- ರಾಷ್ಟ್ರ ರಾಜಧಾನಿ ದೆಹಲಿ ಮುಖ್ಯಮಂತ್ರಿ ಗದ್ದುಗೆಯನ್ನು ಮಹಿಳೆಗಿತ್ತು ಆದರ್ಶ ಮೆರೆದ ಬಿಜೆಪಿ
- ನೂತನ ದಿಲ್ಲಿ ಸಿಎಂ ಪಟ್ಟ ರೇಖಾ ಗುಪ್ತಾ ಅವರಿಗೆ, ಬಿ.ಜೆ.ಪಿ.ಯಿಂದ ಮಹಿಳಾ ಮೀಸಲಾತಿಗೆ ಮನ್ನಣೆ
ನವದೆಹಲಿ: ದೆಹಲಿಯ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ರಾಷ್ಟ್ರ ರಾಜಧಾನಿಗೆ 26 ವರ್ಷಗಳ ಬಳಿಕ ಸ್ಪಷ್ಟ ಬಹುಮತದಿಂದ ಅಧಿಕಾರದ ಚುಕ್ಕಾಣಿ ಹಿಡಿದ ಬಿಜೆಪಿ ನೂತನ ಮುಖ್ಯಮಂತ್ರಿಯಾಗಿ ಮಹಿಳಾ ಮೋರ್ಛಾ ನಾಯಕಿ , ಶಾಸಕಿ ರೇಖಾಗುಪ್ತ ಅವರಿಗೆ ಸಿಎಂ ಪಟ್ಟ ನೀಡಿದೆ. ಇದೊಂದು ಅಚ್ಚರಿಯ ಆಯ್ಕೆಯೊಂದಿಗೆ ಬಿಜೆಪಿ ಮಹಿಳೆಯರಿಗೆ ಮಣೆ ನೀಡುವುದನ್ನು ಸಾಬೀತು ಪಡಿಸಿದೆ.
ಮುಖ್ಯಮಂತ್ರಿ ಪಟ್ಟದ ರೇಸ್ ನಲ್ಲಿ ವಿಜೇಂದರ್ ಗುಪ್ತಾ, ರೇಖಾ ಗುಪ್ತಾ ಮತ್ತು ಜಿತೇಂದರ್ ಮಹಾಜನ್ ಮೂವರ ಹೆಸರು ಕೇಳಿಬಂದಿತ್ತು. ಬುಧವಾರ ಸಂಜೆ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಬಿಜೆಪಿಯ ಹಿರಿಯ ನಾಯಕರು ಸಭೆ ನಡೆಸಿ ರೇಖಾಗುಪ್ತ ಅವರನ್ನು ಮುಖ್ಯಮಂತ್ರಿ ಮಾಡುವ ನಿರ್ಧಾರಕ್ಕೆ ಬಂದಿದ್ದು ಇದಕ್ಕೆ ಪಕ್ಷದ ಎಲ್ಲ ಸದಸ್ಯರ ಒಮ್ಮತ ಕೂಡ ಇದೆ ಎನ್ನಲಾಗಿದೆ.
ಅದರಂತೆ ನಾಳೆ ಗುರುವಾರ(ಫೆ.20) ಮಧ್ಯಾಹ್ನ 12:35 ಕ್ಕೆ ರಾಮಲೀಲಾ ಮೈದಾನದಲ್ಲಿ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದೆ.
ಪ್ರಮಾಣ ವಚನ ಸ್ವೀಕಾರ ಹಿನ್ನೆಲೆಯಲ್ಲಿ ರಾಮಲೀಲಾ ಮೈದಾನದಲ್ಲಿ ಎಲ್ಲ ಸಿದ್ಧತೆಗಳನ್ನು ಮಾಡಲಾಗಿದ್ದು ಅಲ್ಲದೆ ಮೈದಾನದ ಸುತ್ತ ಹೆಚ್ಚಿನ ಭದ್ರತೆಯನ್ನು ಏರ್ಪಡಿಸಲಾಗಿದ್ದು ಅರೆಸೇನಾ ಪಡೆಗಳ ಜತೆಗೆ 5,000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ರಾಮಲೀಲಾ ಮೈದಾನದಲ್ಲಿ ಹಾಗೂ ಸುತ್ತಮುತ್ತ ನಿಯೋಜಿಸಲಾಗಿದೆ.
70 ಸದಸ್ಯ ಬಲದ ದೆಹಲಿ ವಿಧಾನ ಸಭೆಯಲ್ಲಿ ಫೆ.5ರಂದು ಚುನಾವಣೆ ನಡೆದು, 48 ಕ್ಷೇತ್ರಗಳನ್ನು ಗೆದ್ದು ಬಿಜೆಪಿ 26 ವರ್ಷಗಳ ಬಳಿಕ ಮತ್ತೆ ಅಧಿಕಾರದ ಪೀಠಕ್ಕೇರಿದೆ. ಆಡಳಿತ ನಡೆಸಿದ್ದ,ಎಎಪಿ ಕೇವಲ 22 ಸ್ಥಾನ ಪಡೆದರೆ, ಒಂದು ಕಾಲಕ್ಕೆ ದೆಹಲಿಯನ್ನು ದಶಕಗಳ ಕಾಲ ಆಳಿದ ಕಾಂಗ್ರೆಸ್ ಒಂದೂ ಸ್ಥಾನ ಪಡೆದಿರಲಿಲ್ಲ. ದೆಹಲಿ ಸಿಎಂ ಆಗಿದ್ದ ಅರವಿಂದ ಕೇಜ್ರೀವಾಲ್ ಅವರನ್ನು ಪರಾಭವಗೊಳಿಸಿದ ಮಾಜಿ ಸಂಸದ, ಪರ್ವೇಷ್ ವರ್ಮ ಅವರಿಗೆ ಸಿಎಂ ಸ್ಥಾನ ಸಿಗುವುದೆಂದೇ ಖಚಿತವಾಗಿತ್ತಾದರೂ, ದೇಶದಲ್ಲಿ ಬಿಜೆಪಿಗೆ ಮಹಿಳಾ ಮುಖ್ಯಮಂತ್ರಿಗಳಿಲ್ಲ ಎಂಬ ಕಾರಣದಿಂದ ಈ ಆಯ್ಕೆ ನಡೆದಿದೆ.