ರಣಜಿ ಕ್ರಿಕೆಟ್ ಇತಿಹಾಸದಲ್ಲಿ ಪ್ರಪ್ರಥಮ ಕೇರಳ ತಂಡ ಫೈನಲಿಗೇರಲು ಬೆನ್ನೆಲುಬಾದ ಕಾಸರಗೋಡಿನ ಪ್ರತಿಭೆ ಮೊಹ್ಮದ್ ಅಜರುದ್ದೀನ್ ಗೆ ಹುಟ್ಟೂರಲ್ಲಿ ಅಭಿಮಾನದ ಸ್ವಾಗತ..

ದೇಶದ ಯಾವುದೇ ತಂಡ ಕೇರಳವನ್ನು ನಿರ್ಲಕ್ಷಿಸುವಂತಿಲ್ಲ - ಅಜರುದ್ದೀನ್

by Narayan Chambaltimar
  • ರಣಜಿ ಕ್ರಿಕೆಟ್ ಇತಿಹಾಸದಲ್ಲಿ ಪ್ರಪ್ರಥಮ ಕೇರಳ ತಂಡ ಫೈನಲಿಗೇರಲು ಬೆನ್ನೆಲುಬಾದ ಕಾಸರಗೋಡಿನ ಪ್ರತಿಭೆ ಮೊಹ್ಮದ್ ಅಜರುದ್ದೀನ್ ಗೆ ಹುಟ್ಟೂರಲ್ಲಿ ಅಭಿಮಾನದ ಸ್ವಾಗತ..
  • ದೇಶದ ಯಾವುದೇ ತಂಡ ಕೇರಳವನ್ನು ನಿರ್ಲಕ್ಷಿಸುವಂತಿಲ್ಲ – ಅಜರುದ್ದೀನ್

ಭಾರತೀಯ ರಣಜಿ ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಬಾರಿಗೆ ಕೇರಳ ಫೈನಲಿಗೇರಿದ ಅತ್ಯಪೂರ್ವ ಇತಿಹಾಸಕ್ಕೆ ಬೆನ್ನೆಲುಬಾದ, ಕೇರಳ ಕ್ರಿಕೆಟ್ ತಂಡದ ತಾಜಾ ಸೊತ್ತು, ಗಡಿನಾಡು ಕಾಸರಗೋಡಿನ
ಮೊಹ್ಮದ್ ಅಜರುದ್ದೀನ್ ಗೆ ಹೂಟ್ಟೂರ ಅಭಿಮಾನಿಗಳು ಆದರಾತಿಥ್ಯದ ಗೌರವ ಸಹಿತ ಊರಿಗೆ ಬರಮಾಡಿಕೊಂಡು ಅಭಿನಂದನೆ ಸಲ್ಲಿಸಿದರು.

ರಣಜಿ ಕ್ರಿಕೆಟ್ ಚರಿತ್ರೆಯಲ್ಲಿ ಇತರ ರಾಜ್ಯಗಳಂತೆ ಸ್ಟಾರ್ ಆಟಗಾರರ ತಾರಾ ಪರಿವೇಷಗಳಿಲ್ಲದೇ ಕೇರಳ ಕ್ರಿಕೆಟ್ ತಂಡ ಫೈನಲಿಗೇರುವುದು ಚರಿತ್ರೆ,ಲ್ಲಿ ಇದೇ ಮೊದಲು. ಕೇರಳ ಫೈನಲ್ ಅರ್ಹತೆಗೇರಲು ಗಡಿನಾಡು ಕಾಸರಗೋಡಿನ ಪ್ರತಿಭೆ ಮೊಹಮ್ಮದ್ ಅಜರುದ್ದೀನ್ ಅವರ ಸೆಮಿ ಫೈನಲಿನಲ್ಲಿ ಗುಜರಾತ್ ವಿರುದ್ದ ಗಳಿಸಿದ ಔಟಾಗದ 177 ರನ್ಗಳ ಬ್ಯಾಟಿಂಗ್ ಕೊಡುಗೆ ಅತ್ಯಂತ ನಿರ್ಣಾಯಕವಾಗಿತ್ತು. ಇದು ರಣಜಿ ಚರಿತ್ರೆಯಲ್ಲಿ ಕೇರಳವನ್ನು ಫೈನಲಿಗೇರಿಸಿದ ದಾಂಡಿಗನೊಬ್ಬನ ಪ್ರತಿಭೆಯ ಗರಿಷ್ಟ ಕೊಡುಗೆ. ಫೈನಲ್ ಪಂದ್ಯ ಡ್ರಾ ಆಗಿ, ವಿದರ್ಭ ವಿಜೇತ ಎಂದು ಘೋಷಿಸಲ್ಪಟ್ಟರೂ, ಕಾಸರಗೋಡಿನ ಹುಡುಗ, ಪ್ರಸ್ತುತ ಐಪಿಎಲ್ ನಲ್ಲಿ ಬೆಂಗಳೂರು ತಂಡದ ಆಟಗಾರನಾದ ಮೊಹ್ಮದ್ ಅಜರುದ್ದೀನ್ ಭಾರತೀಯ ಕ್ರಿಕೆಟ್ ತಂಡದ ಗಮನ ಸೆಳೆದಿದ್ದಾನೆ, ಆಯ್ಕೆಗೆ ಕದ ತಟ್ಟಿದ್ದಾನೆ.

ವಿಕೆಟ್ ಕೀಪರ್ ಮತ್ತು ಮಧ್ಯ ಕ್ರಮಾಂಕದ ಬ್ಯಾಟರ್ ಆಗಿ ಕೇರಳ ತಂಡದ ಆಧಾರ ಸ್ತಂಭ ಎನಿಸಲ್ಪಟ್ಟ ಮೊಹ್ಮದ್ ಅಜರುದ್ದೀನ್ ರಣಜಿಯ ರನ್ನರ್ಸ್ ತಂಡದ ಊರುಗೋಲಾಗಿ ಮೆರೆದು, ಸೋಮವಾರ ಹುಟ್ಟೂರು ಕಾಸರಗೋಡಿನ ತಳಂಗರೆ ಆಗಮಿಸಿದರು. ಈ ವೇಳೆ ತಾಯ್ನೆಲದ ಬೆಂಬಲಿಗ ಅಭಿಮಾನಿಗಳು ಜ್ಯೂನಿಯರ್ ಅಜರುದ್ದೀನ್ ನನ್ನು ತೋಳಲ್ಲೇರಿಸಿ ಕೊಂಡಾಡಿ, ಹುಟ್ಟೂರ ಗೌರವಾಭಿನಂದನೆ ನೀಡಿದರು.ಕಾಸರಗೋಡು ನಗರಸಭಾ ವತಿಯಿಂದ ಈ ಗೌರವ, ಸ್ವಾಗತ ನೀಡಲಾಯಿತು. ನಗರಸಭಾಧ್ಯಕ್ಷ ಅಬ್ಬಾಸ್ ಬೀಗಂ ನೇತೃತ್ವದಲ್ಲಿ ನೀಡಿದ ಸ್ವಾಗತ ಕ್ರೀಡಾ ಪ್ರೋತ್ಸಾಹಕ್ಕೊಂದು ಉದಾತ್ತ ಉದಾಹರಣೆಯಾಯಿತು. ಕಾಸರಗೋಡಿಗೆ ಕಾಲಿಟ್ಟ ಅಜರುದ್ದೀನ್ ಅವರನ್ನು ತೆರೆದ ವಾಹನದಲ್ಲಿ ತಳಂಗರೆಗೆ ಮೆರವಣಿಗೆಯಲ್ಲಿ ಕರೆತರಲಾಯಿತು.

ಈ ಸಂದರ್ಭ ಮಾತನಾಡಿದ ಗಡಿನಾಡು ಕಾಸರಗೋಡಿನ ಕ್ರಿಕೆಟ್ ಕಲಿ ಮೊಹ್ಮದ್ ಅಜರುದ್ದೀನ್ ಮಾಧ್ಯಮಗಳ ಜತೆ ಮಾತನಾಡಿದರು. ಕೇರಳ ಕ್ರಿಕೆಟ್ ತಂಡ ದೇಶದ ಯಾವುದೇ ರಾಜ್ಯ ತಂಡದ ಜತೆಗೆ ಸ್ಪರ್ಧಿಸಿ, ಪೈಪೋಟಿ ನೀಡಿ ಗೆಲ್ಲುವ ಮಟ್ಟಕ್ಕೆ ಮುಟ್ಟಿದೆ. ಕೇರಳ ತಂಡವನ್ನು ಭಾರತೀಯ ಕ್ರಿಕೆಟ್ ನಲ್ಲಿ ಯಾರಿಗೂ ನಿರ್ಲಕ್ಷಿಸಲು ಸಾಧ್ಯವಿಲ್ಲ. ಮುಂಬರುವ ಐ.ಪಿಎಲ್ ತಂಡಕ್ಕೆ ಅರ್ಹರಾದ ಅನೇಕರು ಕೇರಳ ತಂಡದಲ್ಲಿದ್ದಾರೆ. ಇಂದೀಗ ರಣಜಿ ಫೈನಲ್ ನಲ್ಲಿ ಸೋತಿರಬಹುದು, ಆದರೆ ಇತಿಹಾಸದಲ್ಲೇ ಮೊದಲ ಬಾರಿಗೆ ಕೇರಳ ತಂಡ ಸೋಲದೇ, ಫೈನಲಿಗೇರಿದೆ ತಾನೇ..? ಮುಂದೆ ಫೈನಲ್ ಗೆದ್ದು, ಭಾರತೀಯ ಕ್ರಿಕೆಟಿನಲ್ಲಿ ಕೇರಳವೂ ನಿರ್ಣಾಯಕವಾಗಲಿದೆ…
– ಮೊಹ್ಮದ್ ಅಜರುದ್ದೀನ್, ಕಾಸರಗೋಡು( ಕೇರಳ ತಂಡದ ವಿಕೆಟ್ ಕೀಪರ್, ಮಧ್ಯ ಕ್ರಮಾಂಕದ ಬ್ಯಾಟರ್)

ಕಾಸರಗೋಡಿನ ಜೂನಿಯರ್ ತಂಡದ ಕ್ರಿಕೆಟ್ ಪ್ರತಿಭೆಯಾಗಿ ಬೆಳೆದ ಮೊಹ್ಮದ್ ಅಜರುದ್ದೀನ್ ಕುಟುಂಬವೇ ಕ್ರಿಕೆಟ್ ಪ್ರೀತಿಯ ಕುಟುಂಬ. 95ರ ದಶಕದಲ್ಲಿ ಭಾರತೀಯ ಕ್ರಿಕೆಟ್ ತಂಡದ ನಾಯಕನಾಗಿ ಮೆರೆಯುತ್ತಿದ್ದ ಮೊಹಮ್ಮದ್ ಅಜರುದ್ದೀನ್ ಅವರ ಮೇಲಣ ಅಭಿಮಾನದಿಂದಲೇ ಈ ಹುಡುಗನಿಗೂ ಅದೇ ನಾಮಕರಣ. ಆದರೆ ಈತ ಅದೇ ಹಾದಿಯಲ್ಲಿ ಕ್ಲಾಸಿಕ್ ಬ್ಯಾಟರ್ ಸಹಿತ ವಿಕೆಟ್ ಕೀಪರ್ ಆಗಿ ಕೇರಳವನ್ನು ಪ್ರಪ್ರಥಮ ಫೈನಲಿಗೇರಿಸಲು ಬೆನ್ನೆಲುಬಾದದ್ದು ಇತಿಹಾಸದ ಮುನ್ನುಡಿ..

 

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00