ಕಾಸರಗೋಡು : ಶಾಲಾ ಮಕ್ಕಳಿಗೆ ಮಾರಕ ಮಾದಕವಸ್ತು ಗಾಂಜಾ ವಿತರಿಸುತ್ತಿದ್ದನೆಂದು ಪೋಲಿಸರು ಬಂಧಿಸಿದ ಆರೋಪಿ ಸಮೀರ್ ಎಂಬಾತನನ್ನು ಮಸೀದಿಯ ಜಮಾಅತ್ ಸದಸ್ಯತ್ವದಿಂದಲೇ
ಉಚ್ಛಾಟಿಸಿ ಭ್ರಷ್ಟತೆ ಕಲ್ಪಿಸಲಾಗಿದೆ. ಕಳನಾಡಿನ ಜಮಾಅತ್ ಈ ನಿರ್ಧಾರ ಪ್ರಕಟಿಸಿದೆ.
ಮಾರಕ ಮಾದಕದ್ರವ್ಯ ಮಾರಾಟ, ಸೇವನೆ ಸಹಿತ ಮಾದಕಜಾಲದ ದಂಧೆಯಲ್ಲಿ ತೊಡಗಿಸಿಕೊಂಡವರನ್ನು ಕಾನೂನಿನ ಕೈಗೆ ಕೊಡಬೇಕೆಂದೂ, ಅಂತವರನ್ನು ಮಸೀದಿಗೆ ಆಗಮಿಸದಂತೆ ತಡೆಯುವುದಾಗಿಯೂ, ಅವರನ್ನು ಮಹಲ್ಲ್ ಕಮಿಟಿಯ ಸದಸ್ಯತ್ವದಿಂದ ಬರ್ಖಾಸ್ತುಗೊಳಿಸಲಾಗುವುದೆಂದೂ ಕಳನಾಡು ಜಮಾಅತ್ ಕಮಿಟಿ ಪ್ರಕಟಿಸಿದೆ.
ಇದೇ ರೀತಿ ಅನ್ಯರಾಜ್ಯಗಳಿಂದ ಆಗಮಿಸುವ, ಯಾವೊಂದು ಪರಿಚಯಗಳೂ ಇಲ್ಲದ ಶಂಕಿತರಿಗೆ ಬಾಡಿಗೆ ಮನೆ ನೀಡಿ ಆಶ್ರಯ ಒದಗಿಸುವುದನ್ನು ಜಮಾಅತ್ ಕಮಿಟಿ ವಿರೋಧಿಸುವುದಾಗಿ ತಿಳಿಸಿದೆ
ಈ ಥರ ಬಾಡಿಗೆ ಮನೆ ನೀಡುವುದಿದ್ದರೆ ಸಾಕಷ್ಟು ಎಚ್ಚರಿಕೆ ವಹಿಸಬೇಕೆಂದೂ, ಶಂಕೆಗಳಿದ್ದರೆ ಪೋಲೀಸ್ ಮೊರೆ ಹೋಗುವಂತೆಯೂ ತಿಳಿಸಲಾಗಿದೆ.
ಎಳೆಯ ಹುಡುಗರು ರಾತ್ರಿ ವೇಳೆ ನಗರ ಸುತ್ತುವುದನ್ನು ನಿಯಂತ್ರಿಸಬೇಕೆಂದೂ, ಮಾದಕ ಜಾಲಕ್ಕೆ ಯುವ ಪೀಳಿಗೆ ಬಲಿಯಾಗಿ ನಾಶವಾಗುವುದನ್ನು ತಪ್ಪಿಸಲು ಸಮುದಾಯ ಕೈಜೋಡಿಸಬೇಕೆಂದೂ ಮಸೀದಿ ಕರೆ ಇತ್ತಿದೆ. ಸಮಾಜಕ್ಕೆ ಪಿಡುಗಾಗಿ ಕಾಡುವ ಮಾದಕ ಜಾಲಕ್ಕೆ ಬಲಿಯಾಗುತ್ತಿರುವ ಯುವ ಪೀಳಿಗೆಯ ದಂಧೆಗೆ ಪ್ರೋತ್ಸಾಹ ನೀಡದೇ, ಅವರನ್ನು ಮಸೀದಿಯಿಂದ ದೂರವಿಟ್ಟು, ಬಳಿಕ ಸರಿದಾರಿಗೆ ಬಂದರೆಂಬುದನ್ನು ಖಚಿತ ಪಡಿಸಿಯೇ ಪ್ರವೇಶನ ನೀಡಲಾಗುವುದೆಂದು ಕಳನಾಡು ಜಮಾಅತ್ ಪದಾಧಿಕಾರಿಗಳು ತಿಳಿಸಿದ್ದಾರೆ.