ಕಣಿಪುರ ಸುದ್ದಿಜಾಲ, ಕುಂಬಳೆ:
ಇತ್ತೀಚಿನವರೆಗೂ ಸಮೃದ್ಧ ನೀರಸೆಲೆಯಾಗಿದ್ದ ಅನಂತಪುರ ಪ್ರದೇಶದಲ್ಲಿ ಕೈಗಾರಿಕಾ ಪ್ರಾಂಗಣಕ್ಕೀಗ ನೀರ ಬರ ಅನುಭವವಾಗಿದೆ. ಅನಂತಪುರ ಕ್ಷೇತ್ರ ಪರಿಸರದ ಅಂತರ್ಜಲ ಮಟ್ಟವೂ ಕುಸಿದಿದೆ. ಈ ಹಿನ್ನೆಲೆಯಲ್ಲಿ ಕೈಗಾರಿಕಾ ಪ್ರಾಂಗಣದ ಜಲಕ್ಷಾಮ ಪರಿಹಾರಕ್ಕೆ ಸಮೀಪದ ಮೊಗ್ರಾಲು ಹೊಳೆಯಲ್ಲಿ ಚೆಕ್ ಡ್ಯಾಂ ನಿರ್ಮಿಸಲು ಪರಿಗಣಿಸಲಾಗುವುದೆಂದು ಜಿಲ್ಲಾಧಿಕಾರಿ ಕೆ.ಇಂಬುಶೇಖರ್ ತಿಳಿಸಿದ್ದಾರೆ.
“ನಮ್ಮ ಕಾಸರಗೋಡು” ಯೋಜನೆಯಂತೆ ಅನಂತಪುರ ಇಂಡಸ್ಟ್ರಿಯಲ್ ಎಸ್ಟೇಟ್ ಅಸೋಸಿಯೇಷನ್ ಪ್ರತಿನಿಧಿಗಳು ನಡೆಸಿದ ಸಂವಾದದಲ್ಲಿ ಜಿಲ್ಲಾಧಿಕಾರಿ ಈ ಭರವಸೆ ಇತ್ತರು.
ಅನಂತಪುರ ಕೈಗಾರಿಕಾ ಪ್ರದೇಶದ ಜಲಕ್ಷಾಮ ಪರಿಹಾರಕ್ಕೆ ಸಮೀಪದ ಹೊಳೆಯಲ್ಲಿ ಚೆಕ್ ಡ್ಯಾಂ ನಿರ್ಮಿಸುವ ಸಾಧ್ಯತೆಗಳ ಕುರಿತು ಇರಿಗೇಷನ್ ಇಲಾಖೆಯ ತಜ್ಞರ ಜತೆ ಸಮಾಲೋಚಿಸಿ ಬಳಿಕ ತೀರ್ಮಾನ ಪ್ರಕಟಿಸುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಜಿಲ್ಲೆಯ ಕೈಗಾರಿಕಾ ಪ್ರಾಂಗಣಗಳ ಸಮಸ್ಯೆಗಳ ಅವಲೋಕನ ಮತ್ತು ಪರಿಹಾರಕ್ಕಾಗಿ ಮಾ.13ರಂದು ಇರಿಗೇಷನ್, ಇಲೆಕ್ಟ್ರಿಸಿಟಿ, ಜಿ.ಪಂ ಮತ್ತು ನಗರಸಭೆ ಪ್ರತಿನಿಧಿಗಳ ಸಂಯುಕ್ತ ಸಭೆಗೆ ಜಿಲ್ಲಾಧಿಕಾರಿಗಳು ಆಹ್ವಾನ ಇತ್ತಿದ್ದಾರೆ. ಅನಂತಪುರ ಕೈಗಾರಿಕಾ ಪ್ರಾಂಗಣದ ಒತ್ತಿನಲ್ಲೇ ಮಧೂರಿನಿಂದ ಹರಿದು ಬರುವ ಮಧುವಾಹಿನಿ ನದಿ ಮೊಗ್ರಾಲು ಮೂಲಕ ಸಮುದ್ರ ಸೇರುತ್ತಿದೆ. ಇಲ್ಲಿ ಚೆಕ್ ಡ್ಯಾಂ ನಿರ್ಮಿಸುವ ಕಲ್ಪನೆಗಳಿದ್ದರೂ ಅದರ ಸಾಧ್ಯತೆ -ಭಾಧ್ಯತೆಗಳನ್ನು ತಿಳಿಯಬೇಕಾಗಿದೆ. ಈ ಕುರಿತು ಇರಿಗೇಷನ್ ಇಲಾಖೆಯಿಂದ ವರದಿ ಪಡೆಯುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು.