- ಮಧೂರು ಕ್ಷೇತ್ರದಲ್ಲಿ ಉತ್ಸವ ಪ್ರತೀತಿ ಮೂಡಿಸಿದ ಪೆರ್ಣೆ ಮುಚ್ಚಿಲೋಟ್ ಕ್ಷೇತ್ರದ ಶ್ರಮದಾನ
- ಪುರುಷ ಬೇಧವಿಲ್ಲದೇ ಅಬಾಲವೃದ್ಧ 1ಸಹಸ್ರ ಮಂದಿಗಳಿಂದ ಮಧೂರಿನಲ್ಲಿ ಶ್ರಮದಾನ
- ಮಹಾಬ್ರಹ್ಮಕಲಶದ ನಾನಾ ಕಾಯಕಗಳಲ್ಲಿ ಉತ್ಸಾಹದಿಂದ ಭಾಗವಹಿಸಲು ಆಹ್ವಾನ
- ಆದಿಪೂಜಿತ ಗಣಪನ ಸೇವೆಯಲ್ಲಿ ಮೈಮರೆತ ಸಹಸ್ರಕ್ಕೂ ಮೀರಿದ ವಾಣಿಯ ಸಮುದಾಯ
ಮಧೂರು: ಮೂಡಪ್ಪ ಸೇವೆ ಸಹಿತ ಮಹಾಬ್ರಹ್ಮಕಲಶೋತ್ಸವಕ್ಕೆ ಸಜ್ಜಾಗುತ್ತಿರುವ ಗಡಿನಾಡು ಕಾಸರಗೋಡಿನ ಇತಿಹಾಸ ಪ್ರಸಿದ್ದ ಮಧೂರು ಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯಕ್ಕೆ ಉತ್ಸವ ಪ್ರತೀತಿಯ ಕಳೆ ನೀಡಿ ಪೆರ್ಣೆ ಶ್ರೀ ಮುಚ್ಚಿಲೋಟ್ ಭಗವತಿ ಕ್ಷೇತ್ರದ ವಾಣಿಯ/ಗಾಣಿಗ ಸಮಾಜ ಪ್ರತಿನಿಧಿಗಳಿಂದ ಶ್ರಮದಾನ ನಡೆಯಿತು. ಮಾ.2.ಭಾನುವಾರ ಬೆಳಿಗ್ಗಿನಿಂದ ಕ್ಷೇತ್ರ ಅವಲಂಬಿತ ನಾನಾ ಕೆಲಸಗಳಲ್ಲಿ ಸಮಾಜ ಬಾಂಧವರು ಅತ್ಯುಲ್ಲಾಸದಿಂದ ಭಾಗವಹಿಸಿದರು.
ಮಾ.27ರಿಂದ ಎ.7ರ ತನಕ ನಾಡಿನ ಆದಿಪೂಜಿತ ಗಣಪನ ಸನ್ನಿಧಿಯಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ಮೂಡಪ್ಪ ಸೇವೆ ಜರಗಲಿದೆ.
ಮಾತೆಯರು, ಮಹನೀಯರು ಮತ್ತು ಯುವಪೀಳಿಗೆ ಸೇರಿದಂತೆ ಸಮುದಾಯದ ಒಂದು ಸಹಸ್ರ ಮಂದಿ ಮಧೂರು ಗಣಪತಿಯ ಸೇವೆಗೈದು ಪುನೀತರಾದರು.
ಬ್ರಹ್ಮಕಲಶೋತ್ಸವಕ್ಕೆ ಸಜ್ಜಾಗುವ ಕ್ಷೇತ್ರದಲ್ಲಿ ನಾನಾ ಕಾಯಕಗಳು ಉಳಿದಿದ್ದು, ಸಮಾಜದ ನಾನಾ ಸ್ತರದವರು ಒಗ್ಗೂಡಿ ಹರಿದುಬಂದು ಶ್ರಮದಾನ ಸೇವೆ ಸಲ್ಲಿಸುತ್ತಿದ್ದಾರೆ. ಶ್ರಮದಾನವೆಂದರೆ ಶಾರೀರಿಕ ಪರಿಶ್ರಮದ ದಾನವಷ್ಟೇ ಅಲ್ಲ, ಬ್ರಹ್ಮಕಲಶದ ಪೂರ್ವ ಸಿದ್ಧತೆಯಲ್ಲೂ, ತದನಂತರ ಬ್ರಹ್ಮಕಲಶದ ಸಂದರ್ಭದಲ್ಲೂ ಯಾರಿಗೂ ನೋವಾಗದಂತೆ ಭಗವಂತನ ಸಾಮೀಪ್ಯದಲ್ಲಿ
ನಿಂತು, ಸರ್ವ ರೀತಿಯ ಸೇವಾ ಸಹಕಾರಗಳನ್ನು ನೀಡುವುದಾಗಿದೆ. ಈ ದಿಶೆಯಲ್ಲಿ ಸಮಾಜದ ಜನರೆಲ್ಲರೂ ತೊಡಗಬೇಕೆಂದು ಮಾರ್ಗದರ್ಶನ ನೀಡಲಾಯಿತು
.
ಪೆರ್ಣೆ ಮುಚ್ಚಿಲೋಟ್ ಭಗವತಿ ಕ್ಷೇತ್ರದ ಸೇವಾ ಸಮಿತಿ ಅಧ್ಯಕ್ಷ ಜಯಂತ ಪಾಟಾಳಿ ಸೀತಾಂಗೋಳಿ, ಮುಖಂಡರಾದ ಸುರೇಶ್ ಬಟ್ಟಂಪಾರೆ, ಹರೀಶ್ ಗೋಸಾಡ, ಗಣೇಶ್ ಪಾರೆಕಟ್ಟೆ, ಗೋಪಾಲ ಮಾಸ್ತರ್ ಪಂಜತೊಟ್ಟಿ, ರತ್ನಾಕರ ಎಸ್.ಓಡಂಗಲ್ಲು, ರಾಧಾಕೃಷ್ಣ ಸೂರ್ಲು, ದಾಮೋದರ ಅಮೈ ಮೊದಲಾದವರು ಶ್ರಮದಾನ ಕೈಂಕರ್ಯಕ್ಕೆ ಮಾರ್ಗದರ್ಶನಗಳೊಂದಿಗೆ ನೇತೃತ್ವ ನೀಡಿದರು.
ಮಧೂರು ಶ್ರೀಮದನಂತೇಶ್ವರ ಸಿದ್ಧಿವಿನಾಯಕ ಕ್ಷೇತ್ರವೆಂದರೆ ನಮ್ಮ ಗಡಿನಾಡಿನ ಆದಿಪೂಜಿತ ಆರಾಧನಾ ಕ್ಷೇತ್ರ. ಇಲ್ಲಿ ಶ್ರೀ ಮಹಾಗಣಪತಿಯ ಚಾರಿತ್ರಿಕ ಬ್ರಹ್ಮಕಲಶೋತ್ಸವಕ್ಕಾಗಿ ಶ್ರಮವನ್ನು ಭಗವಂತನಿಗೆ ದಾನ ಮಾಡಲು ಯೋಗ ಸಿಗುವುದೆಂದರೆ ಅದು ಜೀವನದ ಸೌಭಾಗ್ಯ. ಇಂಥ ಅಪೂರ್ವ ಅವಕಾಶ ಇಂದು ನಮ್ಮ ಸಮುದಾಯಕ್ಕೆ ಶ್ರೀ ಪೆರ್ಣೆ ಕ್ಷೇತ್ರದ ಮೂಲಕ ಒಲಿದುವಬಂದಿದೆ. ನಿರೀಕ್ಷೆಗೂ ಮೀರಿದ ಗಾಣಿಗ ಸಮಾಜ ಬಾಂಧವರು ಮಧೂರಿನಲ್ಲಿ ನೆರೆದು, ಕಾಯಕವೇ ಕೈಲಾಸವೆಂದು ತನು ಶ್ರಮವನ್ನು ಆದಿಪೂಜಿತ ಗಣಪತಿಗೆ ಅರ್ಪಿಸಿದ್ದಾರೆ.
ಇದರಿಂದ ನಾವೆಲ್ಲರೂ ಸಂಭ್ರಮಿಸಿ, ಪುಳಕಗೊಂಡಿದ್ದೇವೆ.
-ರತ್ನಾಕರ ಎಸ್.ಓಡಂಗಲ್ಲು
(ಪ್ರ.ಕಾರ್ಯದರ್ಶಿ, ಕಾಸರಗೋಡು ಜಿಲ್ಲಾ ವಾಣಿಯ,ಗಾಣಿಗ ಸಮಾಜ)