- ಪೈವಳಿಕೆ ಮಂಡೆಕಾಪು ಬಾಲಕಿ ನಾಪತ್ತೆ ಪ್ರಕರಣ : ಕೇಸ್ ಫೈಲ್ ಸಹಿತ ಹೈಕೋರ್ಟಿಗೆ ನಾಳೆ ಹಾಜರಾಗಲು ತನಿಖಾಧಿಕಾರಿಗೆ ಆದೇಶ
- ಪ್ರಕರಣದ ತನಿಖೆಯಲ್ಲಿ ಪೊಲೀಸ್ ನಿರ್ಲಕ್ಷ್ಯವನ್ನು ಪ್ರಶ್ನಿಸಿದ ಹೈಕೋರ್ಟು, ವಿಐಪಿ ಮನೆಯ ಹೆಣ್ಮಗಳಾಗಿದ್ದರೆ ಇಷ್ಟು ವಿಳಂಬಿಸುತ್ತಿದ್ದೀರೇ ಎಂದು ಪ್ರಶ್ನೆ
ಕುಂಬಳೆ: ಪೈವಳಿಕೆ ಮಂಡೆಕಾಪುವಿನಿಂದ 26ದಿನಗಳ ಹಿಂದೆ ನಾಪತ್ತೆಯಾದ 15ರ ಹರೆಯದ ವಿದ್ಯಾರ್ಥಿನಿ ಮತ್ತು ಸ್ಥಳೀಯ ನಿವಾಸಿ ರಿಕ್ಷಾ ಚಾಲಕ ನೇಣು ಬಿಗಿದು ಆತ್ಮಹತ್ಮೆ ಗೈದ ಸ್ಥಿತಿಯಲ್ಲಿ ಪತ್ತೆಯಾದ ಘಟನೆಗೆ ಸಂಬಂಧಿಸಿ ಕೇರಳ ಹೈಕೋರ್ಟು ತನಿಖೆ ನಡೆಸಿದ ಕುಂಬಳೆ ಸರ್ಕಲ್ ಅಧಿಕಾರಿಯನ್ನು ತರಾಟೆಗೆತ್ತಿಕೊಂಡಿದೆ. ಪ್ರಕರಣದ ಸಮಗ್ರ ತನಿಖಾ ವರದಿಯ ಕೇಸ್ ಫೈಲ್ ಸಹಿತ ಮಾ.11ರಂದು ಖುದ್ದು ಹೈಕೋರ್ಟಿಗೆ ಹಾಜರಾಗಿ ವರದಿ ಒಪ್ಪಿಸಬೇಕೆಂದು ನ್ಯಾಯಾಲಯ ಆಜ್ಞಾಪಿಸಿದೆ.
ಪ್ರಕರಣದ ಕುರಿತು ದೂರು ದಾಖಲಾದರೆ ದೂರಿನ ಕುರಿತು ಶ್ರೀಮಂತ, ಬಡವ, ವಿಐಪಿ-ಸಾಮಾನ್ಯ ಎಂಬ ಪರಿಗಣನೆ ಇಲ್ಲದೇ ಪ್ರಾಮಾಣಿಕ ತನಿಖೆ ನಡೆಸಬೇಕೆಂದೂ, ಪೈವಳಿಕೆಯ ಮಂಡೆಕೋಲಿನ ಬಾಲಕಿ ಕಾಣೆಯಾದ ಘಟನೆಯ ತನಿಖೆಯಲ್ಲಿ ಪೋಲೀಸ್ ನಿರ್ಲಕ್ಷ್ಯ ಉಂಟಾಗಿದೆ ಎಂದೂ
ವಿ.ಐ.ಪಿಯೊಬ್ಬರ ಮನೆಯ ಹೆಣ್ಣುಮಗಳು ಕಾಣೆಯಾಗಿದ್ದರೆ ನೀವು ಇಷ್ಟೊಂದು ನಿರ್ಲಕ್ಷ್ಯದಿಂದ ತನಿಖೆ ನಡೆಸುತ್ತಿದ್ದಿರೇ..?ಎಂದು ಹೈಕೋರ್ಟು ಪ್ರಶ್ನಿಸಿದೆ.
ಇದೇ ಸಂದರ್ಭ ಫೆ.11ರಂದು ಕಾಣೆಯಾಗಿ ಮಾ.9ರಂದು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ 15ರ ಬಾಲಕಿ ಮತ್ತು 42ರ ರಿಕ್ಷಾ ಚಾಲಕರು ಆತ್ಮಹತ್ಯೆ ನಡೆಸಿ, 20ಕ್ಕೂ ಅಧಿಕ ದಿವಸಗಳಾಗಿವೆ ಎಂದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿದುಬಂದಿದೆ. ಇವರ ಸಾವು ಆತ್ಮಹತ್ಯೆ ಮೂಲಕ ನಡೆದಿದೆಯೆಂದು ಉಲ್ಲೇಖಿಸಲಾಗಿದೆ. ಕೊಳೆತು ಹೋಗಿದ್ದ ಶರೀರದ ಅಶಯವಗಳನ್ನು ಫಾರೆನ್ಸಿಕ್ ಪರೀಕ್ಷೆಗೆ ಕಳುಹಿಸಲಾಗಿದೆ.
ಬಾಲಕಿ ನಾಪತ್ತೆಯಾದ ಪ್ರಕರಣದಲ್ಲಿ ಆಕೆಯ ತಾಯಿ ಮಗಳನ್ನು ಪತ್ತೆ ಹಚ್ಚಿ ಕೊಡುವಂತೆ ಹೈಕೋರ್ಟಿಗೆ ದೂರು ಸಲ್ಲಿಸಿದ್ದರು. ಇದನ್ನು ಪರಿಗಣಿಸಿದ ಕೋರ್ಟು , ಇಡೀ ಪ್ರಕರಣದ ತನಿಖಾ ವಿಳಂಬವನ್ನು ಪ್ರಶ್ನಿಸಿ, ತನಿಖಾಧಿಕಾರಿಯನ್ನು ಕೋರ್ಟಿಗೆ ಹಾಜರಾಗಲು ಆದೇಶೀಸಿದೆ.