ಕೇರಳದ ಮುಂಬರುವ ಸ್ಥಳೀಯಾಡಳಿತ ಚುನಾವಣೆಯನ್ನು ಬಿಜೆಪಿ ಕೇಂದ್ರ ಘಟಕ ಗಂಭೀರವಾಗಿ ಪರಿಗಣಿಸಿದೆ. ಗರಿಷ್ಟ ಮತ ಪ್ರಮಾಣ ಪಡೆಯುವುಜರ ಜತೆ ಈಗಿರುವುದಕ್ಕಿಂತ ದುಪ್ಪಟ್ಟು ಸ್ಥಾನ ಪಡೆಯಬೇಕೆಂಬ ಆದೇಶವನ್ನು ಕೇರಳ ಘಟಕಕ್ಕೆ ನೀಡಿದೆ. ಈ ನಿಟ್ಟಿನಲ್ಲಿ ವಿಜಯ ಸಾಧ್ಯತೆಗಳ ಅಭ್ಯರ್ಥಿಗಳನ್ನು ಮೊದಲೇ ನಿರ್ಣಯಿಸಿ ಚುನಾವಣಾ ಪ್ರಕ್ರಿಯೆ ಆರಂಭಿಸುವಂತೆ ಕೇಂದ್ರ ಘಟಕ ರಾಜ್ಯಕ್ಕೆ ಸಂದೇಶ ರವಾನಿಸಿದೆ.
ಮುಂಬರುವ ಸ್ಥಳೀಯಾಡಳಿತದ ತ್ರಿಸ್ತರ ಪಂಚಾಯತ್ ಚುನಾವಣೆಯಲ್ಲಿ ಕೇರಳದ ಎಲ್ಲಾ ಕಡೆಯೂ ಸ್ಪರ್ಧಿಸಿ, ಗರಿಷ್ಟ ಸೀಟುಗಳನ್ನು ಗೆಲ್ಲುತ್ತಾ ಮುಂಬರುವ ವಿಧಾನಸಭಾ ಚುನಾವಣೆಗೆ ಈ ಚುನಾವಣೆಯನ್ನೇ ಬುನಾದಿಯಾಗಿ ಪರಿಗಣಿಸಬೇಕೆಂದು ಕೇರಳದ ಕೊಚ್ಚಿಯಲ್ಲಿ ಮಾ.10ರಂದು ನಡೆದ ಬಿಜೆಪಿ ಕೇರಳ ಪ್ರಾಂತ ಕೋರ್ ಕಮಿಟಿ ಸಭೆ ನೇತಾರರಿಗೆ ಸಲಹೆ ಇತ್ತಿದೆ.
ಈ ಕುರಿತಾಗಿ ಕೇಂದ್ರ ಬಿಜೆಪಿ ಘಟಕ ಕೇರಳ ಘಟಕಕ್ಕೆ ಸ್ಪಷ್ಟ ಸಂದೇಶ ನೀಡಿದ್ದು, ಸ್ಥಳೀಯಾಡಳಿತ ಚುನಾವಣೆಯಲ್ಲಿ ಗರಿಷ್ಟ ಸೀಟು ಪಡೆಯಲೇಬೇಕೆಂದು ಆದೇಶವಿತ್ತಿದೆ.
ಕೇಂದ್ರ ಘಟಕದ ಆದೇಶದಂತೆ ಕೊಚ್ಚಿಯಲ್ಲಿ ನಡೆದ ಕೋರ್ ಕಮಿಟಿ ಸಭೆ ಸ್ಥಳೀಯಾಡಳಿತ ಚುನಾವಣೆಯನ್ನೆದುರಿಸುವ ಮತ್ತು ಗರಿಷ್ಟ ಫಲಿತಾಂಶ ಪಡೆಯುವ ಕುರಿತು ಚರ್ಚೆ ನಡೆಸಿದೆ. ಗ್ರಾ ಪಂ, ಬ್ಲಾಕ್.ಪಂ, ಜಿ.ಪಂ ಮತ್ತು ನಗರಸಭೆಗಳ ಎಲ್ಲಾ ವಾರ್ಡಿಗೂ ಎನ್.ಡಿ.ಎ ಅಭ್ಯರ್ಥಿಗಳು ಸ್ಪರ್ಧಿಸಿ, ಮತ ಪ್ರಮಾಣವನ್ನು ಗಣನೀಯ ಹೆಚ್ಚಿಸಲು ಸಭೆ ನಿರ್ಧರಿಸಿದೆ.
ಜಪಪ್ರಿಯರಾದ ಬಹುಜನ ಸಮ್ಮತಿಯ ಸಾರ್ವಜನಿಕ ವಲಯದ ಪ್ರಮುಖರನ್ನು ಎನ್.ಡಿ.ಎ ಅಭ್ಯರ್ಥಿಗಳನ್ನಾಗಿಸಬೇಕು ಮತ್ತು ಕಾರ್ಯಕರ್ತರು ಅವರ ಗೆಲುವಿಗೆ ಪಣತೊಟ್ಟು ದುಡಿಯಬೇಕೆಂದು ಸಭೆ ನಿರ್ದೇಶಿಸಿದೆ. ಈಗಾಗಲೇ ಗೆದ್ದಿರುವ ವಾರ್ಡುಗಳನ್ನು ಯಾವ ಕಾರಣಕ್ಕೂ ಕಳೆದುಕೊಳ್ಳದೇ , ಬಹುಮತ ಹೆಚ್ಚಿಸಿ ಉಳಿಸಿಕೊಳ್ಳಬೇಕು ಮತ್ತು ಎನ್.ಡಿ.ಎ ಗಾಗಿ ಯಾರೇ ಸ್ಪರ್ಧಿಸಿದರೂ ಅವರ ಗೆಲುವಿಗೆ ಹಾಲಿ ಜನಪ್ರತಿನಿಧಿಗಳು ಶಕ್ತಿಮೀರಿ ದುಡಿಯಬೇಕೆಂದು ಸಭೆ ನಿರ್ದೇಶಿಸಿದೆ. ಈ ನಿರ್ಧಾರಗಳನ್ನು ಕಾರ್ಯಗತಗೊಳಿಸಲು ಕೇರಳದ ಎಲ್ಲಾ ಬಿಜೆಪಿ ಜನಪ್ರತಿನಿಧಿಗಳ ಸಮಾವೇಶ ನಡೆಸಲಾಗುನುದೆಂದೂ ಸಭೆ ತೀರ್ಮಾನಿಸಿದೆ. ಚುನಾವಣೆಗಿಂತ ಮುನ್ನ ಎನ್.ಡಿ.ಎ ಬಲವರ್ಧನೆಗಾಗಿ ಪ್ರಾದೇಶಿಕ ಸಮಾವೇಶ ನಡೆಸುವಂತೆಯೂ ಸಭೆ ನಿರ್ಣಯಿಸಿದೆ.