- Sunstrock- ಗಡಿನಾಡಲ್ಲಿ ಅತ್ಯುಷ್ಣಹವೆ: ಬಿಸಿಲಿನ ತಾಪಕ್ಕೆ ಕುಸಿದುಬಿದ್ದು 92ರ ವೃದ್ಧನ ಮರಣ
- ಸೂರ್ಯಾಘಾತಕ್ಕೆ ಮೊದಲ ಬಲಿ : ಬಿಸಿಲಿಗೆ ಇಳಿಯದಂತೆ ಮುನ್ನೆಚ್ಚರಿಕೆ
ಗಡಿನಾಡು ಕಾಸರಗೋಡಿನಲ್ಲಿ ಅತ್ಯುಷ್ಣದ ತಾಪಮಾನ ಏರಿಕೆಯಾಗಿದ್ದು, ಸೂರ್ಯಾಘಾತದಿಂದ (sunstrock)92ರ ವೃದ್ಧ ವ್ಯಕ್ತಿ ಕುಸಿದುಬಿದ್ದು ಮೃತಪಟ್ಟ ಕುರಿತು ವರಿದಿಯಾಗಿದೆ.
ಕಾಸರಗೋಡು ಜಿಲ್ಲೆಯ ಚೀಮೇನಿ ಠಾಣಾವ್ಯಾಪ್ತಿಗೆ ಸೇರಿದ ತಿಮಿರಿ ವಲಿಯ ಪೊಯಿಲಿಲ್ ನಿವಾಸಿ ಕುಂಞಿಕಣ್ಣನ್ (92) ಮೃತ ವ್ಯಕ್ತಿಯಾಗಿದ್ದಾರೆ. ಶನಿವಾರ ಮಧ್ಯಾಹ್ನ 1ಗಂಟೆಯ ವೇಳೆಗೆ ಮನೆಯಿಂದ ಹೊರಗಿಳಿದ ವ್ಯಕ್ತಿ ಮರಳಿ ಬಾರದೇ ಇದ್ದು, ಪತ್ನಿ ಹುಡುಕಿದಾಗ ಬಿಸಿಲಿಗೆ ಕುಸಿದು ಬಿದ್ದಿದ್ದರು. ಕೂಡಲೇ ಆಸ್ಪತ್ರೆಗೆ ಸೇರಿಸಲಾಯಿತಾದರೂ ಅಷ್ಟರಲ್ಲೇ ಮೃತಪಟ್ಟಿದ್ದರು. ಮರಣಕ್ಕೆ ಸೂರ್ಯಾಘಾತ ಕಾರಣವೆಂದು ಪ್ರಾಥಮಿಕವಾಗಿ ಅಂದಾಜಿಸಲಾಗಿದೆ. ಈ ಕುರಿತು ಔದ್ಯೋಗಿಕ ದೃಢೀಕರಣ, ಮರಣೋತ್ತರ ಪರೀಕ್ಷೆಯ ಮೂಲಕ ತಿಳಿದು ಬರಬೇಕಾಗಿದೆ.
ಅತ್ಯುಷ್ಣ ಹವೆ ಮತ್ತು ಉಷ್ಣಗಾಳಿಯಿಂದ ಮಲಬಾರ್ ಪ್ರದೇಶ ಕಂಗೆಟ್ಟಿದ್ದು, ಸೂರ್ಯಾಘಾತ ಪ್ರಕರಣ ಈ ವರ್ಷ ಕೇರಳದಲ್ಲೇ ಇದು ಮೊದಲನೆಯದಾಗಿದೆ. ಮಲಬಾರಿನಲ್ಲಿ ಈಗಾಗಲೇ ರಾಜ್ಯ ದುರಂತ ನಿವಾರಣಾ ಪ್ರಾಧಿಕಾರವು ಮಧ್ಯಾಹ್ನ 11ರಿಂದ ಸಂಜೆ 3ರ ತನಕ ಬಿಸಿಲಿಗಿಳಿಯಕೂಡದು ಎಂದು ಆದೇಶಿಸಿದೆ. ಅತ್ಯುಷ್ಣಹವೆಯು ನಿರ್ಜಲೀಕರಣ, ಸೂರ್ಯಾಘಾತ, ಸೂರ್ಯತಾಪದ ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ ಬಿಸಿಲಿಗೆ ದುಡಿಯುವ ಕಾರ್ಮಿಕರು ಈ ಅವಧಿಯನ್ನು ತಪ್ಪಿಸಬೇಕೆಂದು ಎಚ್ಚರಿಕೆ ನೀಡಲಾಗಿದೆ.