- ಕಣ್ಣೂರಿನ ತಳಿಪರಂಬ ರಾಜರಾಜೇಶ್ವರ ಕ್ಷೇತ್ರಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಆಗಮಿಸುವರೇ….?
- ಮೋದಿಯವರಿಂದಲೇ ಲೋಕಾರ್ಪಣೆ ಕಾಣಲಿದೆಯೇ ತಾಮ್ರ ನಿರ್ಮಿತ ಪೂರ್ಣಕಾಯ ಪ್ರತಿಮೆ..?
- ಪ್ರಧಾನಿ ಕಾರ್ಯಾಲಯದ ನಿರ್ದೇಶನದಂತೆ ಕ್ಷೇತ್ರಕ್ಕೆ ಅಧಿಕಾರಿಗಳ ಭೇಟಿ, ರಕ್ಷಣಾ ಚಟುವಟಿಕೆಯ ಅಣಕು ಪ್ರದರ್ಶನ
ಕಣಿಪುರ ಸುದ್ದಿಜಾಲ, ಕಾಸರಗೋಡು:
ಅತ್ಯುತ್ತರ ಕೇರಳದ ಕಣ್ಣೂರು ಬಳಿಯ ತಳಿಪರಂಬ ರಾಜರಾಜೇಶ್ವರ ಕ್ಷೇತ್ರಕ್ಕೆ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಆಗಮಿಸುರೇ…?
ಎಲ್ಲೆಡೆ ಕೌತುಕ ಮೂಡಿಸಿ, ಮೋದಿ ಆಗಮನದ ಪೂರ್ವ ಸಿದ್ಧತೆಯ ರಕ್ಷಣಾ ಚಟುವಟಿಕೆಯ ಅಣಕು ಪ್ರದರ್ಶನ ನಿನ್ನೆ ಶ್ರೀ ಕ್ಷೇತ್ರದಲ್ಲಿ ನಡೆದಿದೆ. ಪ್ರಧಾನಿ ಆಗಮನ ಖಚಿತವಾಗದಿದ್ದರೂ, ಪ್ರಧಾನಮಂತ್ರಿಯವರ ಕಾರ್ಯಾಲಯದ ನಿರ್ದೇಶನದಂತೆಯೇ ಅಣಕು ಪ್ರದರ್ಶನ ನಡೆದಿದೆ. ಇದರಂತೆ ಮೋದಿ ಆಗಮಿಸುವರೆಂಬ ವದಂತಿಗೆ ಪುಷ್ಠಿ ದೊರೆತಿದೆ.
ತಳಿಪರಂಬ ನಿವಾಸಿ ಉದ್ಯಮಿ ಹಾಗೂ ಪ್ರಮುಖ ಸಿನಿಮ ನಿರ್ಮಾಪಕನಾದ ಮೊಟ್ಟಮ್ಮಲ್ ರಾಜನ್ ಅವರು ತನ್ನ ಸೇವಾ ರೂಪವಾಗಿ ದೇಶದಲ್ಲೇ ವಿಶಿಷ್ಠವಾದ ಮಹಾದೇವನ ತಾಮ್ರದ ಪೂರ್ಣಶಿಲ್ಪವನ್ನು ತಳಿಪರಂಬ ದೇಗುಲದಲ್ಲಿ ಕಡೆದು ನಿಲ್ಲಿಸಿದ್ದಾರೆ. ಇದರ ಸಮರ್ಪಣೆ ಪ್ರಧಾನಿ ಮೋದಿಯವರಿಂದಾಗಬೇಕೆಂಬುದು ಅವರ ಬಯಕೆ. ಈ ನಿಟ್ಟಿನಲ್ಲಿ ಪ್ರಧಾನಿ ಕಛೇರಿಯನ್ನು ಈ ಹಿಂದೆಯೇ ಸಂಪರ್ಕಿಸಿ, ಪ್ರಧಾನಿಯವರ ಆಗಮನವನ್ನು ಕೋರಲಾಗಿದೆ.
ಕೇರಳದ ಪ್ರಾಚೀನವಾದ 108 ಶಿವ ಕ್ಷೇತ್ರಗಳ ಪೈಕಿ ತಳಿಪರಂಬ ರಾಜರಾಜೇಶ್ವರ ಕ್ಷೇತ್ರ ತನ್ನ ಐತಿಹ್ಯಗಳಿಂದ ಅತ್ಯುತ್ತರ ಕೇರಳದ ಪ್ರಮುಖ ಶಿವಾಲಯವಾಗಿ ಜನಪ್ರಿಯಗೊಂಡಿದೆ. ಈಗಾಗಲೇ ಕೇಂದ್ರ ಗೃಹ ಸಚಿವ ಅಮಿತ್ ಷಾ, ಮಾಜಿ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್.ಯಡ್ಯೂರಪ್ಪ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸೇರಿದಂತೆ ಪ್ರಮುಖ ಬಿಜೆಪಿ ನಾಯಕರು ಇಲ್ಲಿಗಾಗಮಿಸಿದ್ದು, ಈಗ ಪ್ರಧಾನಿ ನರೇಂದ್ರ ಮೋದಿ ಆಗಮನವನ್ನು ನಿರೀಕ್ಷಿಸಲಾಗಿದೆ.
ಪ್ರಧಾನಮಂತ್ರಿಯವರ ಕಾರ್ಯಾಲಯದ ನಿರ್ದೇಶನದಂತೆ ಪುರಾತತ್ವ ಇಲಾಖೆ ಪ್ರತಿನಿಧಿಗಳು ದೇವಾಲಯ ಸಂದರ್ಶಿಸಿ ನೈಜ ವರದಿ ಸಂಗ್ರಹಿಸಿದ್ದಾರೆ. ಅಲ್ಲದೇ ಕಮಾಂಡೋಗಳು ಆಗಮಿಸಿ ರಕ್ಷಣಾ ಚಟುವಟಿಕೆಯ ಅಣಕು ಪ್ರದರ್ಶನ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಮೋದಿ ಆಗಮನ ಘೋಷಣೆಯಾಗದಿದ್ದರೂ, ಆಗಮನ ಖಚಿತವೆಂಬ ವರದಿ ಕೇಳಿಬರುತ್ತಿದೆ.
ಖ್ಯಾತ ಶಿಲ್ಪಿ ಕಾನಾಯಿ ಉಣ್ಣಿ ಅವರು ಕಳೆದ 4ವರ್ಷಗಳ ದುಡಿಮೆಯಿಂದ 14 ಅಡಿ ಎತ್ತರದ 400ಕಿಲೋ ತೂಕದ
ಬೃಹತ್ ಗಾತ್ರದ ಪೂರ್ಣಕಾಯ ಶಿವಶಿಲ್ಫವನ್ನು ತಾಮ್ರದಲ್ಲಿ ನಿರ್ಮಿಸಿದ್ದಾರೆ. ಕಾಂಕ್ರೀಟಿನಲ್ಲಿ ನಿರ್ಮಿಸಲ್ಪಟ್ಟ ಶಿವ ಶಿಲ್ಪ ಇದಕ್ಕಿಂತಲೂ ದೊಡ್ಡದು ಬೇರೆ ಇದೆ. ಆದರೆ ತಾಮ್ರದಲ್ಲಿ ನಿರ್ಮಿತವಾದ ಏಕೈಕ ಬೃಹತ್ ಶಿಲ್ಪ ಇದಾಗಿದೆ. ರಾಜರಾಜೇಶ್ವರ ದೇಗುಲದ ತೆಂಕಣ ಬಾಗಿಲಿನ ಅಶ್ವಥ್ಥ ಮರದ ಬಳಿ ಈ ಪ್ರತಿಮೆ ಆಳೆತ್ತರದಲ್ಲಿ ವಿರಾಜಮಾನವಾಗಿ ಶೋಭಿಸುತ್ತಿದ್ದು, ಇಡೀ ದೇವಾಲಯಕ್ಕೆ ದಿವ್ಯ ಕಳೆ ನೀಡಿದೆ. ಮುಂಬರುವ ಮಾರ್ಚ್, ಅಥವಾ ಎಪ್ರೀಲ್ ತಿಂಗಳಲ್ಲಿ ಇದು ಲೋಕಾರ್ಪಣೆಯಾಗಲಿದೆ ಎನ್ನಲಾಗುತ್ತಿದೆ