- ಅಕ್ರಮ ಶಸ್ತ್ರಾಸ್ತ್ರ ಸಹಿತ ಭಾರೀ ಪ್ರಮಾಣದ ಗಾಂಜಾಗಳೊಂದಿಗೆ ಕಾಸರಗೋಡಿನ ಐವರು ಮಂಗಳೂರಲ್ಲಿ ಸೆರೆ
- 3ಪಿಸ್ತೂಲ್, 6ಮದ್ದುಗುಂಡು, 3ಕಾರು ಸಹಿತ ಬಂಧಿತರಾದ ಅಂತರಾಜ್ಯ ಕ್ರಿಮಿನಲ್ ತಂಡ: ಬಂಧಿತರಲ್ಲೋರ್ವನಿಗೆ ನಿಷೇಧಿತ ಪಿಎಫ್ಐ ನಂಟು!
ಮಂಗಳೂರು: ಮಾದಕ ವಸ್ತು ಹಾಗೂ ಅಕ್ರಮ ಪಿಸ್ತೂಲ್ ಸಾಗಾಟ, ಮಾರಾಟಕ್ಕೆ ಸಂಬಂಧಿಸಿ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಬೇಕಾಗಿದ್ದ ಐವರು ಅಂತಾರಾಜ್ಯ ಕುಖ್ಯಾತ ಕ್ರಿಮಿನಲ್‌ಗಳನ್ನು ಸಿಸಿಬಿ ಪೊಲೀಸರು ಮಾ.12, 13ರಂದು 24 ಗಂಟೆ ಅವಧಿಯಲ್ಲಿ ಬಂಧಿಸಿದ್ದಾರೆ. ಮೂರು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.
ಕಾರ್ಯಾಚರಣೆ ವೇಳೆ ಕೇರಳ- ಕರ್ನಾಟಕ ರಾಜ್ಯಗಳಲ್ಲಿ ಹಲವು ಪ್ರಕರಣಗಳಲ್ಲಿ ಭಾಗಿಯಾದ ಕಾಸರಗೋಡು ಜಿಲ್ಲೆಯ ನೌಫಲ್(38), ಮನ್ಸೂರ್(36), ಮೊಹಮ್ಮದ್ ಅಸ್ಕರ್(27), ಮೊಹಮ್ಮದ್ ಸಾಲಿ(31), ಕೊಯಿಕ್ಕೋಡ್ ಜಿಲ್ಲೆಯ ಅಬ್ದುಲ್ ಲತೀಫ್ ಯಾನೆ ತೋಕು ಲತೀಫ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 3 ಪಿಸ್ತೂಲ್, 6 ಸಜೀವ ಮದ್ದು ಗುಂಡುಗಳು ಹಾಗೂ 12.895 ಕೆ.ಜಿ ಗಾಂಜಾ, 3 ಕಾರು ಹಾಗೂ ಇತರ ಸೊತ್ತುಗಳ ವಶಪಡಿಸಿಕೊಂಡಿದ್ದಾರೆ.
ಆರೋಪಿ ಅಬ್ದುಲ್ ಲತೀಫ್ ಇತ್ತೀಚೆಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾದ ಶೂಟೌಟ್ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗೆ ಪಿಸ್ತೂಲ್ ನೀಡಿದ ಆರೋಪಿ. ಈತನಿಗಾಗಿ ಶೋಧ ನಡೆಸಲಾಗುತಿತ್ತು.
ಬುಧವಾರ ಮತ್ತು ಗುರುವಾರ ಈ ಕಾರ್ಯಾಚರಣೆ ನಡೆದಿದೆ. ಬಂಧಿತರಲ್ಲಿ ಓರ್ವನಿಗೆ ನಿಷೇಧಿತ,ಪಿಎಫ್ಐ ಸಂಘಟನೆ ಜತೆ ನಂಟಿದ್ದು, ಈತನನ್ನು ಪ್ರತ್ಯೇಕ ವಿಚಾರಣೆಗೊಳಪಡಿಸಲಾಗುತ್ತಿದೆ.
ದೇರಳಕಟ್ಟೆ ಸಮೀಪದ ನಾಟೆಕಲ್ ಬಳಿ ಸ್ಕಾರ್ಪಿಯೋ ಕಾರೊಂದು ಅನುಮಾನಾಸ್ಪದ ರೀತಿಯಲ್ಲಿ ಸುತ್ತಾಡುವುದನ್ನು ಗಮನಿಸಿ, ಈ ಕುರಿತು ಖಚಿತ ಮಾಹಿತಿಯೊಂದಿಗೆ ಮಾ.12ರಂದು ಧಾಳಿ ನಡೆಸಿದ ಪೋಲೀಸ್ ತಂಡ ಕಾರಿನಲ್ಲಿದ್ದ ಕಾಸರಗೋಡಿನ ನೌಫಲ್(38). ಪೈವಳಿಕೆಯ ಮನ್ಸೂರ್ (36), ಎಂಬಿವರನ್ನು ಬಂಧಿಸಿ ಇವರಿಂದ 2ಪಿಸ್ತೂಲ್, 4ಸಜೀವ ಮದ್ದುಗುಂಡು, ಎರಡು ಮೊಬೈಲ್, ಮತ್ತು ಸ್ಕಾರ್ಪಿಯೋ ಕಾರನ್ನು ವಶಪಡಿಸಿದ್ದರು.
ಈ ಪೈಕಿ ನೌಫಲ್ ವಿರುದ್ದ ಕಾಸರಗೋಡು ಜಿಲ್ಲೆಯಲ್ಲಿ ಮಾದಕ ವಸ್ತು ಮಾರಾಟ/ಸಾಗಾಟಕ್ಕೆ ಸಂಬಂಧಿಸಿದ ಆರಕ್ಕೂ ಅಧಿಕ ಕೇಸುಗಳಿವೆ. ಮನ್ಸೂರ್ ವಿರುದ್ದ ಮಾದಕ ವಸ್ತು ಸಾಗಾಟ, ಕೊಲೆ ಬೆದರಿಕೆ ಸಹಿತ 4ಕೇಸುಗಳಿವೆ.