- *ಮಾನ್ಯದ ಕಾರ್ಮಾರಿನಲ್ಲಿರುವ ಪುಟ್ಟ ದೇವಾಲಯ, ಸುಸಜ್ಜಿತ ಭವ್ಯ ದೇಗುಲವಾಗಿ ಜೀರ್ಣೋದ್ಧಾರ
- *ಮೈಸೂರು ಸಂಸ್ಥಾನದ ಮಹಾರಾಜರ ಆಗಮನ, ಗೌರವ ಉಪಸ್ಥಿತಿಯಲ್ಲಿ ಅಂತಿಮ ದಿನದ ಸಭಾ ಕಲಾಪ
- 9ದಿನಗಳ ಬ್ರಹ್ಮಕಲಶೋತ್ಸವದಲ್ಲಿ 9ಯತಿಗಳ ಉಪಸ್ಥಿತಿ, ಆಶೀರ್ವಚನ
- *ಕುಗ್ರಾಮದ ಪ್ರಶಾಂತ ವಾತಾವರಣದಲ್ಲಿ ಶ್ರೀ ಮಹಾವಿಷ್ಣುವಿನ ದಿವ್ಯ ಸಾನ್ನಿಧ್ಯಕ್ಕೆ ಈಗ ಜೀರ್ಣೋದ್ಧಾರ ಭಾಗ್ಯ
- *ಕ್ಷೇತ್ರ ಜೀರ್ಣೋದ್ಧಾರಕ್ಕೆ ದೈನಂದಿನ ರಾತ್ರಿ ಗ್ರಾಮದ 250ಯುವಕರ ಶ್ರಮದಾನ
ಗಡಿನಾಡು ಕಾಸರಗೋಡಿನ ಬೇಳ ಗ್ರಾಮದ ಮಾನ್ಯ ಕಾರ್ಮಾರಿನಲ್ಲಿ ಸುಮಾರು 1400ವರ್ಷ ಪ್ರಾಚೀನತೆಯ ಐತಿಹ್ಯ ಹೊಂದಿದ ಶ್ರೀಮಹಾವಿಷ್ಣು ದೇವಾಲಯ 32ವರ್ಷಗಳ ಬಳಿಕ ಸಂಪೂರ್ಣ ನವೀಕರಣಗೊಂಡು ಪುನರ್ ಪ್ರತಿಷ್ಟಾ ಬ್ರಹ್ಮಕಲಶೋತ್ಸವಕ್ಕೆ ಸಜ್ಜಾಗಿದೆ.
2025 ಮೇ 1ರಿಂದ 9ರರ ತನಕ ವಿವಿಧ ಕಾರ್ಯಕ್ರಮಗಳೊಂದಿಗೆ ಬ್ರಹ್ಮಕಲಶ ನಡೆಯಲಿದೆ. ಮಾನ್ಯ ಸಮೀಪದ ಗ್ರಾಮೀಣ ಪರಿಸರದಲ್ಲಿ ನೂತನ ಶಿಲಾಮಯ ಗರ್ಭಗುಡಿ, ನಮಸ್ಕಾರ ಮಂಟಪ, ಸುತ್ತುಗೋಪುರ, ರಾಜಗೋಪುರದೊಂದಿಗೆ ಭವ್ಯತೆಯಿಂದ ಜೀರ್ಣೋದ್ಧಾರಗೊಂಡ ಶ್ರೀ ಮಹಾವಿಷ್ಣು ದೇವಾಲಯ ಈಗ ನಾಡಿಗೊಂದು ನವಕಳೆಯನ್ನಿತ್ತು, ನವದಿನದ ಬ್ರಹ್ಮಕಲಶಕ್ಕೆ ಸಿದ್ಧವಾಗಿದೆ. ಇಡೀ ನಾಡನ್ನು ವಿಷ್ಣುಮಯವಾಗಿಸಿ ದೇವಾಲಯವನ್ನು ಬೆಳಗಿಸಿದೆ.
ಮೇ1ರಂದು ಆರಂಭ..
ಮೇ1ರಂದು ಬೆಳಿಗ್ಗೆ ಬದಿಯಡ್ಕದ ಕೆಡೆಂಜಿ ಶ್ರೀ ಮಹಾವಿಷ್ಣು ಕ್ಷೇತ್ರದಿಂದ ಬದಿಯಡ್ಕ, ಕನ್ಯಪಾಡಿ, ನೀರ್ಚಾಲು ದಾರಿಯಾಗಿ ಮಾನ್ಯ ಕಾರ್ಮಾರಿಗೆ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ಆಗಮಿಸುವುದರೊಂದಿಗೆ ಬ್ರಹ್ಮಕಲಶಕ್ಕೆ ಚಾಲನೆ ದೊರೆಯಲಿದೆ. ಸಂಜೆ 4ಕ್ಕೆ ತಂತ್ರಿಗಳ ಆಗಮನ, ಪೂರ್ಣಕುಂಭ ಸ್ವಾಗತದ ಬಳಿಕ ವೈದಿಕ ಕಾರ್ಯಕ್ರಮಗಳು ಆರಂಭವಾಗಲಿದೆ.
ಸಂಜೆ 7ಕ್ಕೆವಿಷ್ಣುಪ್ರಭಾವೇದಿಕೆಯಲ್ಲಿ ನಡೆಯುವ ಸಭಾ ಕಲಾಪದಲ್ಲಿ ಎಡನೀರು ಶ್ರೀ ಸಚ್ಛಿದಾನಂದ ಭಾರತಿ ಶ್ರೀಪಾದರು , ಮಂಗಳೂರು ಚಿತ್ರಾಪುರ ಮಠದ ಶ್ರೀ ವಿದ್ಯೇಂದ್ರ ತೀರ್ಥ ಶ್ರೀಪಾದರು ಆಶೀರ್ವಚನ ನೀಡುವರು. ಉದ್ಯಮಿ, ಮುಂಡಪಳ್ಳ ಶ್ರೀ ರಾಜರಾಜೇಶ್ವರಿ ಕ್ಷೇತ್ರದ ಮೊಕ್ತೇಸರ ಕೆ.ಕೆ.ಶೆಟ್ಟಿ ಉದ್ಘಾಟಿಸುವರು. ಪ್ರಮುಖರು ಅತಿಥಿ ಅಭ್ಯಾಗತರಾಗಿ ಪಾಲ್ಗೊಳ್ಳುವರು.
ಬಳಿಕ ದೈನಂದಿನ ವಿಷ್ಣುಪ್ರಭ ವೇದಿಕೆಯಲ್ಲಿ ಯತಿವರೇಣ್ಯರ ಆಶೀರ್ವಚನಗಳ ಮಾರ್ಗದರ್ಶನದಲ್ಲಿ ಧಾರ್ಮಿಕ ಸಭೆ, ಸಂಗೀತ, ನೃತ್ಯ, ನಾಟಕ, ತಾಳಮದ್ದಳೆ, ಯಕ್ಷಗಾನವೇ ಮೊದಲಾದ ಸಾಂಸ್ಕೃತಿಕ ಮನೋರಂಜನೆ ಜರಗಲಿದೆ. ಇದೇ ಸಂದರ್ಭ ವಿಷ್ಣುಪ್ರಿಯ ವೇದಿಕೆಯಲ್ಲಿ ಬೆಳಿಗ್ಗೆ ಯಿಂದ ರಾತ್ರಿ ತನಕ ನಾಡಿನ ವಿವಿಧ ಭಜನಾ ಮಂಡಳಿಗಳ ಭಜನಾ ಸಂಕೀರ್ತನೋತ್ಸವ ಜರಗಲಿದೆ. ಈ ಕಾರ್ಯಕ್ರಮಗಳಲ್ಲಿ ಗಣ್ಯರು ಪಾಲ್ಗೊಳ್ಳುವರು.
ಮಾ.9ರಂದು ಬೆಳಿಗ್ಗೆ 1008ಕಲಶಾಭಿಷೇಕ, ಬ್ರಹ್ಮಕಲಶಾಭಿಷೇಕ ನಡೆಯಲಿದೆ. ಇದೇ ದಿನ ಸಂಜೆ 3ಕ್ಕೆ ನಡೆಯುವ ಧಾರ್ಮಿಕ ಸಭೆಯನ್ನು ಮೈಸೂರು ಸಂಸ್ಥಾನದ ರಾಜ, ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಉದ್ಘಾಟಿಸುವರು. ಕರ್ನಾಟಕ ಮಾನವ ಹಕ್ಕುಗಳ ಆಯೋಗದ ಹಂಗಾಮಿ ಅಧ್ಯಕ್ಷ ಟಿ.ಶಾಮ ಭಟ್ ಅಧ್ಯಕ್ಷತೆ ವಹಿಸುವರು. ಶ್ರೀಮದೆಡನೀರು ಶ್ರೀ ಸಚ್ಚಿದಾನಂದ ಭಾರತಿ ಶ್ರೀಪಾದಂಗಳು, ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿಗಳವರು ಆಶೀರ್ವಚನ ನೀಡುವರು. ಕೊಲ್ಲೂರು ಕ್ಷೇತ್ರದ ಅನುವಂಶಿಕ ಅರ್ಚಕ ಬ್ರಹ್ಮಶ್ರೀ ನರಸಿಂಹ ಅಡಿಗ , ಮಹಾಬಲೇಶ್ವರ ಭಟ್ ಎಡಕ್ಕಾನ, ಆರ್.ಕೆ.ಭಟ್ ಬೆಂಗಳೂರು ಅತಿಥಿಗಳಾಗಿ ಪಾಲ್ಗೊಳ್ಳುವರು.
- ಕಾರ್ಮಾರು ಕ್ಷೇತ್ರದಲ್ಲಿ ಕನ್ನಡ ಮಾಧ್ಯಮ ಬಳಗ ಮತ್ತು ದೇವಾಲಯ ಬ್ರಹ್ಮಕಲಶೋತ್ಸವ ಸಮಿತಿ ಪದಾಧಿಕಾರಿಗಳು
ಬ್ರಹ್ಮಕಲಶೋತ್ಸವ ನಿಮಿತ್ತ ಕ್ಷೇತ್ರ ಪರಿಸರದಲ್ಲಿ ಕಾರ್ಯಕ್ರಮಗಳನ್ನು ನವೀಕರಣದ ಹಾದಿಯನ್ನು ವಿವರಿಸಿದ ಪತ್ರಿಕಾಗೋಷ್ಟಿಯಲ್ಲಿ ಆಡಳಿತ ಮೊಕ್ತೇಸರ ನರಸಿಂಹ ಭಟ್ ಕಾರ್ಮಾರು, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಮಹೇಶ್ ವಳಕುಂಜ, ಸೇವಾ ಸಮಿತಿ ಅಧ್ಯಕ್ಷ ಶ್ರೀಕೃಷ್ಣ ಭಟ್ ಪುದುಕೋಳಿ, ಗೋಪಾಲ ಭಟ್ ಪಿ.ಎಸ್, ಜೀರ್ಣೋದ್ಧಾರ ಸಮಿತಿ ರಕ್ಷಾಧಿಕಾರಿ ಮಾನ ಮಾಸ್ತರ್, ಉಪಾಧ್ಯಕ್ಷ ಸುಂದರ ಶೆಟ್ಟಿ ಕೊಲ್ಲಂಗಾನ, ಯುವಕ ವೃಂದದ ಅಧ್ಯಕ್ಷ ವಿಜಯ ಕುಮಾರ್ ಮಾನ್ಯ, ಕೋಶಾಧಿಕಾರಿ ರಂಜಿತ್ ಯಾದವ್, ಶ್ಯಾಮಪ್ರಸಾದ್ ಮಾನ್ಯ, ರಾಮ ಮಾನ್ಯ ಮೊದಲಾದವರು ಉಪಸ್ಥಿತರಿದ್ದರು.