉಳಿಸಿಕೊಂಡಿಲ್ಲ. ಅವರು 15.75 ಕೋಟಿ ರೂ ಮೌಲ್ಯಕ್ಕೆ ಗುಜರಾತ್ ಟೈಟಲ್ಸ್ ಪಾಲಾಗಿದ್ದಾರೆ. ಬಟ್ಲರ್ ತೆರಳಿದ ಜಾಗಕ್ಕೆ ರಾಜಸ್ಥಾನ್ ಭಾರತೀಯ ಆಟಗಾರ ಯಶಸ್ವಿ ಜೈಸ್ವಾಲ್ ರನ್ನು ಆರಿಸಿಕೊಂಡಿದೆ. ಈ ಬಾರಿ ಜೈಸ್ವಾಲ್ -ಸಂಜು ಜೋಡಿ ರಾಜಸ್ಥಾನದ ಆರಂಭಿಕ ಆಟಗಾರರು ಎನಿಸಿಕೊಂಡಿದ್ದಾರೆ.