ಮಂಗಳೂರು: ಭಾಷಾವಾರು ಪ್ರಾಂತ್ಯ ರಚನೆಯ ವೇಳೆಗೆ ತುಳುನಾಡು ಕತ್ತರಿಸಲ್ಪಟ್ಟಿದ್ದು, ದೇಶದ ಹಲವೆಡೆ ಸಹಿತ, ಪಕ್ಕದ ಗೋವಾ ಕೂಡಾ ಪ್ರತ್ಯೇಕ ರಾಜ್ಯವಾಗುವುದಾದರೆ ತುಳುನಾಡನ್ನು ಒಂದುಗೂಡಿಸಿ ಪ್ರತ್ಯೇಕ ತುಳು ರಾಜ್ಯ ಯಾಕೆ ನಿರ್ಮಿಸಬಾರದೆಂಬ ಪ್ರಶ್ನೆ ಮತ್ತೆ ಮೊಳಗಿದೆ. ಮಂಗಳೂರಿನಲ್ಲಿ ತುಳು ಕೂಟ ಕುಡ್ಲ ಇದರ 50ನೇ ವರ್ಷಾಚರಣೆ “ಬಂಗಾರ್ ಪರ್ಬ” ದಲ್ಲಿ ತುಳು ಭಾಷೆ 8ನೇ ಪರಿಚ್ಛೇದಕ್ಕೆ ಸೇರ್ಪಡೆಯೊಂದಿಗೆ ಪ್ರತ್ಯೇಕ ತುಳು ರಾಜ್ಯ ನಿರ್ಮಾಣವಾಗಬೇಕೆಂದು ಧರ್ಮದರ್ಶಿ , ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ನುಡಿದರು.
ಅವಿಭಜಿತ ದಕ್ಷಿಣಕನ್ನಡ ಜಿಲ್ಲೆ ಒಳಗೊಂಡಂತೆ ಚಿಕ್ಕಮಗಳೂರು, ಕೊಡಗು ಮತ್ತು ಕಾಸರಗೋಡಿನಾದ್ಯಂತ ಇಂದಿಗೂ ತುಳುವರು ಅತ್ಯಧಿಕ ಇದ್ದಾರೆ. ಈ ನೆಲದ ಪೂರ್ವ ಪರಂಪರೆಯ ಚರಿತ್ರೆಗಳೆಲ್ಲವೂ ತುಳುನಾಡ ಇತಿಹಾಸವಾಗಿದೆ.ಆದರೆ ಈ ನೆಲವನ್ನು ಕರ್ನಾಟಕ -ಕೇರಳ ಎಂದು ಕತ್ತರಿಸಿ ತುಳುನಾಡಿಗೆ ಅನ್ಯಾಯವಾಗಿದೆ. ತುಳು ಭಾಷೆ, ಸಂಸ್ಕೃತಿಗೆ ಪೋಷಣೆ ಸಿಕ್ಕಿ, ಅದರ ಅಭ್ಯುದಯದ ಜತೆ ತುಳುನಾಡು ಅಭಿವೃದ್ಧಿ ಕಾಣಬೇಕಿದ್ದರೆ ಪ್ರತ್ಯೇಕ ರಾಜ್ಯ ನಿರ್ಮಾಣ ಅಗತ್ಯ. ಅದಕ್ಕಾಗಿ ಆಂದೋಲನ ನಡೆಯಬೇಕೆಂದು ಹರಿಕೃಷ್ಣ ಪುನರೂರು ಅಭಿಪ್ರಾಯಪಟ್ಟರು.
ಮಂಗಳೂರು ಪುರಭವನದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಎ.ಸಿ.ಭಂಡಾರಿ, ಕರಾವಳಿ ಲೇಖಕಿ, ವಾಚಕಿಯರ ಸಂಘದ ಅಧ್ಯಕ್ಷೆ ಶಕುಂತಳಾ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್, ಮರೋಳಿ ಸೂರ್ಯನಾರಾಯಣ ದೇವಸ್ಥಾನದ ಗಣೇಶ್ ಶೆಟ್ಟಿ, ಜಿಲ್ಲಾ ಮೂರ್ತೇದಾರರ ಮಹಾಮಂಡಲ ನಿರ್ದೇಶಕ ವಿಜಯಕುಮಾರ್ ಸೊರಕೆ, ಆತ್ಮಶಕ್ತಿ ವಿವಿದ್ದೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್, ಹರಿಕಥಾ ಪರಿಷತ್ ನ ಅಧ್ಯಕ್ಷ ಮಹಾಬಲ ಶೆಟ್ಟಿ ಕೂಡ್ಲು, ತುಳುಕೂಟದ ಪದಾಧಿಕಾರಿ ಬಿ.ಪದ್ಮನಾಭ ಕೋಟ್ಯಾನ್, ರವಿ ಅಲೆವೂರಾಯ ವರ್ಕಾಡಿ ಮೊಧಲಾದವರು ಉಪಸ್ಥಿತರಿದ್ದರು.
ತುಳುಕೂಟದ ಅಧ್ಯಕ್ಷೆ ಹೇಮಾ ದಾಮೋದರ ನಿಸರ್ಗ ಅಧ್ಯಕ್ಷತೆ ವಹಿಸಿದ್ದರು. ಭಾಸ್ಕರ ರೈ ಕುಕ್ಕುವಳ್ಳಿ ಕಾರ್ಯಕ್ರಮ ನಿರೂಪಿಸಿದರು.
ಅವಿಭಜಿತ ದ.ಕ ಜಿಲ್ಲೆ ಮತ್ತು ಕಾಸರಗೋಡನ್ನೊಳಗೊಂಡ ಭೂಪ್ರದೇಶ ತೌಳವಭೂಮಿಯಾಗಿದ್ದು, ಇದನ್ನು ಪ್ರತ್ಯೇಕ ತುಳುನಾಡನ್ನಾಗಿಸುವ ಕೂಗು ಹಿಂದಿನಿಂದಲೇ ಕೇಳಿ ಬರುತಿತ್ತು. ಆದರೆ ಕನ್ನಡ -ಮಲಯಾಳಂ ಭಾಷಾಡಳಿತದ ಪ್ರಭಾವ ಮುಖೇನ ತುಳು ಸಂಘಟನೆಗಳ ಹೋರಾಟ ಬಲಗೊಂಡಿರಲೇ ಇಲ್ಲ . ಪರಿಣಾಮ ತುಳು ಉಭಯ ರಾಜ್ಯದಲ್ಲಿ ಹಂಚಲ್ಪಟ್ಟು,ದಿನೇ ದಿನೇ ಕ್ಷೀಣಿಸುತ್ತಿದೆ. ಒಂದು ಭಾಷೆಯೊಂದಿಗೆ ಒಂದು ಸಂಸ್ಕೃತಿಯ ನಾಶ ನಮ್ಮ ಕಣ್ಣೆದುರೇ ನಡೆಯುತ್ತಿದೆ…