ಮಾರ್ಚ್ ತಿಂಗಳಾರಂಭದಲ್ಲೇ ನಾಡು ಅತ್ಯುಷ್ಣದ ಬೇಗೆಯಿಂದ ಕಂಗೆಟ್ಟಿದ್ದು, ಉಷ್ಣಹವೆ, ಬಿಸಿಗಾಳಿಯಿಂದ ಕಾಸರಗೋಡು ಸಹಿತ ಕರಾವಳಿಯ ತುಳುನಾಡು ತಲ್ಲಣಿಸಿದೆ. ಈ ಪೈಕಿ ಅರಣ್ಯ ಪ್ರದೇಶದ ಅಂಚಿನಲ್ಲಿರುವ ಸುಳ್ಯದಲ್ಲಿ ಕರ್ನಾಟಕ ರಾಜ್ಯದಲ್ಲೇ ಗರಿಷ್ಟ ಉಷ್ಣಾಂಶ 41.4 ಡಿಗ್ರಿ ಸೆಲ್ಸಿಯಸ್ ಮಂಗಳವಾರ ದಾಖಲಾಗಿದೆ. ಮುಂಬರುವ ದಿನಗಳಲ್ಲಿ ತಾಪಮಾನ ಇನ್ನೂ ಹೆಚ್ಚಾಗಲಿವೆಯೆಂದು ಹವಾಮಾನ ಇಲಾಖೆ ಪ್ರಕಟಿಸಿದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಪ್ರಕಾರ ದ.ಕ ಜಿಲ್ಲೆ ಮತ್ತು ಉ.ಕ ಜಿಲ್ಲೆಯ ತಲಾ 10ಕಡೆ ಮತ್ತು ಕೊಡಗು ಜಿಲ್ಲೆಯ ಒಂದು ಕಡೆ ಗರಿಷ್ಟ ಉಷ್ಣಾಂಶವು 38 ಡಿಗ್ರಿಯಿಂದ 41ಡಿಗ್ರಿ ಸೆಲ್ಸಿಯಸ್ ವರೆಗೆ ಏರಿಕೆಯಾಗಿದೆಯೆಂದು ಸೂಚಿಸಿದೆ. ಉತ್ತರ ಒಳನಾಡಿನಲ್ಲಿ ಇನ್ನೂ ಒಂದೆರಡು ದಿನ ಉಷ್ಣ ಹವೆ ವಾತಾವರಣ ಇರಲಿದ್ದು ಸಾರ್ವಜನಿಕರು ಸುಡುಬಿಸಿಲಿಗೆ ಬರಿಮೈಯೊಡ್ಡಿ ಹೊರಗಿಳಿಯಬಾರದು ಮತ್ತು ನಿರ್ಜಲೀಕರಣಕ್ಕೆ ಒಳಗಾಗಬಾರದೆಂದು ಮುನ್ನೆಚ್ಚರಿಕೆ ನೀಡಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪಾಣೆಮಂಗಳೂರು , ಕಡಬ, ಕೊಕ್ಕಡ ತಲಾ (40.5 ಡಿಗ್ರಿ ಸೆಲ್ಸಿಯಸ್)., ಮತ್ತು ಪುತ್ತೂರು, ಉಪ್ಪಿನಂಗಡಿ ತಲಾ 40.ಡಿಗ್ರಿ ಸೆಲ್ಸಿಯಸ್, ಮೂಡಬಿದಿರೆ, ಬಂಟ್ವಾಳ ತಲಾ 39ಡಿಗ್ರಿ, ಕಾರ್ಕಳ 38 ಡಿಗ್ರಿ, ಸಂಪಾಜೆ 40.7 ಡಿಗ್ರಿ ಹಾಗೂ ಉ.ಕ ಜಿಲ್ಲೆಯ ಕೆಲವೆಡೆ 37ರಿಂದ 41ರ ತನಕ ಉಷ್ರ
ಣಾಂಶ ಏರಿಕೆಯಾದ ವರದಿಯನ್ನು ಹವಾಮಾನ ಇಲಾಖೆ ಪ್ರಕಟಿಸಿದೆ.
ಸಮಾನವಾದ ಉಷ್ಣಹವೆಯ ಬಿಸಿಗಾಳಿ ದ.ಕ ಜಿಲ್ಲೆಯ ಗಡಿಪ್ರದೇಶವಾದ ಕೇರಳದ ಕಾಸರಗೋಡಿನಲ್ಲಿದೆ. ಆದರೆ 36 ಡಿಗ್ರಿ ಸೆಲ್ಸಿಯಶ್ ಗಿಂತ ತಾಪಮಾನ ಏರಿಕೆಯಾಗಿಲ್ಲ. ಈಗಾಗಲೇ ಸೂರ್ಯಾಘಾತಕ್ಕೆ ಕಾಸರಗೋಡು ಜಿಲ್ಲೆಯಲ್ಲಿ ವೃದ್ಧರೊಬ್ಬರು ಕುಸಿದು ಬಿದ್ದು ಬಲಿಯಾದ ಹಿನ್ನೆಲೆಯಲ್ಲಿ ಮುಂಬರುವ ದಿನಗಳ ತಾಪಮಾನ ಏರಿಕೆ ಆತಂಕ ಸೃಷ್ಠಿಸಿದೆ.
ಅತ್ಯುಷ್ಣದ ಬೆನ್ನಲ್ಲೇ ಮೋಡಗಟ್ಟುವುದು ಕಂಡು ಜನರು ಮಳೆ ನಿರೀಕ್ಷಿಸಿದರೂ ಅತ್ಯುತ್ತರ ಕೇರಳ ಮತ್ತು ಕರಾವಳಿಗೆ ಮಳೆ ಕಾಲಿಟ್ಟಿಲ್ಲ. ಇದೇ ವೇಳೆ ದಕ್ಷಿಣ ಕೇರಳ ಸಹಿತ ಬೆಂಗಳೂರಲ್ಲಿ ಮಳೆ ಮುನ್ನೆಚ್ಚರಿಕೆಗಳಿವೆ.
ಕೇರಳದಲ್ಲಿ ಇನ್ನೂ ಕೆಲದಿನ ಅತ್ಯುಷ್ಣ ಏರಿಕೆಯಾಗಲಿದ್ದು, ಮುನ್ನೆಚ್ಚರಿಕಾ ಕ್ರಮದಂಗವಾಗಿ ಕಾಸರಗೋಡು ಜಿಲ್ಲೆ ಸಹಿತ 7ಜಿಲ್ಲೆಗೆ ಎಲ್ಲೋ ಅಲರ್ಟ್ ಪ್ರಕಟಿಸಲಾಗಿದೆ. ಬೆಳಿಗ್ಗೆ 11ರಿಂದ ಅಪರಾಹ್ನ 3ರ ತನಕ ನಾಗರಿಕರು
ಬಿಸಿಲಿಗೆ ಮೆಯ್ಯೊಡ್ಡಬಾರದೆಂದು ಮುನ್ನೆಚ್ಚರಿಕೆ ನೀಡಲಾಗಿದೆ.