ಕೇರಳದ ಪ್ರಸಿದ್ಧ ಶ್ರೀಶಬರಿಮಲೆ ಅಯ್ಯಪ್ಪ ಸನ್ನಿಧಾನದಲ್ಲಿ ಅಯ್ಯನ ದರ್ಶನದ ದಾರಿ ವ್ಯವಸ್ಥೆಗಳನ್ನು ಪರಿಷ್ಕರಿಸಲಾಗಿದೆ. ತಿರುವಾಂಕೂರು ದೇವಸ್ವಂಮಂಡಳಿ ಪ್ರಾಯೋಗಿಕವಾಗಿ ದರ್ಶನ ದಾರಿ ಪರಿಷ್ಕರಿಸಿದ್ದು, ಸಮಸ್ಯೆಗಳಿಲ್ಲದೇ ಇದು ಯಶಸ್ವಿ ಎನಿಸಿದರೆ ಈ ಕ್ರಮವನ್ನೇ ಖಾಯಂಗೊಳಿಸುವುದೆಂದು ತಿಳಿಸಿದೆ.
ನೂತನ ಪರಿಷ್ಕಾರದಂತೆ ಹದಿನೆಂಟು ಮೆಟ್ಟಿಲೇರಿದ ಕೂಡಲೇ ಸಿಗುವ ಧ್ಜಜಸ್ತಂಭದ ಬುಡದಿಂದ ಎರಡು ಕವಲುಗಳಾಗಿ ವಿಭಜಿಸಲ್ಪಟ್ಟು ಭಕ್ತರು ದೇವದರ್ಶನ ಪಡೆಯಬೇಕಿದೆ. ಮಾ.15ಕ್ಕೆ ಆರಂಭವಾಗುವ ಮಾಸಿಕ (ಮೀನಮಾಸ)ಪೂಜೆಗೆ ನಡೆ ತೆರೆಯುವಾಗ ಈ ಪರಿಷ್ಕಾರವನ್ನು ಜಾರಿಗೆ ತಂದೂ ಪ್ರಾಯೋಗಿಕ ಪರೀಕ್ಷೆ ನಡೆಸಲಾಗುವುದು. ಮುಂಬರುವ ವಿಷು ಪೂಜಾ ಸಂದರ್ಭದಲ್ಲೂ ಇದು ಮುಂದುವರಿಯಲಿದೆ ಎಂದು ಟಿಡಿಬಿ ಅಧ್ಯಕ್ಷ ಪಿ.ಎಸ್.ಪ್ರಶಾಂತ್ ಸುದ್ದಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಭಕ್ತರಿಗೆ ನೀಡುವ ನೂತನ ದೇವದರ್ಶನ ವಿಧಾನಗಳಿಂದಾಗಿ 20ರಿಂದ 25 ಸೆಕೆಂಡುಗಳ ದೇವರ ದರ್ಶನ ಸಾಧ್ಯವೆಂದೂ, ಈ ಹಿಂದೆ ಕೇವಲ ನಾಲ್ಕೈದು ಸೆಕೆಂಡುಗಳಷ್ಟೇ ದರ್ಶನ ದೊರೆಯುತ್ತಿತ್ತೆಂದು ಅವರು ವಿವರಿಸಿದ್ದಾರೆ.
ಈ ಹಿಂದೆ ಭಕ್ತ ಜನದಟ್ಟಣೆಯಿಂದಾಗಿ ಬೇರೆ, ಬೇರೆ ರಾಜ್ಯಗಳಿಂದ ಬರುವ ಭಕ್ತರು ತೃಪ್ತಿಕರವಾದ ದರ್ಶನ ಸಿಗದೇ ನೊಂದುಕೊಳ್ಳುತ್ತಿದ್ದರು. ಅದಕ್ಕಿರುವ ಪರಿಹಾರವೇ ನೂತನ ವಿಧಾನ. ಧ್ವಜಸ್ತಂಭದ ಬುಡದಿಂದ ಭಕ್ತರ ಸರದಿ ಸಾಲು ಎರಡಾಗಿ ಕವಲೊಡೆದು ಸಾಗಲಿದ್ದು, ಇದರ ಅಂತಿಮ ಕೆಲಸ ನಡೆಯುತ್ತಿದೆ ಎಂದು ದೇವಸ್ವಂ ಮಂಡಳಿ ಪ್ರಕಟಿಸಿದೆ.