ಕೊಚ್ಚಿ: ಅನ್ಯ ರಾಜ್ಯ ಕಾರ್ಮಿಕರೆಂಬ ಹೆಸರಲ್ಲಿ ಬರುವ ಅಪರಿಚಿತ,ಉತ್ತರ ಭಾರತೀಯ ಮತ್ತು ಬಾಂಗ್ಲಾ ಮೂಲದವರಿಗೆ ನಕಲಿ ಗುರುತುಚೀಟಿ(ಆಧಾರ್ ಕಾರ್ಡು) ಒದಗಿಸುತ್ತಿದ್ದ ವ್ಯಕ್ತಿಯನ್ನು ಕೇರಳದಲ್ಲಿ ಬಂಧಿಸಲಾಗಿದೆ.
ಕೊಚ್ಚಿ ಪೆರುಂಬಾವೂರ್ ನಲ್ಲಿ ಮೊಬೈಲ್ ಶಾಪ್ ಕೇಂದ್ರೀಕರಿಸಿ ನಕಲಿ ಆಧಾರ್ ಕಾರ್ಡು ನಿರ್ಮಿಸಿ ಕೊಡುತ್ತಿದ್ದ ಬಾಂಗ್ಲಾ ದೇಶದ ನಿವಾಸಿ ಹರ್ಜೂಲ್ ಇಸ್ಲಾಂ ಎಂಬಾತ ಬಂಧಿತ ಆರೋಪಿಯಾಗಿದ್ದಾನೆ.
ಪೆರುಂಬಾವೂರಿನಲ್ಲಿ ನೆಲೆಸಿರುವ ಉತ್ತರ ಭಾರತೀಯ ಕಾರ್ಮಿಕರ ನಡುವೆ ಮಾರಕವಾದ ಮಾದಕ ವಸ್ತು ಮಾರಾಟ, ಉಪಯೋಗ ನಡೆಯುತ್ತಿದ್ದು, ಇದನ್ನು ತಡೆಗಟ್ಟಲು ನಡೆಸಿದ ಕಾರ್ಯಾಚರಣೆಯ ವೇಳೆ ನಕಲಿ ಆಧಾರ್ ಕಾರ್ಡು ನಿರ್ಮಾಣ ಬೆಳಕಿಗೆ ಬಂದಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಈತ ಪೆರುಂಬಾವೂರಿನ ಖಾಸಗಿ ಬಸ್ ನಿಲ್ದಾಣದ ಬಳಿ ಅಸ್ಲಾಂ ಮೊಬೈಲ್ಸ್ ಎಂಬ ಅಂಗಡಿ ಹೊಂದಿದ್ದು, ಇಲ್ಲಿಂದ ನಕಲಿ ಆಧಾರ್ ಕಾರ್ಡು ನಿರ್ಮಾಣಕ್ಕೆ ಬಳಸಿದ ಲ್ಯಾಪ್ ಟೋಪ್ , 55ಸಾವಿರ ರೂ ನಗದು ವಶಪಡಿಸಲಾಗಿದೆ.
ಮೊಬೈಲ್ ಶಾಪಿಗೆ ಸಿಂ ಖರೀದಿಗೆ ಬರುವ ಗ್ರಾಹಕರು ನೀಡುತಿದ್ದ ಅಸಲಿ ಆಧಾರ್ ಕಾರ್ಡನ್ನು ಬಳಸಿ ಚಿತ್ರ, ವಿಳಾಸ ಬದಲಿಸಿ ನಕಲಿ ಆಧಾರ್ ನಿರ್ಮಿಸುತ್ತಿದ್ದನು. ಇತ್ತೀಚೆಗೆ ಪೆರುಂಬಾವೂರಿನಲ್ಲಿ ನಕಲಿ ಆಧಾರ್ ಕಾರ್ಡು ಉಪಯೋಗಿಸಿ ವಾಸಿಸಿದ್ದ 27ಮಂದಿ ಬಾಂಗ್ಲಾ ಪ್ರಜೆಗಳನ್ನು ಬಂಧಿಸಲಾಗಿತ್ತು.