ಮಧೂರು ಬ್ರಹ್ಮಕಲಶ-ಮೂಡಪ್ಪ ಸೇವೆಗೆ ಉಕ್ಕಿನಡ್ಕದ ಕಾರ್ಯಾಡು ಕಾಡೊಳಗಿನ ಬಳ್ಳಿ ಎಳೆದು ನೂರಾರು ಬುಟ್ಟಿ ಅರಳಿಸುತ್ತಾರೆ ಕೊರಗದೇ ಕೊರಗರು!

ನಾಶವಾಗುತ್ತಿರುವ ನೆಲಮೂಲದ ಕೌಶಲ್ಯಕ್ಕೆ ಬ್ರಹ್ಮಕಲಶದಿಂದ ಮರುಜೀವ..

by Narayan Chambaltimar

ಕಾಸರಗೋಡಿನ ಚಾರಿತ್ರಿಕ ಸೀಮಾ ಕ್ಷೇತ್ರ ಶ್ರೀ ಮಧೂರು ಮದನಂತೇಶ್ವರ ಸಿದ್ಧಿವಿನಾಯಕ ಕ್ಷೇತ್ರದಲ್ಲಿ
ಮಾ.27ರಿಂದ ಎ.7ರತನಕ ಜರುಗುವ ಅಷ್ಟಬಂಧ ಬ್ರಹ್ಮಕಲಶೋತ್ಸವ ಸಹಿತ ಠಶ್ರೀಮಹಾಗಣಪತಿಯ ಮೂಡಪ್ಪ ಸೇವೆಗೆ ಪೆರ್ಲ ಬಳಿಯ ಉಕ್ಕಿನಡ್ಕದ ಕಾರ್ಯಾಡು ಕಾಡಿನಲ್ಲಿ ನೆಲಮೂಲ ನಿವಾಸಿಗಳಾದ ಕೊರಗ ಜನಾಂಗದವರು ಬುಟ್ಟಿ ಹೆಣೆದು ತಯಾರಿಸುತ್ತಿದ್ದಾರೆ..!
ಇದು ಬಯಸದೇ ಬಂದ ಭಾಗ್ಯವೆನ್ನುತ್ತಾ ಕೊರಗರು ಭಕ್ತಿ, ನಿಷ್ಠೆಯ ಪ್ರಾಮಾಣಿಕ ಮುಗ್ಧತೆಯಿಂದ ಶುದ್ಧ ಬಳ್ಳಿಗಳಿಂದಲೇ ಬುಟ್ಟಿ ತಯಾರಿಸುವುದೇ ವೈಶಿಷ್ಟ್ಯ…

  • ಮಧೂರು ಬ್ರಹ್ಮಕಲಶ-ಮೂಡಪ್ಪ ಸೇವೆಗೆ ಉಕ್ಕಿನಡ್ಕದ ಕಾರ್ಯಾಡು ಕಾಡೊಳಗಿನ ಬಳ್ಳಿ ಎಳೆದು ನೂರಾರು ಬುಟ್ಟಿ ಅರಳಿಸುತ್ತಾರೆ ಕೊರಗದೇ ಕೊರಗರು!
  • ನಾಶವಾಗುತ್ತಿರುವ ನೆಲಮೂಲದ ಕೌಶಲ್ಯಕ್ಕೆ ಬ್ರಹ್ಮಕಲಶದಿಂದ ಮರುಜೀವ..

ಕುಂಬ್ಳೆ ಸೀಮೆಯ ಆದಿಪೂಜಿತ ದೇವರಾದ ಮಧೂರು ಮಹಾಗಣಪನ ಮೂಡಪ್ಪ ಸಹಿತ ಮದನಂತೇಶ್ವರನ ಮಹಾ ಬ್ರಹ್ಮಕಲಶಕ್ಕೆ ನಾಡಿನ ಮೂಲ ನಿವಾಸಿಗಳು ಕಾಡೊಳಗಿಂದ ಬೆತ್ತ, ಪುಲ್ಲಾಂಜಿ ಸಹಿತ ಬಳ್ಳಿ ಎಳೆದು ಬುಟ್ಟಿ ನಿರ್ಮಿಸುವ ಕಾರ್ಯ ಕಾರ್ಯಾಡಿನ ಕಾಡೊಳಗೆ ಸದ್ದಿಲ್ಲದೇ ನಡೆಯುತ್ತಿದೆ. ಮೂಡಪ್ಪ ಸೇವೆ -ಬ್ರಹ್ಮಕಲಶಕೆ ಸುಮಾರು 400ಕ್ಕೂ ಅಧಿಕ ಬುಟ್ಟಿಗಳ ಅಗತ್ಯ ಅಂದಾಜಿಸಲಾಗಿದೆ. ಈ ಪೈಕಿ 200ಕ್ಕೂ ಅಧಿಕ ಬುಟ್ಟಿಯನ್ನು ತಾಜಾ ಬಳ್ಳಿ ಎಳೆದು, ಬೆತ್ತ ಕಡಿದು, ನಾರೆಳೆದು ಈಗಾಗಲೇ ತಯಾರಿಸಲಾಗಿದೆ. ಕಾರ್ಯಾಡು ಕೊರಗ ಕಾಲನಿಯ ಬುಟ್ಟಿ ಹೆಣೆವ ತಜ್ಞ ಬಟ್ಯ ಎಂಬವರ ನೇತೃತ್ವದಲ್ಲಿ ಈ ಕಾಯಕ ನಡೆಯುತ್ತಿದೆ. ಬುಟ್ಟಿ ಹೆಣೆಯುವ ಕೌಶಲ್ಯದ ಅನುಭವೀ ಬಟ್ಯರ ಜತೆ ಈ ಕೆಲಸದಲ್ಲಿ ವರ್ಷಗಳ ತಜ್ಞತೆಯ ಅನುಭವಿಗಳಾದ ಕಮಲ, ಚೋಮ, ಚನಿಯ, ಅಂಗಾರೆ ಮತ್ತು ಇನ್ನೊಬ್ಬರು ಕಮಲ ಸೇರಿದಂತೆ ಆರು ಮಂದಿ ಬಳ್ಳಿಯನ್ನು ನಾರೆಳೆದು ಬುಟ್ಟಿ ರೂಪಿಸುತ್ತಿದ್ದಾರೆ.

ಬ್ರಹ್ಮಕಲಶೋತ್ಸವ ಸಮಿತಿ ವಿನಂತಿ ಮೇರೆಗೆ ಪೇಟೆಯ ವಾಣಿಜ್ಯ ಮಾರುಕಟ್ಟೆಯ ಬುಟ್ಟಿಗಳನ್ನು ಆಶ್ರಯಿಸದೇ, ಊರಿನ ಕಾಡಿನಲ್ಲಿ ಲಭ್ಯ ಇರುವ ತಾಜಾ ಬಳ್ಳಿಗಳಿಂದ ಹೆಣೆವ ಈ ಬುಟ್ಟಿಗಳನ್ನು ಬಳಸುವುದು ಮಧೂರಿನ ವೈಶಿಷ್ಟ್ಯ. ಈ ಮೂಲಕ ಬುಟ್ಟಿ ಹೆಣಿಗೆಯೇ ಕುಲಕಸುಬಾದ ಕೊರಗ ಜನಾಂಗಕ್ಕೂ ಅವಕಾಶ ಒಲಿದದ್ದು ವಿಶೇಷತೆ.

ದಂಬೆಮೂಲೆ ನಾರಾಯಣ ಭಟ್ಟರ ಸಾರಥ್ಯ..

ಮಧೂರಿನ ಭಕ್ತರಾದ ದಂಬೆಮೂಲೆ ನಾರಾಯಣ ಭಟ್ಟರ ನೇತೃತ್ವದಲ್ಲಿ 400ಬುಟ್ಟಿ ರೂಪಿಸುವ ಪ್ರಕ್ರಿಯೆ ನಡೆಯುತ್ತಿದೆ. ಬುಟ್ಟಿ ಹೆಣೆಯುವುದು ಕೊರಗ ಜನಾಂಗದ ಕೌಶಲ್ಯವಾದರೂ ಈಗ ತಾಜಾ ಬುಟ್ಟಿಗೆ ಬೇಡಿಕೆ ಇಲ್ಲದೇ ಹೋದ್ದರಿಂದ ಈ ಕಾಯಕದಿಂದ ಕೊರಗ ಜನಾಂಗ ಹಿಂಜರಿದಿದೆ. ಆದರೂ ಕೌಶಲ್ಯವನ್ನರಿತ ಅಳಿದುಳಿದ ಕೆಲವರನ್ನೆಲ್ಲಾ ಹುಡುಕಿ, ಜೋಡಿಸಿ ಬಟ್ಯನ ನೇತೃತ್ವದಲ್ಲಿ ಭಟ್ಟರ ಸಾರಥ್ಯದಲ್ಲಿ ಬುಟ್ಟಿ ತಯಾಗುತ್ತಿದೆ. ಕಳೆದ ಫೆ.20ರಂದು ದಂಬೆಮೂಲೆ ನಾರಾಯಣ ಭಟ್ಟರ ಮನೆಯಲ್ಲಿ ಬುಟ್ಟಿ ಹೆಣಿಗೆ ಆರಂಭವಾಯಿತು. ಈಗ ಕೊರಗರು ಸ್ಥಾನೀಯ ಕಾಡಲ್ಲೇ ಬಳ್ಳಿ ಎಳೆದು, ಅಲ್ಲೇ ಬುಟ್ಟಿ ಹೆಣೆದು ಸಂಜೆ ತಂದೊಪ್ಪಿಸುತ್ತಾರೆ. ಬುಟ್ಟಿಯೊಂದಕ್ಕೆ 300ರೂಪಾಯಿ ವೇತನ ನೀಡಲಾಗುತ್ತದೆ.

ಬ್ರಹ್ಮಕಲಶಕ್ಕೆ ಪ್ರಾಯೋಜಕತ್ವದ ಬುಟ್ಟಿಸೇವೆ!

ಬ್ರಹ್ಮಕಲಶದ ಬುಟ್ಟಿಗಳಿಗೆ ದೇವಸ್ಥಾನದ ಸಮಿತಿಯಿಂದಲೇ ಹಣ ಪಡೆಯುವುದೇಕೆ..? ಇದನ್ನು ಭಕ್ತರಿಂದಲೇ ಪ್ರಾಯೋಜಿಸಬಾರದೇಕೆ? ನಾರಾಯಣ ಭಟ್ಟರು ತನ್ನ ಯೋಜನೆಯನ್ನು ಜಾಲತಾಣದಲ್ಲಿ ಹಂಚಿದರು. ಬುಟ್ಟಿಯೊಂದಕ್ಕೆ ನೀಡುವ ವೇತನ 300ರೂ.ಗಳಂತೆ ಈಗ 333ಬುಟ್ಟಿಗಳಿಗೂ ಪ್ರಾಯೋಜಕರು ಸೇವಾ ರೂಪದಲ್ಲಿ ಒದಗಿದ್ದಾರೆ. ಇನ್ನುಳಿದಿರುವುದಕ್ಕೂ ಸೇವಾ ಪ್ರಾಯೋಜಕತ್ವ ಸಿಗಬಹುದೆನ್ನುವುದು ಅವರ ನಿರೀಕ್ಷೆ.

ಕಾರ್ಯಾಡು ಕಾಲನಿಯ ಕೊರಗರ ಪಾಲಿಗಿದು ದೇವ ನಿಯೋಗ. ಪೇಟೆಯಿಂದ ಬುಟ್ಟಿ ಖರೀದಿಸಿ, ಯಾರಿಗೋ ಹಣ ಪಾವತಿ ಮಾಡುವ ಬದಲು, ಇದನ್ನೇ ಕುಲಕಸುಬು ಮಾಡಿದ್ದ ಕೊರಗರಿಗೆ ಈ ಅವಕಾಶ ನೀಡಬಾರದೇಕೆ?
ಅವರಿಗೆ ಉದ್ಯೋಗ, ಆದಾಯ ಎರಡೂ ಒದಗಿತಲ್ಲ..? ದಂಬೆಮೂಲೆ ನಾರಾಯಣ ಭಟ್ಟರಿಗೆ ಯೋಚನೆ ಹೊಳೆದಾಗ ಅವರು ಸುಮ್ಮನಿರಲಿಲ್ಲ. ಬುಟ್ಟಿಯೊಂದಕ್ಕೆ 300ರೂ ಗಳಂತೆ 400ಬುಟ್ಟಿ ಒದಗಿಸಲು ಕೊರಗರ ಮೊರೆ ಹೋದರು. ಅವರು ತಮ್ಮ ಜನಾಂಗದ ಅನುಭವಿಗಳನ್ನು ಜೋಡಿಸಿ “ಇದು ದೇವಕಾರ್ಯ. ತಮಗೆ ಒಲಿದ ಭಾಗ್ಯ” ಎಂದು ಹೊರಟರು. ಜತೆಗೆ ಪೇಟೆಯಲ್ಲಿ ಸಿಗುವ ಬುಟ್ಟಿ ಕೃತ್ರಿಮವೆಂದೂ, ಅದಕ್ಕೆ ಸಿಕ್ಕ,ಸಿಕ್ಕ ಬಳ್ಳಿಗಳನ್ನೆಲ್ಲ ಬಳಸುತ್ತೇವೆ. ಕೆಲವು ಬಳ್ಳಿಗಳು ಕಹಿ ರುಚಿ ಹೊಂದಿವೆ. ಅಂಥ ಬಳ್ಳಿಯ ಬುಟ್ಟಿಯಲ್ಲಿ ದೇವರ ಅನ್ನ, ಅಪ್ಪ ಬಳಸಿದರೆ ಅದೂ ಕಹಿಯಾಗಬಹುದೆಂದವರು ಹೇಳಿದರು..ಏನಿದ್ದರೂ ಮಧೂರು ಬ್ರಹ್ಮಕಲಶಕ್ಕೆ ಕಾಡಿನಿಂದ ಬಳ್ಳಿ ಎಳೆದು ಭಕ್ತಿಯಿಂದ ಬುಟ್ಟಿ ಹೆಣೆದ ಕೊರಗ ಸಮಾಜದ ಕೌಶಲ್ಯದ ಕಾರ್ಮಿಕರಿಗೆ ಬ್ರಹ್ಮಕಲಶದ ಕೊನೆಯಲ್ಲಿ ದೇವರ ಪ್ರಸಾದಗಳೊಂದಿಗೆ ಪ್ರಧಾನ ವೇದಿಕೆಯಲ್ಲೇ ಗೌರವಿಸಬೇಕೆಂಬ ಕಳಕಳಿಯ ಸಂಭ್ರಮದಲ್ಲಿ ನಾರಾಯಣ ಭಟ್ಟರಿದ್ದಾರೆ.

ಚಿತ್ರ ಕೃಪೆ : ಶ್ಯಾಮ್ ಸರಳಿ

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00