- ಮಧೂರು ಬ್ರಹ್ಮಕಲಶ : ಶಾಂತಿ, ಸುವ್ಯವಸ್ಥೆ ಕಾಪಾಡಲು ಪ್ರತ್ಯೇಕ ಸುರಕ್ಷಾ ವ್ಯವಸ್ಥೆಗೆ
ಹೈಕೋರ್ಟಿಗೆ ಮೊರೆ
ಕಾಸರಗೋಡಿನ ಮಧೂರು ಶ್ರೀಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಮಾ. 27ರಿಂದ ಎಪ್ರೀಲ್ 7ರ ತನಕ ನಡೆಯಲಿರುವ ಬ್ರಹ್ಮಕಲಶೋತ್ಸವ ಮತ್ತು ಮೂಡಪ್ಪ ಸೇವೆ ಹಾಗೂ ತನ್ನಿಮಿತ್ತ ಜರಗುವ ಕಾರ್ಯಕ್ರಮಗಳನ್ನು ಸುರಕ್ಷಿತವಾಗಿ ನಡೆಸಲು ಕೇರಳ ರಾಜ್ಯ ಪೋಲೀಸ್ ಇಲಾಖೆ ಪ್ರತ್ಯೇಕ ಸುರಕ್ಷಾ ವ್ಯವಸ್ಥೆಯ ಭದ್ರತೆ ಕೈಗೊಳ್ಳಬೇಕೆಂದು ಕೇರಳ ಹೈಕೋರ್ಟಿಗೆ ಮನವಿ ಸಲ್ಲಿಸಲಾಗಿದೆ.
ಬ್ರಹ್ಮಕಲಶ ಮತ್ತು ಮೂಡಪ್ಪ ಸೇವೆಯ ಯಶಸ್ವಿ ಕಾರ್ಯಕ್ರಮಗಳಿಗಾಗಿ ಭರದ ಸಿದ್ಧತೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಲು ವಿಶೇಷ ಗಮನ ಹರಿಸಬೇಕೆಂದು ವಿನಂತಿಸಲಾಗಿದೆ. ಬ್ರಹ್ಮಕಲಶೋತ್ಸವ ಮತ್ತು ಮೂಡಪ್ಪ ಸೇವೆಗೆ ಕೇಂದ್ರ ಸಚಿವರು, ಯತಿಶ್ರೇಷ್ಠರು, ಪ್ರಮುಖ ರಾಜಕಾರಣಿಗಳು, ಸಿನಿಮಾ ತಾರೆಯರು, ಖ್ಯಾತ ಕಲಾವಿದರು, ಬೃಹತ್ ಉದ್ಯಮಿಗಳ ಸಹಿತ ದೇಶ, ವಿದೇಶಗಳಿಂದ ಜನರು ಹರಿದು ಬರಲಿದ್ದು, ಈ ಹಿನ್ನೆಲೆಯಲ್ಲಿ ಪೋಲೀಸ್ ಸುರಕ್ಷಾ ಕ್ರಮ ಅನಿವಾರ್ಯವಾಗಿದೆ ಎಂದು ಹೈಕೋರ್ಟಿಗೆ ಸಲ್ಲಿಸಲಾದ ಮನವಿ ಉಲ್ಲೇಖಿಸಿದೆ. ಬ್ರಹ್ಮಕಲಶೋತ್ಸವ ಸಮಿತಿ ಸದಸ್ಯ ಸಂತೋಷ ಕುಮಾರ್ ಚೆಂಬರಿಕ ಎಂಬವರು ಮನವಿ ಸಲ್ಲಿಸಿದ್ದು, ಈ ಕುರಿತು ಹೈಕೋರ್ಟು ರಾಜ್ಯ ಸರಕಾರದಿಂದ ವರದಿ ಬಯಸಲಿದೆ.
ಬೃಹತ್ ಬ್ರಹ್ಮಕಲಶೋತ್ಸವ ನಡೆಯುವಾಗ ಲಕ್ಷಾಂತರ ಜನರು ನೆರೆಯಲಿದ್ದಾರೆ. ಈ ಸಂದರ್ಭ ಸಾಮಾಜಿಕ ಶಾಂತಿ ಸುವ್ಯವಸ್ಥೆ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಹೈಕೋರ್ಟಿನ ಮೊರೆ ಹೋಗಲಾಗಿದೆ.