- ಮಾದಕ ದ್ರವ್ಯ ಸೇವನೆ/ಮಾರಾಟದ ವಿರೂದ್ಧ ಕಾರ್ಯಾಚರಣೆ : ಕೇವಲ ಹತ್ತು ದಿನಗಳಲ್ಲಿ ನೂರಕ್ಕೂ ಅಧಿಕ ಕೇಸು, 135ಮಂದಿಯ ಬಂಧನ..
- ಶಾಲಾ ವಿದ್ಯಾರ್ಥಿಗಳೂ ಪಿಡುಗಿಗೆ ಬಲಿ, ಶಾಲಾ ಪರಿಸರದಲ್ಲೂ ಗಾಂಜಾ ಮಾರಾಟ!
ಕಾಸರಗೋಡು: ಕೇರಳ ರಾಜ್ಯ ಮಾರಕವಾದ ಮಾದಕ ವಸ್ತುಗಳ ಅಮಲು ದಂಧೆಗೆ ಪಿಡುಗಿಗೆ ಸಿಲುಕಿದ್ದು, ಅಮಲಿಗೆ ದಾಸರಾದವರ ವಿಕೃತ ಕ್ರಿಮಿನಲ್ ಕೃತ್ಯಗಳಿಂದ ರಾಜ್ಯ ತಲೆತಗ್ಗಿಸುವಂತಾಗಿದೆ.
ಈ ಹಿನ್ನೆಲೆಯಲ್ಲಿ ಕೇರಳ ವ್ಯಾಪಕ ನಿಷೇಧಿತ ಮಾದಕ ವಸ್ತುಗಳ ಮಾರಾಟ, ಉಪಯೋಗದ ವಿರುದ್ಧ ತಪಾಸಣೆ ಊರ್ಜಿತಗೊಳಿಸಲಾಗಿದೆ.
ರಾಜ್ಯ ಪೋಲೀಸ್ ಇಲಾಖಾ ವರಿಷ್ಠರ ಆದೇಶದಂತೆ ಪ್ರಾಂತ್ಯ ವ್ಯಾಪಕ ಮಾದಕ ವಸ್ತು ಬಳಕೆದಾರರು ಮತ್ತು ಮಾರಾಟಗಾರರನ್ನು ಪತ್ತೆ ಹಚ್ಚುವ ಪ್ರಕ್ರಿಯೆ ನಡೆಯುತ್ತಿದೆ.ಇದರಂತೆ ಕಳೆದ 10ದಿನಗಳ ತಪಾಸಣೆಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 1807 ಮಂದಿಯನ್ನು ತಪಾಸಿಸಲಾಯಿತು. ಈ ಸಂಬಂಧ 132 ಕೇಸುಗಳನ್ನು ದಾಖಲಿಸಲಾಗಿದ್ದು, 135ಮಂದಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ 85.590 ಗ್ರಾಂ ಎಂಡಿಎಂಎ ಮತ್ತು 66.860ಗ್ರಾಂ ಗಾಂಜಾ ವಶ ಪಡಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಇದರ ಹೊರತಾಗಿ 11.470 ಗ್ರಾಂ ಗಾಂಜಾ ಕಾಸರಗೋಡು ನಗರ ಠಾಣಾ ವ್ಯಾಪ್ತಿಯ ಶಾಲಾ ವಿದ್ಯಾರ್ಥಿಗಳಿಂದ ವಶಪಡಿಸಿರುವುದು ಆತಂಕಕ್ಕೆ ಕಾರಣವಾಗಿದೆ. ವಿದ್ಯಾರ್ಥಿಗಳ ಮಾದಕ ವಸ್ತು ಸೇವನೆ ಹಿನ್ನೆಲೆಯಲ್ಲಿ ಪೋಲೀಸರು ಅವರ ಹಿನ್ನೆಲೆ, ಗೆಳೆತನ ಜಾಲದ ಕುರಿತು ತನಿಖೆ ಆರಂಭಿಸಿದ್ದಾರೆ.
ಕೇರಳ ವ್ಯಾಪಕ ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳ ನಡುವೆ ಮತ್ತು ಸಾರ್ವಜನಿಕರ ನಡುವೆ ಮಾದಕ ದ್ರವ್ಯ ಸೇವನೆ ವಿಪರೀತವಾಗಿದೆ. ಇದೇ ರೀತಿ ಕ್ರಿಮಿನಲ್ ಪ್ರಕರಣವೂ ಹೆಚ್ಚಳವಾಗಿದೆ. ಈ ಹಿನ್ನೆಲೆಯಲ್ಲಿ ಪೋಲೀಸರು ಕಾನೂನು ಬಿಗಿಗೊಳಿಸಿದ್ದಾರೆ.