- ಆಶಾ ಕಾರ್ಯಕರ್ತೆಯರ ಅನಿರ್ದಿಷ್ಟಾವಧಿ ಸತ್ಯಾಗ್ರಹಕ್ಕೆ ಬಿಜೆಪಿ ಬೆಂಬಲ, ಕಾಸರಗೋಡಿನಲ್ಲಿ ಮಾರ್ಚ್, ಸಭೆ
- ಆಶಾ ಕಾರ್ಯಕರ್ತೆಯರನ್ನು ಅಪಹಾಸ್ಯಗೈದ ಪಿಣರಾಯಿ ಸರಕಾರವನ್ನು ಕಾರ್ಮಿಕರು ಕಿತ್ತೊಗೆಯುವ ಕಾಲ ಬಂದಿದೆ : ಸಿ.ಕೆ.ಪದ್ಮನಾಭನ್
ಕಾಸರಗೋಡು: ವೇತನ ಹೆಚ್ಚಳ ಸಹಿತ ನ್ಯಾಯೋಚಿತ ಬೇಡಿಕೆಗಳೊಂದಿಗೆ ಸತ್ಯಾಗ್ರಹ ನಿರತರಾದ ಆಶಾ ಕಾರ್ಯಕರ್ತರನ್ನು ಹಂಗಿಸಿ, ಅಪಹಾಸ್ಯ ಮಾಡುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸರಕಾರವನ್ನು ರಾಜ್ಯದ ಕೂಲಿಕಾರ್ಮಿಕರೆಲ್ಲ ಸೇರಿ ಆಡಳಿತದಿಂದ ಕಿತ್ತೊಗೆಯುವ ದಿನ ಬಂದಿದೆ ಎಂದು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಸಿ ಕೆ.ಪದ್ಮನಾಭನ್ ನುಡಿದರು. ತಿರುವನಂತಪುರ ಸೆಕ್ರೇಟರಿಯೇಟ್ ಮುಂಭಾಗದಲ್ಲಿ ಆಶಾ ಕಾರ್ಯಕರ್ತರು ನಡೆಸುವ ಅಹರ್ನಿಶಿ ಸತ್ಯಾಗ್ರಹಕ್ಕೆ ಬೆಂಬಲ ಪ್ರಕಟಿಸಿ ಬಿಜೆಪಿ ವತಿಯಿಂದ ಕಾಸರಗೋಡು ನಗರದಲ್ಲಿ ಮಾ.8ರಂದು ಸಂಜೆ ನಡೆದ ಸತ್ಯಾಗ್ರಹ ಉದ್ಘಾಟಿಸಿ ಸಿ.ಕೆ.ಪದ್ಮನಾಭನ್ ಮಾತನಾಡುತ್ತಿದ್ದರು.
ಆಶಾ ಕಾರ್ಯಕರ್ತೆಯರ ಸತ್ಯಾಗ್ರಹ ನೈಜ ಬೇಡಿಕೆಗಳಿಂದ ಕೂಡಿದೆ. ಆದರೆ ಸತ್ಯಾಗ್ರಹವನ್ನೇ ಅಪಹಾಸ್ಯ ಮಾಡುವ ಧೋರಣೆ ಸರಕಾರದ್ದು. ಈ ಕಾರಣದಿಂದ ಕೇರಳದ ಎಲ್ಲಾ ಕಡೆಯಿಂದ ಆಶಾ ಕಾರ್ಯಕರ್ತರ ಹೋರಾಟಕ್ಕೆ ನೈತಿಕ ಬೆಂಬಲ ಸಿಗಲಿದೆ ಎಂದವರು ಹೇಳಿದರು.
ರಾಜ್ಯ ಸರಕಾರಿ ಸಿಬಂದಿಗಳಿಗೆ ಲಕ್ಷಾಂತರ ರೂ ವೇತನ ಏರಿಸುವಾಗ ಬಡ ಆಶಾ ಕಾರ್ಯಕರ್ತರ ಸತ್ಯಾಗ್ರಹವನ್ನು ಭಿಕ್ಷಾಟನೆಗೆ ಸಮಾನವಾಗಿ ನಿಂದಿಸಿರುವುದು ಎಡರಂಗದ ಕಾರ್ಮಿಕ ಪ್ರೀತಿಗೆ ನಿದರ್ಶನ ಎಂದು ಸಿ ಕೆ.ಪದ್ಮನಾಭನ್ ಆರೋಪಿಸಿದರು. ಬಿ.ಜೆ.ಪಿ.ಜಿಲ್ಲಾಧ್ಯಕ್ಷೆ ಎಂ.ಎಲ್.ಅಶ್ವಿನಿ ಅಧ್ಯಕ್ಷತೆ ವಹಿಸಿದರು.
ಸವಿತ ಟೀಚರ್, ಎಂ.ಜನನಿ, ಪುಷ್ಪಾಗೋಪಾಲನ್, ಯಶೋಧ ಮೊದಲಾದವರು ಉಪಸ್ಥಿತರಿದ್ದರು. ಸಾರ್ವ ಜನಿಕ ಸಭೆಗಿಂತ ಮುಂಚಿತವಾಗಿ ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಬೆಂಬಲ ಘೋಷಿಸಿ ಮೆರವಣಿಗೆ ನಡೆಯಿತು.