ರಾಜಶ್ರೀ ಟಿ.ರೈ ಪೆರ್ಲ ಅವರ “ಮುಸ್ರಾಲೊ ಪಟ್ಟೊ” ಸಹಿತ 10ಮಂದಿಗಳ ಕೃತಿಗೆ ಕರ್ನಾಟಕ ತುಳು ಅಕಾಡೆಮಿ ಪ್ರಶಸ್ತಿ

ಕುಂಬಳೆ ಸೀಮೆಯ ತುಳು ಭಾಷೆಗೆ ಕನ್ನಡಿ ಹಿಡಿವ ಅಪೂರ್ವ ಕಾದಂಬರಿ "ಮುಸ್ರಾಲೊ ಪಟ್ಟೊ" ಗೆ ಪ್ರಶಸ್ತಿಯ ಮನ್ನಣೆ

by Narayan Chambaltimar
  • ರಾಜಶ್ರೀ ಟಿ.ರೈ ಪೆರ್ಲ ಅವರ “ಮುಸ್ರಾಲೊ ಪಟ್ಟೊ” ಸಹಿತ 10ಮಂದಿಗಳ ಕೃತಿಗೆ ಕರ್ನಾಟಕ ತುಳು ಅಕಾಡೆಮಿ ಪ್ರಶಸ್ತಿ
  • ಕುಂಬಳೆ ಸೀಮೆಯ ತುಳು ಭಾಷೆಗೆ ಕನ್ನಡಿ ಹಿಡಿವ ಅಪೂರ್ವ ಕಾದಂಬರಿ “ಮುಸ್ರಾಲೊ ಪಟ್ಟೊ” ಗೆ ಪ್ರಶಸ್ತಿಯ ಮನ್ನಣೆ

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ 2022ನೇ ಹಾಗೂ 2023ನೇ ಸಾಲಿನ ಪುಸ್ತಕ ಪ್ರಶಸ್ತಿ ಹಾಗೂ ದತ್ತಿನಿಧಿ ಪುಸ್ತಕ ಪುರಸ್ಕಾರ ಪ್ರಕಟಗೊಂಡಿದ್ದು, ಕುಂಬಳೆ ಸೀಮೆಯ ತುಳು ಭಾಷೆ ಮತ್ತು ಬದುಕಿಗೆ ಕನ್ನಡಿ ಹಿಡಿದ ರಾಜಶ್ರೀ ರೈ ಪೆರ್ಲ ಇವರ “ಮುಸ್ರಾಲೊ ಪಟ್ಟೊ” ಕಾದಂಬರಿಗೆ 2023ನೇ ಸಾಲಿನ ಕಾದಂಬರಿ ಪ್ರಶಸ್ತಿ ಘೋಷಣೆಯಾಗಿದೆ.
ನಾಲ್ವರು ಲೇಖಕರಿಗೆ ವಾರ್ಷಿಕ ಪುಸ್ತಕ ಬಹುಮಾನ, 6ಲೇಖಕರಿಗೆ ವಾರ್ಷಿಕ ದತ್ತಿನಿಧಿ ಪುಸ್ತಕ ಬಹುಮಾನ ಪ್ರಕಟಿಸಲಾಗಿದೆ. ಪ್ರಶಸ್ತಿಯು 25ಸಾವಿರ ರೂ ನಗದು, ಸ್ಮರಣಿಕೆ, ಪ್ರಶಸ್ತಿ ಪತ್ರವನ್ನೊಳಗೊಂಡಿದೆ. ಮಾ.15ರಂದು ಬೆಳಿಗ್ಗೆ 10ಕ್ಕೆ ಮಂಗಳೂರು ತುಳು ಭವನದಲ್ಲಿ ಪ್ರಶಸ್ತಿ ಪ್ರದಾನವಾಗಲಿದೆ.

‘ಮುಸ್ರಾಲೊ ಪಟ್ಟೊ ಕುಂಬಳೆ ಸೀಮೆಯ ತೌಳವ ಚರಿತೆಯ ಕನ್ನಡಿ…

“ಮುಸ್ರಾಲೊ ಪಟ್ಟೊ” ಕಾದಂಬರಿಯು ಕಲ್ಪಿತ ಕಥನವಾಗದೇ ಅದು ಗತ ವೈಭವದ ಕುಂಬಳೆ ಸೀಮೆಯೆಂಬ ತುಳುನಾಡಿನ ತುಳು ಭಾಷೆ ಮತ್ತು ಬದುಕಿನ ಮೇಲೆ ಅಧ್ಯಯನದ ಕಿರಣ ಬೀರುವ ಅನನ್ಯ ಕೃತಿ. ಸುಮಾರು 1800ರ ಕಾಲಘಟ್ಟದ ಕಲ್ಯಾಣಪ್ಪನ ಕಾಟಕ್ಕಾಯಿ ದಂಗೆಯ ಕಾಲದಲ್ಲಿ ತುಳುನಾಡಿನ ತುಂಡರಸರು, ಗುತ್ತಿನ ಯಜಮಾನರು ತಮ್ಮ ಸ್ವಾಧೀನ ಬಲದ ಜನರ ದಂಡು ಸೇರಿಸಿ ಹೊಡೆದಾಟ, ಯುದ್ಧ, ಗುಲ್ಲುಗಳನ್ನು ಎದುರಿಸುತ್ತಿದ್ದರು. ಜನರನ್ನು ಒಗ್ಗೂಡಿಸುವುದನ್ನೇ ದಂಡು ಎನ್ನುತ್ತಿದ್ದರು. ಆಗ ಸೈನ್ಯ ಎಂಬ ಪರಿಕಲ್ಪನೆ ಇರಲಿಲ್ಲ. ಒಬ್ಬರ ಕೈಕಳಗೆ ಎಷ್ಟು ಜನ ನೆರೆಯುತ್ತಾರೋ ಈ ಬಲದ ಆಧಾರದಲ್ಲೇ ಅವರ ಯೋಗ್ಯತೆಯ ಸ್ಥಾನ,ಮಾನಗಳೂ ನಿರ್ಣಯವಾಗಿ ಅದೊಂದು ಗೌರವದ, ಮರ್ಯಾದೆಯ ಪಟ್ಟವಾಗಿತ್ತು. ಇದನ್ನೇ ಇಂದಿಗೂ ತುಳುನಾಡ ದೈವಗಳು ಮೌಖಿಕ ಕರೆಯುವ ರೂಢಿ ಇದೆ. “ಮುಸ್ರಾಲೊ ಪಟ್ಟೊ” ಅಂದರೆ ಮೂರು ಸಾವಿರ ದಂಡಿನ ಪಟ್ಟ ಎಂದರ್ಥ.

ಈ ಕಾದಂಬರಿಯು ನಮ್ಮ ಕಾಸರಗೋಡಿನ ಪ್ರಾಚೀನ ತುಳು ಭಾಷೆಗೆ ಕನ್ನಡಿ ಹಿಡಿಯುವ ಪ್ರಯತ್ನ. ಈನೆಲದ ತುಳು ಭಾಷೆಯ ಪ್ರಾಚೀನತೆಯ ವೈವಿಧ್ಯ, ಸಾಂಸ್ಕೃತಿಕ ಕೊಡುಗೆಗಳ ಕುರಿತು ಇಂಥಾ ಕೆಲಸಗಳು ನಡೆದದ್ದೇ ಕಡಿಮೆ. ಆದ್ದರಿಂದಲೇ ಈ ಕೃತಿ ಭಾಷಾ ದೃಷ್ಟಿಯ ಅಧ್ಯಯನದ ಪ್ರಯೋಗ ಎಂದರು ಕಾದಂಬರಿಗಾರ್ತಿ ರಾಜಶ್ರೀ ರೈ ಪೆರ್ಲ.

ಇದು ವೈಯ್ಯಕ್ತಿಕ ಪ್ರಶಸ್ತಿಯಲ್ಲ, ಕೃತಿಯನ್ನು ಮಾನಿಸಿದ ಪ್ರಶಸ್ತಿ. ಆದ್ದರಿಂದಲೇ ನನಗೆ ಸಂತೋಷ. 480ಪುಟಗಳ ಬೃಹತ್ ಕಾದಂಬರಿಯನ್ನು ಬರೆಯಲು ನಾನು ಕಾಸರಗೋಡು ತಾಲೂಕೆಂಬ ಕುಂಬಳೆ ಸೀಮೆಯ ನೆಲಮೂಲ ಕಥನಗಳ ಅಧ್ಯಯನ ಮಾಡಿದ್ದೇನೆ. ಕಾಸರಗೋಡಿನ ತುಳು ಅನನ್ಯತೆಯನ್ನು ಸಂಶೋಧಿಸಿ ಈ ಕೃತಿಯಲ್ಲಿ ದಾಖಲಿಸಿದ್ದೇನೆ. ಇದನ್ನೊಂದು ಕಾದಂಬರಿ ಎಂದು ಓದುವ ಬದಲು ನೆಲದ ಐತಿಹಾಸಿಕ ಕಥನವಾಗಿ ಕಾಣಬೇಕು. ಇದು ತೌಳವ ನಾಡಿನ ಸಾಂಸ್ಕೃತಿಕ ಇತಿಹಾಸ ಕಟ್ಟಿದ ಕಾಯಕ. ಅದಕ್ಕೆ ಪ್ರಶಸ್ತಿ ಮರ್ಯಾದೆ ಸಿಕ್ಕಿರುವುದು ಖುಷಿ ನೀಡಿದೆ.
– ರಾಜಶ್ರೀ ರೈ ಪೆರ್ಲ, ಕಾದಂಬರಿಗಾರ್ತಿ

ತುಳು ಅಕಾಡೆಮಿಯ 2022ನೇ ಸಾಲಿನ ತುಳುಕವನ ಸಂಕಲನ ಪ್ರಶಸ್ತಿಗೆ ರಾಜೇಶ್ ಶೆಟ್ಟಿ ದೋಟ ಅವರ “ಮುಗದಾರಗೆ” ಕೃತಿ, 23ನೇ ಸಾಲಿನ ಪ್ರಶಸ್ತಿಗೆ ರಘು ಇಡ್ಕಿದು ಅವರ “ಎನ್ನ ನಲಿಕೆ” ಕೃತಿ ಆಯ್ಕೆಯಾಗಿದೆ.
2023ನೇ ಸಾಲಿನ ತುಳು ಅನುವಾದ ವಿಭಾಗದ ಪುಸ್ತಕ ಬಹುಮಾನಕ್ಕೆ ಕುಶಾಲಾಕ್ಷಿ ವಿ.ಕುಲಾಲ್ ಅವರ “ತಗೊರಿ ಮಿತ್ತ್ ಮಣ್ಣ್” ಕೃತಿ ಆಯ್ಕೆಯಾಗಿದೆ. 2022ನೇ ಸಾಲಿನ ಉಷಾ ಪಿ ರೈ ದತ್ತಿನಿಧಿ ಪ್ರಶಸ್ತಿಗೆ ಕಬ್ಬಿನಾಲೆ ವಸಂತ ಭಾರಧ್ವಾಜರ “ತುಳು ಕಾವ್ಯ ಮೀಮಾಂಸೆ” ಕೃತಿ , 2023ನೇ ಸಾಲಿನ ಪ್ರಶಸ್ತಿಗೆ ಡಾ.ಚಿನ್ನಪ್ಪ ಗೌಡರ “ಕರಾವಳಿ ಕಥನ” ಕೃತಿ ಆಯ್ಕೆಗೊಂಡಿದೆ.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00