ಪೈವಳಿಕೆ ಮಂಡೆಕಾಪು ಎಂಬಲ್ಲಿಂದ ನಾಪತ್ತೆಯಾದ 15ರ ಬಾಲಕಿ ಮತ್ತು 42ರ ಚಾಲಕನ ಮೃತದೇಹ ಒಂದೇ ಮರದಲ್ಲಿ ನೇಣುಬಿಗಿದು ಆತ್ಮಹತ್ಯೆ ನಡೆಸಿದ ರೀತಿಯಲ್ಲಿ ಪತ್ತೆಯಾದ ಘಟನೆಯ ಕುರಿತು ತನಿಖಾ ನೇತೃತ್ವ ವಹಿಸಿದ್ದ ಕುಂಬಳೆ ಸಿ.ಐಯವರಿಂದ ತನಿಖಾ ಲೋಪ ಉಂಟಾಗಿಲ್ಲ ಎಂದು ಕೇರಳ ಹೈಕೋರ್ಟು ವಿಭಾಗೀಯ ಪೀಠ ಅಭಿಪ್ರಾಯಪಟ್ಟಿದೆ.
ಪ್ರಕರಣದ ತನಿಖಾಧಿಕಾರಿಯಾದ ಕುಂಬಳೆ ಸಿ.ಐ ವಿನೋದ್ ಕುಮಾರ್ ಅವರನ್ನು ಕೇಸ್ ಫೈಲ್ ಸಹಿತ ಹಾಜರಾಗಲು ಆದೇಶಿಸಿದ್ದ ಹೈಕೋರ್ಟು, ಕೇಸಿನ ತನಿಖಾ ವಿಧಾನ ಪರಿಶೀಲಿಸಿ ಲೋಪ ಉಂಟಾಗಿಲ್ಲ ಎಂದು ಪ್ರಕಟಿಸಿದೆ.
ಫೆ.11ರಂದು ರಾತ್ರಿ 15ರ ಹುಡುಗಿ ನಾಪತ್ತೆಯಾಗಿದ್ದು, 12ರಂದು ಮನೆಯವರು ದೂರು ನೀಡಿದ್ದರು. ಇದೇ ಸಂದರ್ಭ ಸಮೀಪದ 42ರ ಹರೆಯದ ಪ್ರದೀಪ ಎಂಬ ರಿಕ್ಷಾ ಚಾಲಕನೂ ನಾಪತ್ತೆಯಾದ ಹಿನ್ನೆಲೆಯಲ್ಲಿ ಇವರಿಬ್ಬರೂ ತೆರಳುವ ಸಾಧ್ಯತೆಗಳಿದ್ದ ಕರ್ನಾಠಕದಲ್ಲಿ ಹುಡುಕಾಟ ನಡೆದಿತ್ತು. ಅನಂತರ ಲೊಕೇಷನ್ ಆಧಾರದಲ್ಲೂ ಹುಡುಕಾಟ ನಡೆದಿತ್ತೆಂದು ಸಿ.ಐ ಕೋರ್ಟಿಗೆ ತಿಳಿಸಿದ್ದಾರೆ. ಮರಣ ಕಾರಣ ಸ್ಪಷ್ಟವಾಗಬೇಕಿದ್ದರೆ ಅಂತಿಮ ಮರಣೋತ್ತರ ಪರೀಕ್ಷಾ ವರದಿ ಲಭ್ಯವಾಗಬೇಕಿದೆ. ಈ ಹಿನ್ನೆಲೆಯಲ್ಲಿ ಸದ್ಯ ಕೇಸ್ ಫೈಲ್ ಮುಚ್ಚುವಂತಿಲ್ಲ. ನಾಪತ್ತೆ ಪ್ರಕರಣದ ಕುರಿತು ಹುಡುಗಿಯ ತಾಯಿ ಹೈಕೋರ್ಟಿಗೆ ಸಲ್ಲಿಸಿದ ಹೇಬಿಯಸ್ ಕಾರ್ಪ್ಸ್ ಮನವಿ ಮಾ.18ರಂದು ಮರುಪರಿಶೀಲನೆ ನಡೆಯಲಿದೆ. ಈ ವೇಳೆ ಪೋಲೀಸ್ ಕೈಗೊಂಡ ಕ್ರಮಗಳನ್ನು ವಿವರವಾಗಿ ತಿಳಿಸುವಂತೆ ಹೈಕೋರ್ಟು ಆದೇಶಿಸಿದೆ.
ಮಹಿಳೆಯರು, ಮಕ್ಕಳ ವಿರುದ್ಧ ನಡೆಯುವ ದೌರ್ಜನ್ರ, ಶೋಷಣೆಗಳ ಕುರಿತಾದ ಯಾವುದೇ ದೂರುಗಳಿದ್ದರೂ, ದೂರು ಲಭಿಸಿದೊಡನೆಯೇ ಸಮಗ್ರ ತನಿಖೆ ನಡೆಸಬೇಕೆಂದು ಹೈಕೋರ್ಟು ಆದೇಶಿಸಿದೆ. ದೂರಿನ ಸರಿ -ತಪ್ಪುಗಳನ್ನು ಮೊದಲ ಹಂತದಲ್ಲಿ ಗಮನಿಸದೇ, ತನಿಖೆ ಆರಂಭಿಸಬೇಕು. ಅಪ್ರಾಪ್ತ ಮಕ್ಕಳ ನಾಪತ್ತೆ ಪ್ರಕರಣಗಳನ್ನು ಪೋಕ್ಸೋ ಕೇಸಾಗಿ ಪರಿಗಣಿಸಬೇಕು ಎಂದು ನ್ಯಾಯಾಲಯ ತಿಳಿಸಿದೆ.
ಮನೆಯಲ್ಲಿ ನಿದ್ದೆಮಾಡಲು ಮಲಗಿದ್ದ 15ರ ಹುಡುಗಿ ಮಧ್ಯರಾತ್ರಿಯ ಬಳಿಕ ಮನೆ ಬಿಟ್ಟು ಓಡಿ ಹೋದಳೆಂಬ ವಾದ ಅಂಗೀಕರಿಸಲಾಗದು ಎಂದ ಕೋರ್ಟು, ನಾಪತ್ತೆಯಾಗಿ 26ದಿನಗಳ ಬಳಿಕ ಒಣಗಿದ ಅಸ್ಥಿರೂಪದಲ್ಲಿ ಶವ ದೊರೆಯುವ ತನಕ ಮನೆಮಂದಿ ಅನುಭವಿಸಿದ ಹಿಂಸೆ, ಅವಮಾನಗಳನ್ನು ಬಗೆಹರಿಸಬೇಕೆಂದೂ ಹೇಳಿದೆ.
ಜಸ್ಟೀಸ್ ದೇವನ್ ರಾಮಚಂದ್ರನ್, ಎಂ.ಬಿ.ಸ್ನೇಹಲತಾ ಎಂಬಿವರನೊಳಗೊಂಡ ವಿಭಾಗೀಯ ಪೀಠ ಈ ಅಭಿಪ್ರಾಯ ನೀಡಿದೆ.








