- ಮಸೀದಿ ಉದ್ಘಾಟನೆಯ ಬೆನ್ನಲ್ಲೇ ಯಕ್ಷಗಾನ ಮೇಳದ ಕ್ಯಾಂಪ್ ಮೇನೇಜರ್ ನಿಧನಕ್ಕೆ ಮಸೀದಿಯಲ್ಲಿ ಶ್ರದ್ಧಾಂಜಲಿ..!
ಮಂಗಳೂರು : ಹೃದಯಾಘಾತದಿಂದ ಮೃತಪಟ್ಟ ಯುವ ಯಕ್ಷಗಾನ ಸಂಘಟಕ, ಬಪ್ಪನಾಡು ಮೇಳದ ಕ್ಯಾಂಪ್ ಮೇನೇಜರ್ ಸಂತೋಷ್ ಬೋಳ್ಯಾರ್ ಅವರ ಆಕಸ್ಮಿಕ ಅಗಲುವಿಕೆಗೆ ನಾಡಿನ ಜನರೆಲ್ಲರ ಜೊತೆ ಬೋಳ್ಯಾರ್ ಮಸೀದಿ ಕೂಡಾ ಸಂತಾಪದ ಶ್ರದ್ಧಾಂಜಲಿ ಸಲ್ಲಿಸಿದೆ. ಮಸೀದಿ ಉದ್ಘಾಟನೆಯ ಬೆನ್ನಲ್ಲೇ ಮಸೀದಿಯಲ್ಲಿ ಶ್ರದ್ಧಾಂಜಲಿ ಪ್ರಾರ್ಥನೆ ನಡೆದಿರುವುದು ವಿಶೇಷ ಮತ್ತು ಮಾನವೀಯ ಸ್ಪಂದನದ ಸಾಮರಸ್ಯಕ್ಕೆ ಕನ್ನಡಿ ಹಿಡಿಯಿತು.
ಕರಪತ್ರ ವಿನ್ಯಾಸ, ಪ್ಲೆಕ್ಸ್ ಪ್ರಿಂಟಿಂಗ್ ವ್ಯವಹಾರ ನಡೆಸುತ್ತಿದ್ದ ಸಂತು ಗ್ರಾಫಿಕ್ಸ್ ಮಾಲಕ ಸಂತೋಷ್ ನಾಯಕ್ ಶನಿವಾರ ರಾತ್ರಿ ಹೃದಯಾಘಾತದಿಂದ ಮೃತಪಟ್ಟಿದ್ದರು. ಬಡ ಹಿನ್ನೆಲೆಯಲ್ಲಿ ಹುಟ್ಟಿ ಬೆಳೆದ ಸಂತೋಷ್ ನಾಯಕ್ ಯಕ್ಷಗಾನ ಸಂಘಟಕ, ಬಪ್ಪನಾಡು ಮೇಳದ ಕ್ಯಾಂಪ್ ಮೇನೇಜರ್ ಆಗಿ ಜತೆಯಲ್ಲೇ ಫ್ಲೆಕ್ಸ್ ಬ್ಯಾನರ್ ತಯಾರಿ ಉದ್ಯಮಕ್ಕಿಳಿದಿದ್ದರು. ಪ್ರಾಥಮಿಕ ಶಿಕ್ಷಣವಷ್ಟೇ ಪಡೆದಿದ್ದ ಅವರು 2009ರಲ್ಲಿ ಕಂಪ್ಯೂಟರ್ ಕಲಿತು ಸ್ವ ಉದ್ಯಮಕ್ಕೆ ಕಾಲೂರಿ ಯಶಸ್ವಿಯಾಗಿದ್ದರು. ನಾಡಿನಲ್ಲಿ ಎಲ್ಲರ ಜತೆ ಬೆರೆಯುತ್ತಾ, ಸಂಘ ಸಂಸ್ಥೆಗಳ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಾ ಜನಾನುರಾಗಿಯಾಗಿದ್ದರು.
ಎರಡುದಿನಗಳ ಹಿಂದೆ ಬೋಳಿಯಾರ್ ಮಸೀದಿಯ ನವೀಕೃತ ಕಟ್ಟಡ ಉದ್ಘಾಟನೆ ನಡೆದಿತ್ತು. ಅಲ್ಲಿಗೆ ಶುಭಾಶಯ ಕೋರುವ ಬ್ಯಾನರ್ ಗಳನ್ನೆಲ್ಲಾ ಸಂತೋಷ್ ತಯಾರಿಸಿ ಕೊಟ್ಟಿದ್ದರು. ಅಲ್ಲದೇ ಉದ್ಘಾಟನೆ ದಿನ ಮಸೀದಿಗೆ ತೆರಳಿ, ಇದು ನಮ್ಮೂರಿನ ಮಸೀದಿ ಎಂದು ಎಲ್ಲರ ಜತೆ ಬೆರೆತಿದ್ದರು. ಅದರ ಮರುದಿನವೇ ಅವರ ಮರಣವಾರ್ತೆ ಕೇಳಿದ ಹಿನ್ನೆಲೆಯಲ್ಲಿ ಮಸೀದಿಯಲ್ಲಿ ಶ್ರದ್ಧಾಂಜಲಿ ಪ್ರಾರ್ಥನೆ ಸಲ್ಲಿಸಲಾಯಿತು. ಮಸೀದಿ ಪ್ರಮುಖರು ಅವರ ಗುಣಗಾನ ಮಾಡಿದರು.