- ಗಡಿನಾಡ ಕನ್ನಡಿಗ, ಕೂಡ್ಲು ಗ್ರಾಮಾಧಿಕಾರಿ ಎಂ.ಬಿ.ಜಯಪ್ರಕಾಶ್ ಆಚಾರ್ಯರಿಗೆ ಕೇರಳದ ಅತ್ಯುತ್ತಮ ವಿಲೇಜ್ ಆಫೀಸರ್ ಪ್ರಶಸ್ತಿ
- ಹುಟ್ಟಿ ಬದುಕಿದ ಮಣ್ಣಿಗೆ ಪಟ್ಟೆ ಇಲ್ಲದೇ ಬಳಲಿದ ಪರಿಶಿಷ್ಟರಿಗೆ ಹಕ್ಕುಪತ್ರವನ್ನೊದಗಿಸಿದ ಸೇವೆಗೆ ರಾಜ್ಯದ ಮನ್ನಣೆ
ಕೇರಳ ರಾಜ್ಯದ ಅತ್ಯುತ್ತಮ ಗ್ರಾಮಾಧಿಕಾರಿ (ವಿಲೇಜ್ ಆಫೀಸರ್) ಪ್ರಶಸ್ತಿಗೆ ಗಡಿನಾಡ ಕನ್ನಡಿಗ, ಕೂಡ್ಳು ಗ್ರಾಮಾಧಿಕಾರಿ ಎಂ.ಬಿ.ಜಯಪ್ರಕಾಶ್ ಆಚಾರ್ಯ ಅರ್ಹರಾಗಿದ್ದಾರೆ.
ಕಂದಾಯ ಇಲಾಖೆಯಲ್ಲಿ ಸಲ್ಲಿಸಿದ ಪ್ರಾಮಾಣಿಕ ಸೇವೆ ಮತ್ತು ಸರಕಾರಿ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ಒದಗಿಸಿದ ಕರ್ತವ್ಯ ದಕ್ಷತೆಯನ್ನು ಪರಿಗಣಿಸಿ ಪ್ರಶಸ್ತಿ ಘೋಷಿಸಲಾಗಿದೆ.
ಸಿರಿಬಾಗಿಲು, ಕೂಡ್ಲು, ಮೊಗ್ರಾಲ್ ಪುತ್ತೂರು ಗ್ರಾಮಗಳು ಸಂಯುಕ್ತವಾಗಿ ಕೂಡ್ಲು ಗ್ರೂಪ್ ವಿಲೇಜ್ ಆಗಿದ್ದು, ಇಲ್ಲಿ ಗ್ರಾಮಾಧಿಕಾರಿಯಾಗಿ ಎಂ.ಬಿ.ಜಯಪ್ರಕಾಶ್ ಆಚಾರ್ಯ ಸೇವೆ ಸಲ್ಲಿಸುತ್ತಿದ್ದಾರೆ. ಎರಡೂವರೆ ವರ್ಷಗಳ ಹಿಂದೆ ಇವರ ಅಣ್ಣ ಎಂ.ಬಿ.ಲೋಕೇಶ್ ಆಚಾರ್ಯ ಭಡ್ತಿಗೊಂಡು ತೆರವಾದ ಈ ಹುದ್ದೆಗೆ ಅಣ್ಮನಿಂದಲೇ ಅಧಿಕಾರ ಸ್ವೀಕರಿಸಿ ಗ್ರಾಮಾಧಿಕಾರಿಯಾಗಿ ನೇಮಕವಾದ
ಇವರು ಎರಡೂವರೆ ವರ್ಷದ ಅವಧಿಯಲ್ಲೇ ಅತ್ಯುತ್ತಮ ಗ್ರಾಮಾಧಿಕಾರಿಯೆಂದು ಕೇರಳ ರಾಜ್ಯ ಮಟ್ಟದಲ್ಲಿ ಪರಿಗಣಿತವಾದದ್ದು ಸೇವೆಗೆ ಸಂದ ಮನ್ನಣೆ. ಸಿರಿಬಾಗಿಲು ಗ್ರಾಮದ ಪುಳ್ಕೂರು ಎಂಬಲ್ಲಿರುವ ಪರಿಶಿಷ್ಟರ ಅನೇಕ ಮನೆಗಳಿರುವ ಭೂಮಿಗೆ ದಶಕಗಳಿಂದ ಹಕ್ಕುಪತ್ರ ಸಿಕ್ಕಿರಲಿಲ್ಲ. ಜಾಗದ ಪಟ್ಟೆ ಸಿಗದೇ , ಏನೂ ಮಾಡಲಾಗದೇ ಅವರು ಬಸವಳಿಯುತ್ತಿದ್ದರು. ಈ ಬೇಡಿಕೆ ಮತ್ತು ಅವರ ಸಮಸ್ಯೆಯನ್ನು ಜನಪರ ಕಾಳಜಿಯಿಂದ ಕಳೆದ ಎರಡೂವರೆ ವರ್ಷದ ಅವಧಿಯೊಳಗೆ ಜಯಪ್ರಕಾಶ್ ಪರಿಹರಿಸಿ, ಭೂಮಿಗೆ ಪಟ್ಟೆ ನೀಡುವಂತೆ ಮಾಡಿದ್ದಾರೆ. ಇಂಥ ಕಾಳಜಿಯ ಸೇವೆ ಪರಿಗಣಿಸಿ ಪ್ರಶಸ್ತಿ ನೀಡಲಾಗಿದೆ.
2005ರಲ್ಲಿ ಕೇರಳ ಸರಕಾರಿ ಹುದ್ದೆಗೆ ಸೇರ್ಪಡೆಗೊಂಡ ಇವರು 2005ರಿಂದ 2022ರ ತನಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದರು. 2022 ಆಗಸ್ಟ್ 29ರಂದು ಕೂಡ್ಲು ಗ್ರೂಪ್ ವಿಲೇಜ್ ಆಫೀಸರ್ ಆಗಿ ನೇಮಕಗೊಂಡರು.
ಬೆದ್ರಡ್ಕದ ದೇಶಮಂಗಲ ನಿವಾಸಿಯಾದ ಇವರು ಎಂ.ಬಟ್ಯಪ್ಪ ಆಚಾರ್ಯ-ಪರಮೇಶ್ವರಿ ದಂಪತಿಯರ ಪುತ್ರ. ಪತ್ನಿ ಯು.ಪಿ.ದೇವಿಕ(ಗೃಹಿಣಿ), ವನ್ಮಯಿ, ದೇವಿಪ್ರಕಾಶ್(ಮಕ್ಕಳು) ಜತೆ ವಾಸಿಸುತ್ತಾರೆ.
ಇವರ ಸೇವೆ ಮತ್ತು ಅದಕ್ಕೊಲಿದ ರಾಜ್ಯ ಪ್ರಶಸ್ತಿ ಗೌರವದ ಹಿನ್ನೆಲೆಯಲ್ಲಿ ಅವರನ್ನು ಶ್ರೀಮದ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠಾಧೀಶ ಪ.ಪೂ, ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮಿಗಳವರು ಶ್ರೀಸಂಸ್ಥಾನದ ಮಂಗಲ ಮಂತ್ರಾಕ್ಷತೆಯೊಂದಿಗೆ ಅಭಿನಂದನೆ ತಿಳಿಸಿದ್ದಾರೆ.
ಸರಕಾರ ಮತ್ತು ಜನರ ನೇರ ಮುಖಾಮುಖಿಯಾಗುವುದೇ ಗ್ರಾಮ ಕಚೇರಿಗಳಲ್ಲಿ. ಗ್ರಾಮ ಕಚೇರಿಗೆ ಬಂದು ಬೇಡಿಕೆ ಸಲ್ಲಿಸಿ, ಸಮಸ್ಯೆಯ ಅಹವಾಲುಗಳಿತ್ತವರನ್ನು ನಾನೆಂದೂ ನಿರ್ಲಕ್ಷಿಸಿಲ್ಲ. ಸರಕಾರಿ ನಿಯಮ-ನಿಬಂಧನೆಗಳಂತೆ ಅರ್ಹ ಫಲಾನುಭವಿಗಳಿಗೆ ಸರಕಾರಿ ಸೌಲಭ್ಯ ತಲುಪಲು ಗರಿಷ್ಟ ಪ್ರಯತ್ನ ನಡೆಸಿದ್ದೇನೆ. ಅದನ್ನು ಗುರುತಿಸಿ ಕೇರಳ ರಾಜ್ಯದ ಅತ್ಯುತ್ತಮ ಗ್ರಾಮಾಧಿಕಾರಿ ಎಂಬ ಪ್ರಶಸ್ತಿಗೆ ಪಾತ್ರನಾದುದರಲ್ಲಿ ಸಂತಸ, ತೃಪ್ತಿ ಇದೆ. ಇಂಥ ಗೌರವಗಳು ಒಲಿದಾಗ ನಮ್ಮ ಸರಕಾರಿ ಸೇವೆಗೆ ಇನ್ನಷ್ಟು ಸ್ಪೂರ್ತಿಯ ಪ್ರೇರಣೆ ಸಿಗುತ್ತದೆ.
ಓರ್ವ ಸರಕಾರಿ ನೌಕರನಾಗಿ ಪ್ರಾಮಾಣಿಕ ದಕ್ಷತೆಯಿಂದ ದುಡಿದುದಕ್ಕೆ ಸಿಕ್ಕ ಅಂಗೀಕಾರವಿದು. ಆದ್ದರಿಂದ ಸಂತೋಷವಾಗಿದೆ..– ಎಂ.ಬಿ. ಜಯಪ್ರಕಾಶ್ ಆಚಾರ್ಯ
-ರಾಜ್ಯ ಪ್ರಶಸ್ತಿ ವಿಜೇತ ಅತ್ಯುತ್ತಮ ಗ್ರಾಮಾಧಿಕಾರಿ