- ಭಾರತದ ನೆಲ -ಜಲ -ವಾಯು ಜಾಲಕ್ಕೆ ಕಂಟಕ ಆಕ್ರಮಣಕಾರಿ ಅಕೇಶಿಯ
- ರೆಡಿಮೇಡ್ ಫರ್ನೀಚರ್ ರಾಜನ ಅಸಲೀ ಕತೆ ಗೊತ್ತೇ??
ನಮ್ಮೂರಿನ ಸಸ್ಯಜಾಲವನ್ನು ನುಂಗಿ ಬಿಡುವುದೇ ಇದರ ಕೆಲಸ. ಜೈವಾವಸ್ಥೆಗೆ ಮಾರಕವೆಂದು ತಿಳಿದರೂ ಸರಕಾರಗಳು ಎಚ್ಚೆತ್ತುಕೊಂಡಂತೆ ಅನಿಸುತ್ತಿಲ್ಲ. ಇದೀಗ ಆರೋಗ್ಯದ ಸಮಸ್ಯೆ ಎಬ್ಬಿಸಿದ ಈ ವಿದೇಶೀ ಸಸ್ಯಕ್ಕೆ ಪ್ರಶಸ್ತಿ ಘೋಷಿಸಿದರೂ ಪರಿತಪಿಸುವ ಅಗತ್ಯವಿಲ್ಲ. ಯಾಕೆಂದರೆ,
ಅಕೇಶಿಯ ಲಾಭಿ ದೊಡ್ಡ ಮಟ್ಟದಲ್ಲಿ ಕೆಲಸ ಮಾಡುತ್ತಿರುವುದಂತೂ ನಿಜ.
ಎರಡು ವಾರಗಳಿಗೊಮ್ಮೆ ಕೆಮ್ಮು ಆರಂಭ. ಮುಂದಿನ ಒಂದೆರೆಡು ದಿನಗಳಲ್ಲಿ ಅಸ್ತಮವಾಗಿ ಬದಲಾಗುವ ಸಂದರ್ಭ. ಕಳೆದ ಆರೇಳು ತಿಂಗಳುಗಳಿಂದ ಕುಟುಂಬವೊಂದರ ಪಾಕ್ಷಿಕ ರೋಗಚಕ್ರದ ಮೂಲ ಹುಡುಕಲು ಸಾಧ್ಯವಾಗದ ಪರಿಸ್ಥಿತಿ. ರಕ್ತ,ಕಫ,ಮಲ,ಮೂತ್ರ ಪರೀಕ್ಷೆಯೊಂದಿಗೆ ಆಹಾರ ತಿಂಡಿಯ ಪಥ್ಯವೂ ನಡೆದುಹೋಯಿತು. ಟಾನಿಕ್,ಕಷಾಯಗಳ ಪ್ರಯೋಗದ ಪರೀಕ್ಷೆಯೂ ಜತೆಗಿತ್ತು. ಆದರೆ,ಕಫ,ಕೆಮ್ಮು,ಅಲರ್ಜಿ ಮತ್ತು ಕೊನೆಗೆ ಉಬ್ಬಸದ ಉಪಟಳ ಹೆಚ್ಚಾಯಿತೇ ವಿನಃ ಕಡಿಮೆ ಆಗಲೇ ಇಲ್ಲ.
ಬಾಡಿಗೆ ಮನೆಯನ್ನು ಬದಲಾಯಿಸುವುದೊಂದೇ ಪರಿಹಾರ ಎಂದು ಯಾರೋ ಕೊಟ್ಟ ಸಲಹೆಗೆ ಸೈ ಎಂದಿತು ಕುಟುಂಬ.
ಪ್ರಾಕೃತಿಕ ಕಾಡು ಕಡಿದ ಪರಿಣಾಮವಾಗಿ ತಲೆ ಎತ್ತಿದ ಅಕೇಷಿಯ ಕಾಡಿನ ಬದಿಯಲ್ಲೇ ವಾಸಿಸುತ್ತಿದ್ದ ಆ ಮನೆತನ ಗದ್ದೆ ಬದಿಯ ರಮಣೀಯ ಸ್ಥಳಕ್ಕೆ ಸ್ಥಳಾಂತರಗೊಂಡಿತು. ನಾಲ್ಕು ವರ್ಷದ ಪುಟ್ಟ ಕಂದನ ಅಸ್ತಮಾ,ಕೆಮ್ಮು,ಕಫ ಕ್ರಮೇಣ ಕಡಿಮೆಯಾಗುತ್ತಾ ಬಂತು. ಅಲರ್ಜಿ ದೂರವಾಯಿತು.
ಬಾಡಿಗೆ ಮನೆಯ ದೋಷ ಪರಿಹಾರವಾಯಿತೆಂದು ಕೆಲವರು ವಾದಿಸಿದರು. ಆದರೆ,ಅಕೇಶಿಯ ಕಾಡೊಳಗಿನ ಬಿಸಿಯೂ,ನಿರಂತ ಹೂ ಬಿಡುತ್ತಿರುವ ಪರಿಸ್ಥಿತಿಯೂ ಮಗುವಿನ ಶ್ವಾಸಕೋಶಕ್ಕೆ ಪೂರಕವಾಗಿಲ್ಲವೆಂಬ ವೈಜ್ಞಾನಿಕ ಸತ್ಯವನ್ನು ತಿಳಿದುಕೊಳ್ಳಲು ಆ ಕುಟುಂಬಕ್ಕೆ ಸ್ವಲ್ಪ ಸಮಯ ಬೇಕಾಯಿತು.
1940ರ ದಶಕಗಳಲ್ಲಿ ಅರಣ್ಯ ಇಲಾಖೆಯು ಅಕೇಶಿಯಾವನ್ನು ಭಾರತದಲ್ಲಿ ಪರಿಚಯಿಸಿತು. ಭಾರತದಲ್ಲಿ ಪ್ರಾಕೃತಿಕ ಕಾಡು ಪ್ರದೇಶಗಳನ್ನು ಕಡಿಯದೆ,ಮರ ಮಟ್ಟುಗಳ ಬೇಡಿಕೆಯನ್ನು ಪೂರೈಸಲು ಅಕೇಶಿಯ ಅತ್ಯುತ್ತಮ ದಾರಿ ಎಂದು ತಿಳಿದುಕೊಂಡದ್ದೇ ಮಾರಕಾವಾಗಿ ಪರಿಣಮಿಸಿದ್ದು ಇದೀಗ ಇತಿಹಾಸ. ಭಾರತದ ಹಸಿರು ವಾತಾವರಣಕ್ಕೆ ಅಕೇಶಿಯ ತಪ್ಪಾದ ಎಂಟ್ರಿ ಎಂಬುವುದನ್ನು ಅಧಿಕಾರಿಗಳು ಒಪ್ಪಿಕೊಂಡು ತಮ್ಮಿಂದಾದ ಪ್ರಮಾದದಿಂದ ಕೈತೊಳೆದುಕೊಂಡರು.ಆದರೆ ಫಲಿತಾಂಶ..?
ಮೊದ-ಮೊದಲು ನೀರು,ಗೊಬ್ಬರ, ರಕ್ಷಣೆ ನೀಡಿ ಬೆಳೆಸಿದ ಅಕೇಶಿಯ ಕ್ರಮೇಣ ಪ್ರಾಕೃತಿಕ ಕಾಡೊಳಗೆ ಅತಿಕ್ರಮಿಸಿ ಭಾರತದ ಸುಂದರವಾದ ಜೈವಾವಸ್ಥೆಯನ್ನು ನಾಶಮಾಡಿದ್ದೇ ಬಂತು. ಕಣ್ಣಿಗೆ ಕಾಣದ ಅಂತಾರಾಷ್ಟ್ರೀಯ ಲಾಭಿ ಮೇಲುಗೈ ಸಾಧಿಸಿತು ಎಂದು ಹೇಳದೆ ನಿರ್ವಾಹವಿಲ್ಲ.
ಈ ನಡುವೆ ಮನುಷ್ಯ ಜೀವಿಗಳಿಗೆ ಶ್ವಾಸಕೋಶದ ರೋಗವನ್ನು ಉಚಿತವಾಗಿ ಹರಡಿಸಿತು. ಅರಣ್ಯ ಇಲಾಖೆ ಕೆಲವು ವರ್ಷಗಳಿಂದ ಅಕೇಶಿಯ ಕೃಷಿಯನ್ನು ನಿಲ್ಲಿಸಿದೆಯಾದರೂ ನೀರು ಗೊಬ್ಬರ ಲಭಿಸದೆಯೂ ಅತ್ಯಂತ ವೇಗದಲ್ಲಿ ಭಾರತದ ಭೂ ಪ್ರಕೃತಿಯಲ್ಲಿ ವ್ಯಾಪಿಸುತ್ತಿದೆ ಅಕೇಶಿಯ. ಅಂತರ್ಜಲವನ್ನು ಹೀರಿಕೊಂಡು ಭೂಮಿಗೆ ನೀರು ಇಂಗದಂತೆ ಮಾಡಿಕೊಂಡು ಹಸಿರನ್ನು ಬರಡು ಮಾಡುತ್ತಾ ಅಕೇಶಿಯ ತನ್ನ ಕ್ರೂರ ಆಟವನ್ನು ಮುಂದುವರಿಸುತ್ತಾ ಇರುವುದು ಅತಿ ವೃಷ್ಟಿ,ಅನಾವೃಷ್ಟಿಗೆ ಕಾರಣವಾಗಿದೆ ಎಂದೇ ಹೇಳಬೇಕಾಗುತ್ತದೆ.
- ರೆಡಿಮೆಡ್ ಫರ್ನೀಚರ್ ಗಳ ರಾಜ ಅಕೇಶಿಯ…
ನಾಲ್ಕು ಗೋಡೆಗಳ ಮಧ್ಯೆ ಸ್ಥಳವಿಲ್ಲದಿದ್ದರೂ ನಮ್ಮ ನಿಮ್ಮ ಮನೆಗಳಲ್ಲಿ ಹಲವು ರೀತಿಯ ರೆಡಿಮೆಡ್ ಪೀಠೋಪಕರಣಗಳು ರಾರಾಜಿಸುತ್ತವೆ. ಫರ್ನೀಚರ್ ಶಾಪ್ ಗಳಲ್ಲಿ ಕಡಿಮೆ ದರಕ್ಕೆ ವೈವಿಧ್ಯಮಯ ಪೀಠೋಪಕರಣಗಳು ನಮ್ಮನ್ನು ಸೆಳೆದಿರುವುದೇ ಕಾರಣ. ಹಲವಾರು ರೀತಿಯ ಬ್ಯುಸಿನೆಸ್ ಟ್ರಿಕ್ಸ್ ಗಳನ್ನು ಬಳಸಿಕೊಂಡು ಮನೆಯೊಳಗೆ ತಿರುಗಾಡಲು ಸ್ಥಳವಿಲ್ಲದಿದ್ದರೂ ಸರಿ,ಪೀಠೋಪಕರಣಗಳು ಇರಬೇಕೆಂಬ ದುರಾಶೆ ನಮ್ಮ ನಡುವೆ ಬೇರೂರಿದೆ.
ಗಾತ್ರದಲ್ಲಿ ಸಣ್ಣದು ದೊಡ್ಡದು,ಅಲಂಕಾರದಲ್ಲಿ ಹೆಚ್ಚು ಕಡಿಮೆ ಹೀಗೆ ಬಳಕೆದಾರರಿಗೆ ಹೇಗೆ ಬೇಕು ಹಾಗೆ ಎಂಬ ರೀತಿಯಲ್ಲಿ ಅಕೇಶಿಯವನ್ನು ಸೀಳಿ ಉಂಟುಮಾಡಿದ ಪೀಠೋಪಕರಣಗಳಿಗೆ ಎಲ್ಲಿಲ್ಲದ ಬೇಡಿಕೆ. ದುಡ್ಡೂ ಕಡಿಮೆ. ಕಾಣಲು ನಾಜೂಕು ಮತ್ತು ಸುಂದರವಾಗಿರುವ ಕಲಾಕೃತಿಗಳಿಗೂ ಅಕೇಶಿಯ ಸೈ. ಇದುವೇ ಫರ್ನೀಚರ್ ಮಾರಾಟದಲ್ಲಿ ಅಕೇಶಿಯಾದ ಪ್ರಾಬಲ್ಯತೆಗೆ ಮೂಲ ಕಾರಣ.
ತವರೂರು ಆಫ್ರಿಕಾ ಮತ್ತು ಆಸ್ಟ್ರೇಲಿಯಾದಲ್ಲಿ ಅಕೇಶಿಯ ಮರವನ್ನು ಬಳಸಿದ ಯಾವುದೇ ಪೀಠೋಪಕರಣಗಳನ್ನು ಜನರು ಬಳಸುವಂತಿಲ್ಲ ಎಂಬುವುದು ನಮಗೆ ತಿಳಿದಿಲ್ಲ. ಆದರೆ,ಇಲ್ಲಿ ಫರ್ನೀಚರಿಗೂ,ಕಿಟಕಿ,ದಾರಂದಗಳಿಗೂ ಅಕೇಶಿಯ ಬೇಕು. ಎಲ್ಲವೂ ದುಡ್ಡಿನ ಮೇಲಿನ ಆಟದಿಂದ ಆರೋಗ್ಯ ಕೆಡಿಸಿಕೊಳ್ಳುವ ಹುನ್ನಾರಕ್ಕೆ ನಾವೂ ತಲೆಬಾಗಿದಂತಾಗಿದೆ.