ಈ ಬಾರಿಯ ವಿಷು ಹಬ್ಬಕ್ಕೆ ಕಾಞಂಗಾಡಿನ ಬಲ್ಲಾ ಗ್ರಾಮಸ್ಥರು ತಮ್ಮದೇ ಊರಿನ ಹೆಸರುಳ್ಳ, ತಮ್ಮದೇ ನೆಲದಲ್ಲಿ ಬೆಳೆದ ಅಕ್ಕಿಯ ಊಟ ಮಾಡಲಿದ್ದಾರೆ. ಅದಕ್ಕೆಂದೇ ಅವರು ಪಾಳು ಬಿದ್ದ ಗದ್ದೆಗಳಲ್ಲಿ “ಬಲ್ಲಾ ರೈಸ್” ಉತ್ಪಾದಿಸಿದ್ದಾರೆ. ಮನಸ್ಸಿದ್ದರೆ ಮಾರ್ಗವಿದೆ ಎಂಬ ಸಂದೇಶದೊಂದಿಗೆ ಸಾವಯವ ಅಕ್ಕಿ ಉತ್ಪಾದಿಸಿದ ಕೃಷಿ ಯಶೋಗಾಥೆ ಇತರ ನಾಡಿಗೂ ಮಾದರಿ…
ಕಾಸರಗೋಡು: ಈ ಬಾರಿಯೂ ವಿಷು ಹಬ್ಬಕ್ಕೆ ಉಣಲು ತಮ್ಮದೇ ನೆಲದ ಅಕ್ಕಿಯನ್ನು ಉತ್ಪಾದಿಸಿ ವಿತರಿಸಲು ಕಾಞಂಗಾಡಿನ ಬಲ್ಲಾ ಗ್ರಾಮ ಸಜ್ಜಾಗಿದೆ. ಕೇರಳ ರಾಜ್ಯ ರೈತ ಸಂಘ(ಕೆ.ಎಸ್ ಕೆ.ಟಿ.ಯು) ದ ಬಲ್ಲಾ ಗ್ರಾಮ ಸಮಿತಿ ನೇತೃತ್ವದಲ್ಲಿ ಬಲ್ಲಾ ಗ್ರಾಮದ ಕೃಷಿ ಒಕ್ಕೂಟ ಮಾದರಿಯಾದ ಇಂಥ ಸಾಧನೆಗೆ ಮುಂದಾಗಿದೆ.
ಬಲ್ಲಾ ಗ್ರಾಮದ ಹತ್ತು ಎಕರೆ ಪಾಳು ಬಿದ್ದ ಗದ್ದೆಯಲ್ಲಿ ನಡೆಸಿದ ಭತ್ತದ ಕೃಷಿಯ ಎರಡನೇ ಫಲದ ಕೊಯ್ಲುತ್ಸವ ನಡೆಸಿ, ಈ ಭತ್ತವನ್ನು ಬಲ್ಲಾ ಬ್ರಾಂಡ್ ಅಕ್ಕಿಯನ್ನಾಗಿಸಿ ಊರಲ್ಲೇ ಮಾರಾಟ ಮಾಡಲು ನಿರ್ಧರಿಸಿದೆ.
ಊರಿನ ಕೃಷಿಕರು, ನಿವೃತ್ತ ಹಾಗೂ ಹಾಲಿ ಪೋಲೀಸರು, ಮಾಜಿ ಸೈನಿಕರು, ಸರಕಾರಿ ಸಿಬಂದಿಗಳು, ಐ.ಟಿ.ನೌಕರರು, ಚಾಲಕರು ಹೀಗೆ ವಿವಿಧ ಕ್ಷೇತ್ರದ 23 ಮಂದಿಗಳ ಒಕ್ಕೂಟವೇ ಬ಼ಲ್ಲಾ ಗ್ರಾಮದ ಕೃಷಿ ಒಕ್ಕೂಟ.
ಊರ ಗದ್ದೆಯನ್ನೇಕೆ ಪಾಳು ಬಿಡುವುದೆಂದು ನಿರ್ಧರಿಸಿ ಹೊರಟ ಇವರ ಉತ್ಸಾಹಕ್ಕೆ ಕಾಞಂಗಾಡು ನಗರಸಭೆ, ಕೃಷಿ ಇಲಾಖೆ ಪೂರಕ ಪ್ರೋತ್ಸಾಹದ ಸಹಾಯ ನೀಡಿತು. ಮೇಲಾಂಗೋಟ್ ಶಾಲಾ ಮಕ್ಕಳು, ಬಲ್ಲಾ ಈಸ್ಟ್ ಹೈಸ್ಕೂಲಿನ ಎನ್ ಎಸ್.ಎಸ್ ಘಟಕ, ಉದ್ಯೋಗ ಖಾತರಿ ಕಾರ್ಮಿಕರು ಸಹಾಯದ ಶ್ರಮದಾನಗಳನ್ನೂ ಮಾಡಿದರು. ಪರಿಣಾಮ ಸುಡುಬೇಗೆಯ ದಿನದಲ್ಲೂ ಜ್ವಲಿಸುವ ಸೂರ್ಯನನ್ನು ಅಣಕಿಸುವಂತೆ ಚೆಲುವಾಗಿ “ಆದಿರ” ತಳಿಯ ಭತ್ತ ಫಸಲಿತ್ತಿದೆ. ಈ ಹಿಂದಿನ ವರ್ಷಗಳಲ್ಲೂ ಭತ್ತ ಬೆಳೆಸಿ, ಊರಲ್ಲೇ ಮಾರಾಟ ಮಾಡಿ ವಿಷು ಉಂಡಿದ್ದ ಒಂದು ನಾಡು ಈ ಬಾರಿಯೂ ಬೆವರಿಸಿದೆ. ಫಲ ಪಡೆದಿದೆ.
ಈ ಬಾರಿ ನಡೆದ ಕೊಯ್ಲುತ್ಸವವನ್ನು ಕಾಞಂಗಾಡು ಸಬ್ ಕಲೆಕ್ಟರ್ ಪ್ರತೀಕ್ ಜೈನ್ ಉದ್ಘಾಟಿಸಿದರು. ವಾರ್ಡು ಕೌನ್ಸಿಲರ್ ಕೆ.ವಿ.ಸುಶೀಲ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಪ್ರಿನ್ಸ್ಪಲ್ ಆಫೀಸರ್ ಪಿ.ರಾಘವೇಂದ್ರ, ಡೆಪ್ಯುಟಿ ಡಯರೆಕ್ಟರ್ ಸ್ಮಿತಾ ನಂದಿನಿ, ಕೃಷಿ ಅಧಿಕಾರಿ ಕೆ.ಮುರಳೀಧರನ್ ಮತ್ತು ಗ್ರಾಮಸ್ಥರು ಪಾಲ್ಗೊಂಡರು.