ಕುಂಬಳೆ : ಪೈವಳಿಕೆ ಯ ಮಂಡೆಕಾಪು ಎಂಬಲ್ಲಿಂದ 26ದಿನಗಳ ಹಿಂದೆ ಕಾಣೆಯಾಗಿದ್ದ 15ರ ಹರೆಯದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಮತ್ತು ಸ್ಥಳೀಯ ನಿವಾಸಿ, ರಿಕ್ಷಾ ಚಾಲಕ ಪ್ರದೀಪ್ (42)ರ ಮೃತದೇಹ ಮನೆಯ ಸಮೀಪದ ನಿರ್ಜನ ಕಾಡಲ್ಲಿ ನೇಣುಬಿಗಿದು ಆತ್ಮಹತೈಗೈದ ಸ್ಥಿತಿಯಲ್ಲಿ ಆದಿತ್ಯವಾರ ಬೆಳಿಗ್ಗೆ ಪತ್ತೆಯಾದ ಪ್ರಕರಣದ ಹಿನ್ನೆಲೆಯಲ್ಲಿ 15ರ ಬಾಲೆಯನ್ನೇಕೆ 42ರ ರಿಕ್ಷಾಚಾಲಕ ಪ್ರೇಮ ವಾಂಛೆಗೆ ಬಲಿಪಶು ಮಾಡಿದ ಎಂಬ ಪ್ರಶ್ನೆ ನಾಗರಿಕರನ್ನು ಕಾಡುತ್ತಿದೆ..
ಇದೇ ವೇಳೆ ನಾಪತ್ತೆಯಾಗಿ 26ದಿನ ಸಂದರೂ ಮನೆಯಿಂದ ಕೇವಲ 200ಮೀಟರ್ ದೂರದ ಕಾಡಲ್ಲಿದ್ದ ಜೋಡಿಗಳ ಮೃತದೇಹವನ್ನು ಈ ಮೊದಲೇ ಏಕೆ ಪತ್ತೆ ಹಚ್ಚಲಾಗಿಲ್ಲವೆಂದೂ ನಾಗರಿಕರು ಪ್ರಶ್ನಿಸಿದ್ದಾರೆ.
ಪೈವಳಿಕೆ ಮಂಡೆಕಾಪಿನ ಬಾಲಕಿ 10ನೇ ತರಗತಿ ಪರೀಕ್ಷೆ ಸಮೀಪಿಸುವಾಗ ಮನೆಯಿಂದ ರಾತ್ರಿ ವೇಳೆ ನಾಪತ್ತೆಯಾಗಿದ್ದಳು. ಬಾಲಕಿ ನಾಪತ್ತೆಯಾಗಿ 25 ದಿನಗಳು ಸಂದರೂ , ತನಿಖೆಯಲ್ಲಿ ಯಾವುದೇ ಸುಳಿವಿರಲಿಲ್ಲ. ಇದೇ ಸಂದರ್ಭ ಸ್ಥಳೀಯ ರಿಕ್ಷಾ ಚಾಲಕ ಪ್ರದೀಪ ಕೂಡಾ ನಾಪತ್ತೆಯಾಗಿದ್ದನು. ಈ ಹಿನ್ನೆಲೆಯಲ್ಲಿ ಬಾಲಕಿಯ ಹೆತ್ತವರು ಬಾಲಕಿಯನ್ನು ಆತ ಅಪಹರಿಸಿದ ಶಂಕೆ ಪ್ರಕಟಿಸಿದ್ದರು. ಬಳಿಕ ಪೋಲೀಸರು ನಡೆಸಿದ ತನಿಖೆಯಲ್ಲಿ ಇವರ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಆದರೆ ಇವರ ಮೊಬೈಲ್ ಟವರ್ ಲೋಕೇಶನ್ ಇಂದು ಮೃತದೇಹ ಪತ್ತೆಯಾದ ಸ್ಥಳವನ್ನೇ ಸೂಚಿಸಿತ್ತು. ಈ ಪರಿಸರದಲ್ಲಿ ಈ ಹಿಂದೆ ನಾಗರಿಕ ಸಹಾಯದಿಂದ ಪೋಲೀಸರು ಹುಡುಕಾಡಿದ್ದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ. ತನ್ಮಧ್ಯೆ ತನಿಖೆಯನ್ನು ಕುಂಬಳೆ ಪೋಲೀಸರ ಬದಲಿಗೆ ಕ್ರೈಂಬ್ರಾಂಚ್ ಗೆ ನೀಡುವಂತೆ ಬಾಲಕಿ ಮನೆಯವರು ಒತ್ತಾಯಿಸಿದ್ದರು. ತನಿಖೆ ಊರ್ಜಿತಗೊಳಿಸಿ ಬಾಲಕೀಯನ್ನು ಪತ್ತೆ ಹಚ್ಚಿ ಕೊಡೂವಂತೆ ಸರಕಾರವನ್ನು ವಿನಂತಿಸಲು ಶಾಸಕರ ಮೊರೆ ಹೋಗಲಾಗಿತ್ತು.
ಈ ಹಿನ್ನೆಲೆಯಲ್ಲಿ ಜಿಲ್ಲಾ ಪೋಲೀಸ್ ವರಿಷ್ಟರ ನಿರ್ದೇಶನದಂತೆ ವಿವಿಧ ಠಾಣೆಗಳಿಂದ ಕರೆಸಿಕೊಂಡ 50ಪೋಲೀಸರು ಹಾಗೂ ನೂರಾರು ನಾಗರಿಕರು ಸೇರಿ ಟವರ್ ಲೋಕೇಶನ್ ತೋರಿಸಿದ ಜಾಗವನ್ನೇ ಹುಡುಕಿದಾಗ ಅಕೇಶಿಯ ಮರದಲ್ಲಿ ಇಬ್ಬರೂ ಆತ್ಮಹತ್ಯೆ ಮಾಡಿದ ಸ್ಥಿತಿಯಲ್ಲಿ ಪತ್ತೆಯಾದರು. ಪರಿಸರದಿಂದ ಇಬ್ಬರ ಮೊಬೈಲ್ ಮತ್ತು ಚಾಕಲೇಟೊಂದು ದೊರೆತಿದೆ. ಇವರಿಬ್ಬರೂ ಕೆಲದಿನಗಳ ಹಿಂದೆಯೇ ಆತ್ಮಹತ್ಯೆ ಮಾಡಿದ್ದು ಮರಣೋತ್ತರ ಪರೀಕ್ಷಾ ವರದಿಯ ಬಳಿಕ ಈ ಕುರಿತಾದ ಮಾಹಿತಿ ದೊರೆಯಲಿದೆ.
ಇಬ್ಬರೂ ನಾಪತ್ತೆಯಾದ ಬಳಿಕ ಪೋಲೀಸರು ತನಿಖೆ ನಡೆಸುವಾಗ ದ.ಕ ಜಿಲ್ಲೆಯ ಇವರ ಸಂಬಂಧಿಕರಿಗೆ ಪ್ರದೀಪ ಕಳಿಸಿದ, ಇವರಿಬ್ಬರೂ ಜತೆಯಾಗಿ ಬೇರೆ, ಬೇರೆ ಕಡೆ ಇದ್ದ 90ರಷ್ಟು ವಾಟ್ಸಪ್ ಚಿತ್ರಗಳು ದೊರೆತಿತ್ತು. ಈ ಮೂಲಕ ಇದೊಂದು ಪ್ರೇಮಪ್ರಕರಣವೆಂಬ ಗುಮಾನಿಗೆ ಪೋಲೀಸರು ಬಂದಿದ್ದರು. ಪ್ರದೀಪ ಬಾಲಕಿಯ ಮನೆಯವರ ಜತೆ ಸಲುಗೆ ಹೊಂದಿದ್ದ ರಿಕ್ಷಾ ಚಾಲಕ. ಈ ಸಲುಗೆಯಿಂದಲೇ ಅಪ್ರಾಪ್ತಳನ್ನು ಪ್ರೀತಿಯ ಬಲೆಗೆ ಕೆಡವಿದ. ಆದರೆ ಪ್ರೇಮದ ಸಾಕ್ಷಾತ್ಕಾರಕ್ಕೆ ಜತೆಯಾಗಿ ಬದುಕದೇ, ಇಬ್ಬರೂ ಮನೆಯ ಸಮೀಪದಲ್ಲೇ ಆತ್ಮಹತ್ಯೆ ಮಾಡಿದ್ದೇಕೆ??
ಈ ಪ್ರಶ್ನೆಗೆ ಯಾರಲ್ಲೂ ಉತ್ತರ ಇಲ್ಲ. ಆದರೆ 15ರ ಬಾಲಕಿಯನ್ನು ಕರೆದೊಯ್ದು ಆತನಿಗೆ ಸಾಯಬೇಕಿತ್ತೇ ಎಂಬ ಪ್ರಶ್ನೆ ನಾಗರಿಕರದ್ದು.