- ಅದೃಷ್ಟ ಕಸದ ಬುಟ್ಟಿಯಲ್ಲೂ ಅಡಗಿರುತ್ತದೆ…ಭಾಗ್ಯವಿದ್ದರೆ ಕೈತಪ್ಪಿದ್ದೂ ಸಿಕ್ಕೇ ಸಿಗುತ್ತದೆ..!
- ಬಹುಮಾನ ಇಲ್ಲವೆಂದು ಕಸದ ಬುಟ್ಟಿಗೆಸೆದ ಲಾಟರಿ ಟಿಕೇಟಿನಲ್ಲಿತ್ತು ಲಕ್ಷ ರೂ ಬಹುಮಾನ…
- ಅದು ಅರ್ಹ ವಾರಸುದಾರನನ್ನೇ ಹುಡುಕಿಬಂದದ್ದೇ ಅದೃಷ್ಟದ ಕತೆ…
: ಅದೃಷ್ಟ ಕಸದ ಬುಟ್ಟಿಯಲ್ಲೂ ಅಡಗಿರುತ್ತದೆ…!ಅದೃಷ್ಟ ನೆಟ್ಟಗಿದ್ದರೆ ಭಾಗ್ಯವಶಾತ್ ನಿಮಗೇನು ಸಿಗಬೇಕೋ ಸಿಕ್ಕೇ ಸಿಗುತ್ತದೆ…ಸಿನಿಮಾ ಕತೆಯಂಥ ಒಂದು ಲಾಟರಿ ಕತೆಯಿದು…
ಬಹುಮಾನ ಇಲ್ಲವೆಂದು ನಿರಾಶೆಯಿಂದ ಕಸದ ಬುಟ್ಟಿಗೆಸೆದ ಲಾಟರಿ ಟಿಕೇಟಿನಲ್ಲಿತ್ತು ಭರ್ತಿ 1ಲಕ್ಷ ರೂ ಬಹುಮಾನ..!ಕೊನೆಗದು ಅರ್ಹನಾದ ವ್ಯಕ್ತಿಯ ಕೈ ಸೇರಿದ್ದೇ ಪವಾಡ ಸದೃಶ ಸಹೃದಯತೆಯ ಮೂಲಕ.
ಕಾಸರಗೋಡು ಜಿಲ್ಲೆಯ ಬೇಕಲ ಪಳ್ಳಿಕೆರೆ ನಿವಾಸಿ ರಘು ಎಂಬವರು ಕಾಞಂಗಾಡಿನ ಲಾಟರಿ ಸ್ಟಾಲೊಂದರಿಂದ ಕೇರಳ ರಾಜ್ಯ ಲಾಟರಿಯ ಟಿಕೇಟೊಂದನ್ನು ಪಡೆದಿದ್ದರು. ಮರುದಿನ ಅದೇ ಸ್ಟಾಲಿಗೆ ಬಂದು ತನಗೆ ದೊಡ್ಡ ಬಹುಮಾನವೇನೂ ಒಲಿದಿರಲಿಕ್ಕಿಲ್ಲ ಎಂಬ ಭಾವದಲ್ಲಿ ಅತೀ ಕಡಿಮೆ ಬಹುಮಾನದಿಂದ ಮೇಲ್ಗಡೆ 5ಸಾವಿರ ರೂ ಬಹುಮಾನದ ತನಕ ರಿಸಲ್ಟ್ ನೋಡಿದರು. ಬಹುಮಾನ ಒಲಿದಿಲ್ಲ ಎಂಬ ಹತಾಶೆಯಿಂದ ಅಲ್ಲೇ ಇದ್ದ ಕಸದ ಬುಟ್ಟಿಗೆ ಟಿಕೇಟ್ ಎಸೆದು ಮರಳಿದರು.
ಇದನ್ನೇನೂ ಲಾಟರಿ ಸ್ಟಾಲ್ ಮಾಲಕ ಟಿ ವಿ ವಿನೋದ್ ಗಮನಿಸಿರಲಿಲ್ಲ. ಬಳಿಕ ಆ ಟಿಕೇಟಿಗೆ 1ಲಕ್ಷ ರೂ ಬಹುಮಾನ ಒಲಿದಿದೆಯೆಂದು ತಿಳಿದಾಗ ಏಜೆಂಟ್ ಟಿಕೇಟ್ ಖರೀದಿಸಿದ್ದ ವ್ಯಕ್ತಿಯನ್ನು ಸಮೀಪಿಸಿದರು. ನಿಮ್ಮ ಟಿಕೇಟಿಗೆ 1ಲಕ್ಷ ರೂ ಬಹುಮಾನ ಇದೆಯೆಂದರು. ಆದರೆ ಟಿಕೆಟ್ ಖರೀದಿಸಿದ ರಘು ಯಾವುದೇ ಸಂಭ್ರಮ ಪಡದೇ, ಹತಾಶೆಯಿಂದ ಟಿಕೆಟ್ ಕಸದ ಬುಟ್ಟಿಗೆ ಎಸೆದಿರುವುದಾಗಿ ತಿಳಿಸಿದರು. ಮರುದಿನ ಬೆಳಿಗ್ಗೆ ಲಾಟರಿ ಅಂಗಡಿ ತೆರೆಯಲು ಸಿಬಂದಿಗಳು ಬಂದಾಗ ಪರಿಸರದ ಕಸದಬುಟ್ಟಿಯನ್ನು ಹುಡುಕಾಡುವ ರಘುವನ್ನು ಕಂಡರು. ವಿಷಯವೇನೆಂದು ಕೇಳಿದಾಗ “ನನ್ನ ಟಿಕೇಟಿಗೆ 1ಲಕ್ಷ ರೂ ಬಹುಮಾನ ಒಲಿದಿತ್ತು, ಆದರೆ ಗೊತ್ತಾಗದೇ ಟಿಕೇಟನ್ನು ಕಸದ ಬುಟ್ಟಿಗೆ ಹಾಕಿದ್ದೆ, 1ತಾಸಿನಿಂದ ಹುಡುಕಿದರೂ ಅದು ಸಿಗಲಿಲ್ಲ” ಎಂದರು.
“ಹಾಗಿದ್ರೆ ಇಲ್ಲಿರುವ ಕಸದ ಗೋಣಿ ಚೀಲವನ್ನು ಮನೆಗೆ ಕೊಂಡೊಯ್ದು ಹುಡುಕಿರಿ, ಇದ್ದರೆ ಸಿಗಬಹುದು” ಎಂದು ಲಾಟರಿ ಅಂಗಡಿಯವರೂ ಹೇಳಿದರು. ಇದು ತನಗೆ ನಾಚಿಕೆ ಮತ್ತು ಅಭಿಮಾನಕ್ಕೆ ಪೆಟ್ಟು, ಪರವಾಗಿಲ್ಲ,ಎಂದು ಟಿಕೇಟಿನ ವಾರಸುದಾರ ಮರಳಿದರು.
ಬಳಿಕ ಅಂಗಡಿ ಸಿಬಂದಿಗಳು ಉತ್ಸಾಹದಿಂದ ಗೋಣಿ ಚೀಲವನ್ನೆಲ್ಲಾ ತಲಾಷ್ ಮಾಡಿ ಹುಡುಕಿದಾಗ ಅದೃಷ್ಟ ಒಲಿದ ಟಿಕೇಟ್ ಸಿಕ್ಕೇಬಿಟ್ಟಿತು..ಆದರೆ ಅದೃಷ್ಟ ಒಲಿದಾತ ಸಿಗಬೇಕಲ್ಲ?
ಸಿಬಂದಿಗಳಿಗೆ ಆತನ ಪರಿಚಯ ಇರಲಿಲ್ಲ. ಕೊನೆಗೆ ಸಿಸಿಟಿವಿಯಲ್ಲಿ ಮುದ್ರಿತವಾದ ಆತನ ಚಿತ್ರ ತೆಗೆದು, ಅದನ್ನು ಕೆಲವರಿಗೆಲ್ಲಾ ತೋರಿಸಿ,ಅರ್ಹ ವ್ಯಕ್ತಿಯನ್ನು ಕಾಞಂಗಾಡಿನ ಮೆಡಿಕಲ್ ಸ್ಟೋರೊಂದರಿಂದ ಪತ್ತೆ ಹಚ್ಚಿ ಟಿಕೇಟ್ ಹಸ್ತಾಂತರಿಸಲಾಯಿತು.
ಒಟ್ಟಿನಲ್ಲಿ ಒಲಿದ ಬಹುಮಾನದ ಮೊತ್ತವನ್ನು ಕಬಳಿಸದೇ, ಅರ್ಹ ವ್ಯಕ್ತಿಯನ್ನು ಹುಡುಕಿ ತಂದುಕೊಟ್ಟ ಕಾಞಂಗಾಡಿನ ಸಂಸಂ ಲಾಟರಿ ಸ್ಟಾಲ್ ಮಾಲಕ ಮತ್ತು ನೌಕರರ ಪ್ರಾಮಾಣಿಕತೆಗೆ ನಾಗರಿಕರು ಕೈ ಚಪ್ಪಾಳೆ ತಟ್ಟಿದ್ದಾರೆ.