- ಕುಕ್ಕೆ ಸುಬ್ರಹ್ಮಣ್ಯದಲ್ಲಿ ಎರಡುದಿನ ತಂಗಿ ಸರ್ಪ ಸಂಸ್ಕಾರ, ಆಶ್ಲೇಷಬಲಿ ನಡೆಸಿದ ಬಾಲಿವುಡ್ ನಟಿ ಕತ್ರೀನಾ ಕೈಫ್
- ಮುಖಕ್ಕೆ ಮಾಸ್ಕ್, ತಲೆಗೆ ದುಪ್ಪಟ್ಟಾ ಧರಿಸಿ ಮುಖಮುಚ್ಚಿ ಓಡಾಡಿದ ನಟಿ
ಬಾಲಿವುಡ್ ನಟಿ ಕತ್ರೀನಾ ಕೈಫ್ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಎರಡು ದಿನ ತಂಗಿ, ಸರ್ಪ ಸಂಸ್ಕಾರ ಸಹಿತ ಆಶ್ಲೇಷ ಬಲಿ ಪೂಜೆ ನೆರವೇರಿಸಿ ಬುಧವಾರ ಮರಳಿದ್ದಾರೆ.
ಮಂಗಳವಾರವೇ ಕುಕ್ಕೆ ಕ್ಷೇತ್ರಕ್ಕೆ ಆಗಮಿಸಿದ್ದ ನಟಿ ಕ್ಷೇತ್ರದಲ್ಲಿ ಸೇವೆಗೈದು ಅನ್ನ ಪ್ರಸಾದ ಸ್ವೀಕರಿಸಿ, ದೇಗುಲದ ಖಾಸಗಿ ವಸತಿಗೃಹದಲ್ಲಿ ತಂಗಿದ್ದರು.
ಬುಧವಾರವೂ ಎರಡನೇಯ ದಿನದ ಸರ್ಪ ಸಂಸ್ಕಾರ ಸೇವೆ ಸಲ್ಲಿಸಿದರು. ನಾಗಪ್ರತಿಷ್ಟೆ ಸೇವೆ, ಆಶ್ಲೇಷ ಬಲಿಪೂಜೆ ನೆರವೇರಿಸಿಕೊಂಡ ಅವರು ದೇವರ ಪ್ರಸಾದ ಸ್ವೀಕರಿಸಿದರು.
ಮುಖಕ್ಕೆ ಮಾಸ್ಕ್, ತಲೆಗೆ ದುಪ್ಪಟ್ಟಾ ಧರಿಸಿ ಮುಖಮುಚ್ಚಿ ಓಡಾಡಿದ ಅವರು ಸಾರ್ವಜನಿಕರಿಂದ ಅಂತರ ಕಾಪಾಡಿಕೊಂಡರು. ಮಾಧ್ಯಮದವರಿಂದಲೂ ದೂರ ಉಳಿದರು. ಮಹಾಪೂಜೆಯ ಸಂದರ್ಭ ಮುಖದ ಮಾಸ್ಕ್ ತೆಗೆದಾಗ ಮಾಧ್ಯಮಗಳು ವೀಡಿಯೋ ಚಿತ್ರೀಕರಣಕ್ಕೆ ಯತ್ನಿಸಿದರು. ಆದರೆ ಕತ್ರಿನಾ ಜತೆಗಿದ್ದವರು ಆದನ್ನು ತಡೆದರು. ಇದು ಖಾಸಗಿ ಆರಾಧನೆ. ದಯವಿಟ್ಟು ವೀಡಿಯೋ ಮಾಡದಿರಿ ಎಂದರು.
ಕುಕ್ಕೆ ಕ್ಷೇತ್ರಕ್ಕೆ ಯಾರೇ ಗಣ್ಯರು, ಜನಪ್ರಿಯರು ಆಗಮಿಸಿದರೆ ದೇವಳದ ವತಿಯಿಂದ ಅವರಿಗೆ ಪ್ರಸಾದವಿತ್ತು ಗೌರವಿಸುವ ರೂಢಿ ಇದೆ. ಆದರೆ ಕತ್ರೀನಾ ಕೈಫ್ ದೇವಳದ ಕಛೇರಿಗೆ ಭೇಟಿ ನೀಡದೇ, ಗೌರವ ಪ್ರಸಾದ ಸ್ವೀಕರಿಸದೇ ಮರಳಿದ್ದಾರೆ.
ಸಂತಾನಭಾಗ್ಯ, ಕೌಟುಂಬಿಕ ಜೀವನ ಮತ್ತು ವ್ಯವಹಾರ ದೃಷ್ಠಿಯಿಂದ ಅವರು ಕುಕ್ಕೆಯಲ್ಲಿ ಸೇವೆ ಮಾಡಿಸಿದ್ದಾರೆಂದು ಹೇಳಲಾಗುತ್ತಿದೆ.