ಮಾನ್ಯ: ನಾವು ಮಾಡುವ ದಾನ, ಧರ್ಮಾದಿ ಕಾರ್ಯಗಳು ಅರ್ಥಪೂರ್ಣ ಆಗಬೇಕೆಂದಿದ್ದರೆ ನಮ್ಮ ಸೇವೆಗಳು ನಿಸ್ವಾರ್ಥವಾಗಿರಬೇಕು. ನಾವು ಕೊಟ್ಟದ್ದು ನಿಸ್ವಾರ್ಥ ಮನಸ್ಸಿನ ಪ್ರಾಂಜಲ ಕೊಡುಗೆಯಾದರೆ ಒಂದಲ್ಲ ಮತ್ತೊಂದು ವಿಧದಲ್ಲಿ ಭಗವಂತ ನಮಗದನ್ನು ಮರಳಿ ಕೊಟ್ಟೇ ಕೊಡುತ್ತಾನೆಂದು ಶ್ರೀಮದೆಡನೀರು ಮಠಾಧೀಶ ಶ್ರೀಸಚ್ಛಿದಾನಂದ ಭಾರತಿ ಶ್ರೀಪಾದಂಗಳವರು ನುಡಿದರು.
ಮಾನ್ಯ ಕಾರ್ಮಾರು ಶ್ರೀ ಮಹಾವಿಷ್ಣು ಕ್ಷೇತ್ರದ 9ದಿನಗಳ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.
ಒಂದೂರಿನ ಅನೇಕ ಮನಸ್ಸುಗಳು ಒಗ್ಗೂಡಿ ದುಡಿದರೆ ಏನು ಸಾಧ್ಯ ಎಂಬುದಕ್ಕೆ ಕಾರ್ಮಾರು ಕ್ಷೇತ್ರ ಮಾದರಿಯಾಗಿದೆ. 1400ವರ್ಷಗಳ ಹಿನ್ನೆಲೆಯ ಕಾರ್ಮಾರು ಕ್ಷೇತ್ರ ಹಳ್ಳಿಯ ಪುಟ್ಟ ದೇಗುಲವಾಗಿತ್ತು. ಆದರೀಗ ಈ ನಾಡಿನ ನೂರಾರು ಮನಸುಗಳು ಒಂದುಗೂಡಿ ಶ್ರೀ ಕ್ಷೇತ್ರವನ್ನು ನವೀಕರಿಸಿದ ರೀತಿ ನಾಡಿಗೆ ಮಾದರಿ. ಒಂದೂರಿನ ಎಲ್ಲರೂ ಕೈಜೋಡಿಸಿದರೆ ದೇವಾಲಯವೊಂದನ್ನು ಹೇಗೆ ಭವ್ಯತೆಯಿಂದ ನಿರ್ಮಿಸಬಹುದು ಎನ್ನುವುದಕ್ಕೆ ಕಾರ್ಮಾರು ಕ್ಷೇತ್ರ ಮಾದರಿಯಾಗಿದೆ ಎಂದು ಎಡನೀರು ಶ್ರೀಗಳು ಪ್ರಶಂಸಿಸಿದರು.
ಮಂಗಳೂರು ಚಿತ್ರಾಪುರ ಮಠದ ಶ್ರೀವಿದ್ಯೇಂದ್ರ ತೀರ್ಥ ಶ್ರೀಪಾದಂಗಳವರು ಉಪಸ್ಥಿತರಿದ್ದು ಆಶೀರ್ವಚನವಿತ್ತರು.
ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮುಂಡಪಳ್ಳ ಶ್ರೀರಾಜರಾಜೇಶ್ವರಿ ಕ್ಷೇತ್ರದ ಆಡಳಿತ ಮೊಕ್ತೇಸರ, ಉದ್ಯಮಿ ಕೆ.ಕೆ.ಶೆಟ್ಟಿ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಜೀವನದಲ್ಲಿ ಯಶಸ್ಸು ಒಲಿಯಬೇಕಿದ್ದರೆ ಶ್ರದ್ಧೆಯ ದುಡಿಮೆಯ ಜತೆ ಭಗವಂತನ ಅನುಗ್ರಹ ಮುಖ್ಯ. ದೇವನೊಲುಮೆ ಇಲ್ಲದ ಕಾಯಕ ವ್ಯರ್ಥ. ಆದ್ದರಿಂದ ದೇವರ ಮೂಲಕವೇ ಜೀವನದಲ್ಲಿ ಯಶಸ್ಸು ಸಾಧ್ಯ ಎಃದರು.
ಕಾರ್ಮಾರು ಬ್ರಹ್ಮಕಲಶ ಸಮಿತಿ ಅಧ್ಯಕ್ಷ ಮಧುಸೂಧನ ಆಯರ್ , ಮಧೂರು ಕ್ಷೇತ್ರ ಬ್ರಹ್ಮಕಲಶ ಸಮಿತಿ ಪ್ರಧಾನ ಕಾರ್ಯದರ್ಶಿ ಜಯದೇವ ಖಂಡಿಗೆ, ಮಲಬಾರ್ ದೇವಸ್ವಂ ಮಂಡಳಿ ಇನ್ಸ್ಪೆಕ್ಟರ್ ಉಮೇಶ ಅಟ್ಟೆಗುಳಿ, ಜೀರ್ಣೋದ್ದಾರ ಸಮಿತಿ ರಕ್ಷಾಧಿಕಾರಿ ಮಾನಮಾಸ್ತರ್ ಮಾನ್ಯ,
ಕ್ಷೇತ್ರದ ಆಡಳಿತ ಮೊಕ್ತೇಸರ ನರಸಿಂಹಭಟ್, ಸೇವಾಸಮಿತಿ ಅಧ್ಯಕ್ಷ ಶ್ರೀಕೃಷ್ಣ ಭಟ್ ಪುದುಕೋಳಿ, ವೆಂಕಪ್ಪ ಶೆಟ್ಟಿ ಕಾರ್ಮಾರು ಮೋದಲಾದವರು ಉಪಸ್ಥಿತರಿದ್ದರು. ಬ್ರಹ್ಮಕಲಶ ಸಮಿತಿ ಕಾರ್ಯದರ್ಶೀ ಮಹೇಶ ವಳಕುಂಜ ಸ್ವಾಗತಿಸಿ, ಸುಂದರಶೆಟ್ಟಿ ಕೊಲ್ಲಂಗಾನ ವಂದಿಸಿದರು. ಬಳಿಕ ಸ್ಥಳೀಯ ಪ್ರತಿಭೆಗಳ ನೃತ್ಯ ವೈವಿಧ್ಯಗಳು ನಡೆಯಿತು.