ದೆಹಲಿ : ಕೇರಳದ ಸ್ಥಳೀಯಾಡಳಿತ ಚುನಾವಣೆಗೆ ಪೂರ್ವ ನಡೆಸಲಾದ ವಾರ್ಡು ವಿಭಜನೆಗೆ ಆಧಾರವಾಗಿ ಪರಿಗಣಿಸಿದ ಜನಸಂಖ್ಯಾ ಹೆಚ್ಚಳದ ಮಾನದಂಡ ಯಾವುದು ಎಂದು ಸುಪ್ರೀಂಕೋರ್ಟು ಪ್ರಶ್ನಿಸಿದೆ. ರಾಜ್ಯದಲ್ಲಿ ಜನಸಂಖ್ಯಾ ವರ್ಧನೆಯ ಅನುಪಾತಿಕವಾಗಿ ವಾರ್ಡು ವಿಭಜನೆ ನಡೆಸಲಾಯಿತೆಂದು ಕೇರಳ ಸರಕಾರ ಸುಪ್ರೀಂಕೋರ್ಟಿಗೆ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ಜನಸಂಖ್ಯಾ ವರ್ಧನೆಯನ್ನು ನಿರ್ಣಯಿಸಿದ ಮಾನದಂಡ ಯಾವುದೆಂದು ಸುಪ್ರೀಂ ಪ್ರಶ್ನಿಸಿದೆ.
2011ರ ಜನಗಣತಿಯ ಆಧಾರದಲ್ಲಿ ಸ್ಥಳೀಯಾಡಳಿತ ವಾರ್ಡು ವಿಭಜನೆ ನಡೆಸಲು ರಾಜ್ಯ ಸರಕಾರಕ್ಕೆ ಅಧಿಕಾರ ಇರುವುದಾಗಿ ಕೇರಳ ಹೈಕೋರ್ಟು ತೀರ್ಪು ನೀಡಿತ್ತು. ಈ ತೀರ್ಪನ್ನು ಪ್ರಶ್ನಿಸಿ ಯುಡಿಎಫ್ ಘಟಕ ಪಕ್ಷದ ಕಾಂಗ್ರೆಸ್, ಮುಸ್ಲಿಂಲೀಗ್ ನಾಯಕರು ಸುಪ್ರೀಂ ಕೋರ್ಟಿನ ಮೊರೆ ಹೋಗಿದ್ದರು. ಈ ವರ್ಷ ನೂತನ ಜನಗಣತಿ ನಡೆಯಲಿಕ್ಕಿರುವಂತೆಯೇ 2011ರ ಜನಗಣತಿ ಆಧಾರವಾಗಿಟ್ಟು ವಾರ್ಡು ವಿಭಜನೆ ನಡೆಸಿರುವುದನ್ನವರು ಪ್ರಶ್ನಿಸಿದ್ದರು. ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟು ಜನಸಂಖ್ಯಾ ಹೆಚ್ಚಳವನ್ನು ಹೇಗೆ ನಿರ್ಣಯಿಸಿದಿರಿ ಎಂದು ಪ್ರಶ್ನಿಸಿದೆ. ಜನಸಂಖ್ಯಾ ಹೆಚ್ಚಳದ ಖಚಿತ ಅಂಕಿ ಅಂಶ ಕೈವಶ ಇಲ್ಲದೇ ನಡೆಸಿದ ವಾರ್ಡು ವಿಭಜನೆ ಅಶಾಸ್ತ್ರೀಯ ಮತ್ತು ಏಕಪಕ್ಷೀಯ ಎಂಬ ಮೌಖಿಕ ಗುರುತಿಸುವಿಕೆಯನ್ನೂ ಸುಪ್ರೀಃಕೋರ್ಟು ಉಲ್ಲೇಖಿಸಿದೆ. ಆದರೆ ಕೇರಳ ಹೈಕೋರ್ಟು ನೀಡಿದ ತೀರ್ಪನ್ನು ಅಮಾನ್ಯಗೊಳಿಸಬೇಕೆಂಬ ಬೇಡಿಕೆಯನ್ನು ಸುಪ್ರೀಂಕೋರ್ಟು ಪುರಸ್ಕರಿಸಲಿಲ್ಲ. ಎರಡು ವಾರದೊಳಗೆ ಇದೇ ಪ್ರಕರಣವನ್ನು ಪುನರ್ ಪರಿಶೀಲಿಸುವುದಾಗಿ ಸುಪ್ರೀಂ ಘೋಷಿಸಿದೆ.