- ಮಧೂರು ಕ್ಷೇತ್ರ ಬ್ರಹ್ಮಕಲಶದ ತಂತ್ರಸ್ಥಾನ ವಿವಾದಕ್ಕೆ ಪರಿಹಾರದ ಇತ್ಯರ್ಥ
- ದೇರೆಬೈಲು ತಂತ್ರಿಗಳ ಕರ್ಮಿಕತ್ವದಲ್ಲಿ ಮದನಂತೇಶ್ವರನಿಗೆ ಬ್ರಹ್ಮಕಲಶ ಮತ್ತು ಉಳಿಯ ತಂತ್ರಿಗಳ ಕರ್ಮಿಕತ್ವದಲ್ಲಿ ಮಹಾಗಣಪತಿಗೆ ಮೂಡಪ್ಪ ನಡೆಸಲು ನಿರ್ಣಯ
ಕಾಸರಗೋಡಿನ ಐತಿಹಾಸಿಕ ಪ್ರಸಿದ್ಧ ಮಧೂರು ಶ್ರೀಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯದ
ಬ್ರಹ್ಮಕಲಶೋತ್ಸವ ಮತ್ತು ಮೂಡಪ್ಪ ಸೇವೆಯನ್ನು ಉಭಯ ತಂತ್ರಿಗಳವರು ಅನುಕ್ರಮ ಹಂಚಿಕೊಂಡು ನಡೆಸಲು ನಿರ್ಧಾರವಾಗಿದೆ. ಹೈಕೋರ್ಟು ತೀರ್ಪಿನ ಹಿನ್ನೆಲೆಯಲ್ಲಿ (ಇಂದು ಪೂರ್ವಾಹ್ನ)ಮಾ.5ರಂದು ಮಧೂರಿನ ಅತಿಥಿಗೃಹದಲ್ಲಿ ತಂತ್ರಿಗಳಾದ ಬ್ರಹ್ಮಶ್ರೀ ಉಳಿಯ ವಿಷ್ಣು ಆಸ್ರ ಮತ್ತು ಬ್ರಹ್ಮಶ್ರೀ ದೇರೆಬೈಲು ಡಾ. ಶಿವಪ್ರಸಾದ ತಂತ್ರಿಗಳವರ ಸಮ್ಮಿಲನದ ಸಹಭಾಗಿತ್ವದೊಂದಿಗೆ ಮಲಬಾರ್ ದೇವಸ್ವಂ ಮಂಡಳಿಯ ಆಯುಕ್ತ, ಉಪ ಆಯುಕ್ತರ ನೇತೃತ್ವದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ತಂತ್ರ ಸ್ಥಾನ ವಿವಾದಕ್ಕೆ ಇತ್ಯರ್ಥ ಕಾಣಲಾಯಿತು.
ಮಾ.27ರಿಂದ ಎ.7ರ ತನಕ ಮಧೂರು ಬ್ರಹ್ಮಕಲಶ – ಮೂಡಪ್ಪ ಸೇವೆ ಜರಗಲಿದೆ. ಈ ಪೈಕಿ ಮಾ.27ರಿಂದ ಎ. 2ರ ತನಕ ಶ್ರೀಮದನಂತೇಶ್ವರ ದೇವರಿಗೆ ನಡೆವ ಬ್ರಹ್ಮಕಲಶವನ್ನು ದೇರೆಬೈಲು ಶಿವಪ್ರಸಾದ ತಂತ್ರಿಗಳ ಕರ್ಮಿಕತ್ವದಲ್ಲೂ, ಅನಂತರ ಎ.2ರಿಂದ 6ರ ತನಕ ನಡೆಯುವ ಶ್ರೀಮಹಾಗಣಪತಿ ದೇವರ ಮಹಾಮೂಡಪ್ಪ ಸೇವೆಯನ್ನು ತಂತ್ರಿಗಳಾದ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅವರ ಕರ್ಮಿಕತ್ವದಲ್ಲೂ ನಡೆಸುವಂತೆ ಹೈಕೋರ್ಟು ತೀರ್ಪಿನ ಆಧಾರದಲ್ಲಿ ನಿರ್ಣಯವಾಗಿದೆ.
ಮಲಬಾರ್ ದೇವಸ್ವಂ ಮಂಡಳಿಯು ಉಭಯ ತಂತ್ರಿಗಳನ್ನು ಆಹ್ವಾನಿಸಿ, ಮಧೂರು ಕ್ಷೇತ್ರ ಬ್ರಹ್ಮಕಲಶ ಸಮಿತಿ ಸಮಕ಼್ಷಮ , ದೂರುದಾತರ ಉಪಸ್ಥಿತಿಯಲ್ಲಿ ಉಭಯ ತಂತ್ರಿಗಳು ಸಂಯುಕ್ತವಾಗಿ ಬ್ರಹ್ಮಕಲಶ – ಮೂಡಪ್ಪಸೇವೆ ನಡೆಸುವ ನಿರ್ಣಯಕ್ಕೆ ಬರಬೇಕೇಂದು ಹೈಕೋರ್ಟು ತೀರ್ಪಿನಲ್ಲಿ ನಿರ್ದೇಶಿಸಿತ್ತು. ಇದರಂತೆ ಅಂತಿಮ ನಿರ್ಣಯವಾಗಿದ್ದು, ಕರಾವಳಿ ತುಳುನಾಡಿನ ಜನತೆ ಕಾತರದಿಂದ ಕಾಯುವ ಬ್ರಹ್ಮಕಲಶ -ಮೂಡಪ್ಪ ಸೇವೆಯ ತಾಂತ್ರಿಕ ಯಾಜಮಾನ್ಯ ವಿವಾದಕ್ಕೆ ಪರಿಹಾರವಾಗಿದೆ.
ಮಧೂರು ಅತಿಥಿಗೃಹದಲ್ಲಿ ನಡೆದ ಸಭೆಯಲ್ಲಿ ಉಭಯ ತಂತ್ರಿಗಳ ಹೊರತಾಗಿ ದೇವಸ್ವಂ ಕಮೀಷನರ್ ಬಿಜು, ಅಸಿಸ್ಟೆಂಟ್ ಕಮೀಷನರ್ ಪ್ರದೀಪ್, ಹೈಕೋರ್ಟು ದೂರುದಾತರು, ಬ್ರಹ್ಮಕಲಶ ಸಮಿತಿ ಪ್ರಮುಖರು ಉಪಸ್ಥಿತರಿದ್ದರು.
ಮಧೂರು ಬ್ರಹ್ಮಕಲಶ -ಮೂಡಪ್ಪ ಸೇವೆಯನ್ನು ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ತಂತ್ರಿಗಳ ಹೊರತಾಗಿ ನಡೆಸಲು ಸಂಬಂಧಪಟ್ಟವರು ಮುಂದಾಗಿದ್ದರು. ಇದನ್ನು ಪ್ರಶ್ನಿಸಿ, ಹಕ್ಕು ಮಂಡಿಸಿ ಉಳಿಯತ್ತಾಯ ತಂತ್ರಿಗಳ ಪರವಾಗಿ ನಾಗರಿಕ ಪ್ರತಿನಿಧಿಗಳು ಹೈಕೋರ್ಟಿನ ಮೊರೆ ಹೋಗಿದ್ದರು.