ಕುಂಬಳೆ : ವನ್ಯಮೃಗ ಭೇಟೆಯಾಡಲು ಬಂದವರು
ಹಂದಿಗಿರಿಸಿದ ಸ್ಫೋಟಕ ಸಾಕು ನಾಯಿ ಮೂಸಿದಾಗ ಸ್ಫೋಟಿಸಿ ನಾಯಿ ಸ್ಥಳದಲ್ಲೇ ಚಿದ್ರಗೊಂಡಿತು. ಸದ್ದು ಕೇಳಿ ಸ್ಥಳೀಯರೆಲ್ಲ ಓಡಿ ಬಂದು ತಪಾಸಿಸಿದಾಗ ಭೇಟೆಗಾರರ ಜೀಪು ಸಹಿತ ಓರ್ವನನ್ನು ನಾಗರಿಕರು ಸೆರೆ ಹಿಡಿದು ಪೋಲೀಸರಿಗೊಪ್ಪಿಸಿದರು.
ಗುರುವಾರ ರಾತ್ರಿ ಕುಂಬಳೆ ಠಾಣಾ ವ್ಯಾಪ್ತಿಯ ಹೇರೂರು ಮೀಪ್ರಿಯಲ್ಲಿ ಈ ಘಟನೆ ನಡೆಯಿತು.
ಹೇರೂರು ಮೀಪ್ರಿ ನಿವಾಸಿ ಕೊರಗಪ್ಪ ಎಂಬವರ ಸಾಕು ನಾಯಿ ಸತ್ತಿದ್ದು, ಈ ಸಂಬಂಧ ಭೇಟೆಗಾರರ ತಂಡದ ಸದಸ್ಯ, ಬೇಡಗಂ ಠಾಣಾ ವ್ಯಾಪ್ತಿಯ ಉಣ್ಣಿಕೃಷ್ಣನ್ (48)ಎಂಬಾತನನ್ನು ನಾಗರಿಕರು ಪೋಲೀಸರಿಗೊಪ್ಪಿಸಿದ್ದು, ಈತನನ್ನು ಬಂಧಿಸಲಾಗಿದೆ.
ಸ್ಪೋಟದ ಸದ್ದಿನ ಹಿನ್ನೆಲೆಯಲ್ಲಿ ನಾಗರಿಕರು ಹುಡುಕಾಡಿದಾಗ ಕತ್ತಲೆಯ ಮರೆಯಲ್ಲಿ ಜೀಪೊಂದರ ಬಳಿ ಉಣ್ಣಿಕೃಷ್ಣನ್ ನಿಂತಿದ್ದನು. ಈತನನ್ನು ತಡೆದು ನಿಲ್ಲಿಸಿದ ನಾಗರಿಕರು ಪೋಲೀಸರಿಗೊಪ್ಪಿಸಿದಾಗ ಜೀಪಿನಿಂದ ಕೆಲವು ಮದ್ದುಗುಂಡು,ಭೇಟೆಗೆ ಬಳಸುವ ವಸ್ತುಗಳು ಪತ್ತೆಯಾಗಿದೆ. ಜೀಪನ್ನು ಪೋಲೀಸರು ವಶ ಪಡಿಸಿದ್ದಾರೆ. ಭೇಟೆಗಾರರ ತಂಡ ಆಟೋರಿಕ್ಷಾ ಮತ್ತು ಜೀಪಲ್ಲಿ ಬಂದಿದ್ದರು. ಆಟೋದಲ್ಲಿ ಬಂದವರು ತಲೆಮರೆಸಿದ್ದಾರೆ. ಬಂಧಿತ ಆರೋಪಿಯನ್ನು ನ್ಯಾಯಾಂಗಬಂಧನಕ್ಕೊಳಪಡಿಸಲಾಗಿದೆ.