ಮಾನ್ಯ : ನಾಡಿಗೊಂದು ಉತ್ಸವ ಪ್ರತೀತಿ ನಿರ್ಮಿಸಿ, ನಾಗರಿಕರಲ್ಲಿ ನವೋಲ್ಲಾಸ ಮೂಡಿಸಿದ್ದ ಕಾರ್ಮಾರು ಶ್ರೀಮಹಾವಿಷ್ಣು ದೇವಸ್ಥಾನದ ಬ್ರಹ್ಮಕಲಶದೊಂದಿಗೆ 9ದಿನಗಳ ಸಂಭ್ರಮಾರಣೆ ಸಂಪನ್ನಗೊಂಡಿತು.
ಶ್ರೀಕ್ಷೇತ್ರದಲ್ಲಿ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳ ಕರ್ಮಿಕತ್ವದಲ್ಲಿ ಸಾವಿರದೆಂಟು ಕಲಶಾಭಿಷೇಕ ಸಹಿತ ಮಾ.9ರಂದು ಬೆಳಿಗ್ಗೆ ಬ್ರಹ್ಮಕಲಶಾಭಿಷೇಕ ನಡೆಯಿತು. 32ವರ್ಷಗಳ ಬಳಿಕ ಪುನರ್ ಪ್ರತಿಷ್ಠಾಪನೆಗೊಂಡ ದೇವರ ಬ್ರಹ್ಮ ಕಲಶಾಭಿಷೇಕವನ್ನು ಕಣ್ತುಂಬಿಕೊಂಡು ಊರ ಭಕ್ತರು ಸಾಫಲ್ಯ ಪಡೆದರು.
ಸಂಜೆ ನಡೆದ ಸಮಾರೋಪ ಸಭೆಯಲ್ಲಿ ಶ್ರೀಮದೆಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತಿ ಶ್ರೀಗಳವರು ಆಶೀರ್ವಚನವಿತ್ತರು. ಕಾರ್ಮಾರು ಕ್ಷೇತ್ರ ನವೀಕರಣ ಬ್ರಹ್ಮಕಲಶದ ಮೂಲಕ ನಾಡು ಒಂದಾಗಿ ಐಕ್ಯತೆಯಿಂದ ಬೆಸೆದು ಬೆರೆತಿದೆ. ಸಮಾಜಕ್ಕೆ ಇಂಥ ಧಾರ್ಮಿಕ ಐಕ್ಯತೆ ಅಗತ್ಯ. ಆದ್ದರಿಂದಲೇ ಕಾರ್ಮಾರು ಬ್ರಹ್ಮಕಲಶ ವಾದ,ವಿವಾದಗಳಿಲ್ಲದೇ, ಕಳಂಕರಹಿತವಾಗಿ ನಡೆದು ನಾಡಿಗೆ ಮಾದರಿಯಾಗಿದೆ ಎಂದವರು ಪ್ರಶಂಸಿಸಿದರು. ಬ್ರಹ್ಮಕಲಶ ಮುಗಿದಲ್ಲಿಗೆ ಭಕ್ತರ ಕಾಯಕ ಮುಗಿಯುವುದಿಲ್ಲ. ದೇವಾಲಯವನ್ನು ನಿತ್ಯ ನಿರಂತರ ಬೆಳಗಿಸುವ ಹೊಣೆಯೂ ಭಕ್ತರದ್ದೇ ಎಂದವರು ನೆನಪಿಸಿದರು.
ಈ ಸಂದರ್ಭ ಬ್ರಹ್ಮಕಲಶೋತ್ಸವದ ಕರ್ಮಿಕತ್ವ ವಹಿಸಿದ್ದಲ್ಲದೇ, ಸಮಿತಿಯ ಚಟುವಟಿಕೆಗಳಿಗೆ ಚೈತನ್ಯದಾಯಕ ಬೆಂಬಲ ನೀಡಿದ ದೇಲಂಪಾಡಿ ಗಣೇಶ ತಂತ್ರಿಗಳವರನ್ನು ಬ್ರಹ್ಮಕಲಶ ಸಮಿತಿ ವತಿಯಿಂದ ಗೌರವಪತ್ರವನ್ನಿತ್ತು ಸನ್ಮಾನಿಸಲಾಯಿತು. ಈ ಸಂದರ್ಭ ಆಶೀರ್ವಚನಶನ್ನಿತ್ತು ಅವರು ಶುಭಕೋರಿದರು.
ಬ್ರಹ್ಮಶ್ರೀ ತಂತ್ರಿ ಉಳಿಯ ವಿಷ್ಣು ಆಸ್ರ ಅಧ್ಯಕ್ಷತೆ ವಹಿಸಿದರು. ಉದ್ಯಮಿ ಆರ್.ಕೆ.ಭಟ್ ಬೆಂಗಳೂರು, ಧೈವಜ್ಞ ಕೇಶವಭಟ್ ನೆಲ್ಲಿಕಳಯ, ದೇವಸ್ವಂ ಮಂಡಳಿ ಸದಸ್ಯ ಶಂಕರ ಆದೂರು, ಕ್ಷೇತ್ರ ಅರ್ಚಕ ನಾರಾಯಣ ಭಟ್ ಪಟ್ಟಾಜೆ, ಕ್ಷೇತ್ರ ಟ್ರಸ್ಟಿ ಗೋಪಾಲ ಭಟ್ ಪಟ್ಟಾಜೆ, ರಾಮ ಕಾರ್ಮಾರು ಉಪಸ್ಥಿತರಿದ್ದರು.
ಕೃಷ್ಣಮೂರ್ತಿ ಪುದುಕೋಳಿ ಸ್ವಾಗತಿಸಿ, ಪುರುಷೋತ್ತಮ ಭಟ್ ಪುದುಕೋಳಿ ನಿರೂಪಿಸಿದರು. ಮಹೇಶ್ ವಳಕುಂಜ ವಂದಿಸಿದರು.
ಬಳಿಕ ದೇವಳದ ಜಾತ್ರೆಯಂಗವಾದ ದೇವರ ಉತ್ಸವ ಬಲಿ ನಡೆಯಿತು. ರಾತ್ರಿ ಮಾನ್ಯದ ಬೆಡಿಕಟ್ಟೆಯ ಬಳಿ ಮೆಗಾಗಾನಮೇಳ ನಡೆಯಿತು. ಕ್ಷೇತ್ರದಲ್ಲಿ ರಾತ್ರಿ ರಾಜಾಂಗಣ ಪ್ರಸಾದ, ಮಂತ್ರಾಕ್ಷತೆಯೊಂದಿಗೆ ಉತ್ಸವ ಸಮಾಪ್ತಿಗೊಂಡಿತು.