- ಜೀವಿಸಲಿಕ್ಕಾಗಿ ತಿನ್ನಬೇಕೇ ಹೊರತು ತಿನ್ನಲಿಕ್ಕಾಗಿ ಜೀವಿಸಿದ ಪರಿಣಾಮದಿಂದಾಗಿ ನಮ್ಮ ಆರೋಗ್ಯ ಸಂಪತ್ತು ಹದಗೆಟ್ಟಿದೆ. ಮನೆಯೂಟ ಬಿಟ್ಟು ಅರ್ಧ ಬೆಂದಂತಿರುವ ಆಹಾರಭ್ಯಾಸ ನಮ್ಮನ್ನು ಸೋಮಾರಿಯನ್ನಾಗಿಸುತ್ತಿದೆ.
ಆರೋಗ್ಯದ ಭಾಗ್ಯವನ್ನು ಕಳೆದುಕೊಂಡರೆ ಉಳಿದಿರುವುದು ಯಾವುದೂ ನಮಗೆ ಸಿಗದಂತಾಗುತ್ತದೆ.
ಸಿಗುವುದೆಲ್ಲವನ್ನು ಹೊಟ್ಟೆಗಿಳಿಸುವ ಹೊಸತನ
ಬೀದಿ ಪಾಲಾಗುತ್ತಿದೆ ಆರೋಗ್ಯ ರಂಗ…
ಅದೊಂದು ಏಕಪಾತ್ರಾಭಿನಯದ ಸ್ಪರ್ಧಾ ವೇದಿಕೆ.ಸಾಮಾನ್ಯ ಮಧ್ಯಮ ವರ್ಗದ ಹೆಣ್ಣು ಮಗಳೊಬ್ಬಳು ಗೆಳತಿಯ ಒತ್ತಡ,ಒತ್ತಾಯಕ್ಕೆ ಮಣಿದು ಸಂಜೆ ಹೊತ್ತಿಗೆ ಚೈನೀಸ್ ಫುಡ್ ಕಾರ್ನರ್ ಗೆ ತಲಪುವ ಸಂದರ್ಭದಿಂದ ಅಭಿನಯ ಆರಂಭವಾಗುತ್ತದೆ. ಎರಡು ಮೂರು ಗಂಟೆಗಳೊಳಗೆ ಹೋಟೇಲಿನ ವಿಶೇಷ ಭಕ್ಷ್ಯ ಸಂಪತ್ತನ್ನು ಒಂದೊಂದಾಗಿ ಹೊಟ್ಟೆಗಿಳಿಸುವ ಚಟ ಮುಂದುವರಿಯುತ್ತದೆ.
ಸಂಜೆ ಆರರ ಹೊತ್ತಿಗೆ ಮನೆಗೆ ತಲಪುತ್ತಿದ್ದ ಆ ಹೆಣ್ಣುಮಗಳು ಒಂಭತ್ತು ಹತ್ತರ ತಡರಾತ್ರಿಯಲ್ಲದೆ ಹಿಂತಿರುಗುತ್ತಿರಲಿಲ್ಲ. ಮನೆ ಮಂದಿಯನ್ನು ಸಮಾಧಾನಪಡಿಸಲು ಫಾಸ್ಟ್ ಫುಡ್ ಗಳ ಪಾರ್ಸೆಲ್ ಪೊಟ್ಟಣವೂ ಜೊತೆಗೆ ಪ್ರಯಾಣಿಸುತ್ತಿದ್ದವು.
ಅಮ್ಮ ಮತ್ತು ಚಿಕ್ಕಮ್ಮನ ಮನೆ ತಿಂಡಿಯನ್ನು ಮಾತ್ರವೇ ಇಷ್ಟ ಪಟ್ಟು ಮುಗಿಸುತ್ತಿದ್ದ ಅವಳಿಗೆ ಹೊರಗಿನ ಆಹಾರ ರೀತಿಯು ಕ್ರಮೇಣವಾಗಿ ರಾತ್ರಿ ನಿದ್ದೆಯ ಕೊರತೆಯನ್ನು ಕಾಡಿತು.ಆಸಿಡಿಟಿಗಾಗಿ ಔಷಧ ಆರಂಭಿಸಿದಳು. ಈ ನಡುವೆ ನಿತ್ರಾಣ ಮತ್ತು ಕೆಲಸದಲ್ಲಿ ನಿರಾಸಕ್ತಿಯ ಕೊರತೆ ಕಂಡುಬಂತು. ಆದರೂ,ಸಂಧ್ಯಾ ಸಮಯದ ಫುಡ್ ಕಾರ್ನರ್ ಭೇಟಿಯನ್ನು ಬಿಡಲು ಸಾಧ್ಯವಾಗದಿರುವುದನ್ನು ಏಕವ್ಯಕ್ತಿತ್ವವು ಮನೋಜ್ಞವಾಗಿ ಅಭಿನಯಿಸುವುದು ಮುಂದುವರಿಯುತ್ತಿತ್ತು.
ಅದೊಂದು ತಡ ರಾತ್ರಿ ಉಂಟಾದ ಎದೆನೋವು ಆ ಮನೆಯ ಸಕಲ ಸಂಪತ್ತನ್ನೂ ಲೂಟಿ ಮಾಡಿತು. ಹಿರಿಯರು ಕಾಪಾಡಿಕೊಂಡು ಬಂದ ತರವಾಡನ್ನೇ ಮಾರಾಟ ಮಾಡಬೇಕಾಯಿತು. ಕಿರಿಮಗಳ ಆರೋಗ್ಯದ ಸಂಪತ್ತಿಗಾಗಿ ಹಿರಿಯವಳ ಮದುವೆ ಕಾರ್ಯಕ್ರಮವನ್ನು ಮುಂದೂಡಬೇಕಾಯಿತು.
ಅದೆಲ್ಲಿಂದಲೋ ಹಾರಿ ಬಂದ ಹೃದ್ರೋಗ ತಜ್ಞರು,”ಇನ್ನು ಮುಂದೆ ನೀವು ಮನೆಯ ಆಹಾರವನ್ನು ಬಿಟ್ಟು ಹೊರಗಿನ ತಿಂಡಿ ತಿನಸುಗಳನ್ನು ತಿನ್ನುವ ಹಾಗಿಲ್ಲ” ಎಂದು ಹೇಳುತ್ತಾ ಅಸಾಮಾನ್ಯ ಹಣದ ಗಂಟನ್ನು ಹೆಗಲಿಗೇರಿಸಿ ನಿರ್ಗಮಿಸುವುದರೊಂದಿಗೆ ಏಕಪಾತ್ರಾಭಿನಯಕ್ಕೆ ತೆರೆ ಬಿತ್ತು.
ತೀರ್ಪುದಾರರು ಒಂದು ಕ್ಷಣ ತಬ್ಬಿಬ್ಬಾದರು. ಪ್ರೇಕ್ಷಕರ ಕೈ ಚಪ್ಪಾಳೆಯು ಅವಳಿಗೆ ಅತ್ಯಂತ ಹೆಚ್ಚು ಅಂಕ ಲಭಿಸುವಂತೆಯೂ ಮಾಡುವಲ್ಲಿಯೂ ಯಶಸ್ವಿಯಾಯಿತು.
ಶ್ರೀಮಂತವಾಗಿರಬೇಕು ಬೆಳಗ್ಗಿನ ಉಪಹಾರ,ಬಡವನಂತಿರಬೇಕು ರಾತ್ರಿಯ ಊಟೋಪಚಾರ ಎಂಬುವುದನ್ನು ಅದೆಲ್ಲಿಯೂ ಕೇಳಿದ,ಅದ್ಯಾರೋ ಹಿರಿತನ ಹೇಳಿದ ನೆನಪು ನಮಗಿದೆ. ಆದರೆ,ಕಾಲ ಬದಲಾದಂತೆ ಹವಾಮಾನ ವೈಪರೀತ್ಯಕ್ಕೆ ನಾವು ಕಾರಣರಾದಂತೆ ಜೀವನ ಶೈಲಿ ರೋಗಗಳು ನಮ್ಮನ್ನು ಆಳುತ್ತಿವೆ ಎನ್ನುವುದನ್ನು ಒಪ್ಪಲೇ ಬೇಕು. ದೈನಂದಿನ ಕೆಲಸ ಕಾರ್ಯಗಳಲ್ಲಿ ಆರಂಭವಾಗುವ ಅನಾವಶ್ಯಕ ಒತ್ತಡಗಳಿಂದ ಆರಂಭಿಸಿ ನಿತ್ಯವೂ ತಡರಾತ್ರಿಯ ವರೆಗೆ ಮುಂದುವರಿಯುವ ಪಾರ್ಟಿಗಳಿಂದಾಗಿ ನಮ್ಮ ಆರೋಗ್ಯ ಸಂಪತ್ತು ಕರಗುತ್ತಿದೆ. ಬಡವ,ಬಲ್ಲಿದ,
ಶ್ರೀಮಂತ ಮಧ್ಯಮ ವರ್ಗದವರಲ್ಲಿ ಜೀವನ ಶೈಲಿ ರೋಗಗಳು ನುಸುಳಿಕೊಂಡಿವೆ.
ಔಷಧಿ ಬಳಸದ ಮನೆಗಳಿಲ್ಲ. ಔಷಧಾಲಯವಿಲ್ಲದ ಊರುಗಳಿಲ್ಲ ಎಂಬಂತೆ ನಾವು ಅಭಿವೃದ್ಧಿಹೊಂದಿದ್ದೇವೆ.!
ಒಂದು ವರ್ಷದ ಪುಟ್ಟ ಕಂದನ ಬರ್ತ್ಡೇಯನ್ನು ಹೋಟೆಲ್,ಮಾಲ್ ಗಳಲ್ಲಿ ಸಂಭ್ರಮಿಸುವುದಾದರೆ ಮನೆಯನ್ನು ಕೋಟಿಗಳಷ್ಟು ಖರ್ಚು ಮಾಡಿ ಕಟ್ಟುವ ಅವಶ್ಯಕತೆಯಿತ್ತೇ..?ಮಾತ್ರವಲ್ಲದೆ ಪಾರ್ಟಿಗೆ ತೆರಳುವಾಗ ಮಕ್ಕಳು ಮತ್ತು ಯುವಕರ ಗುಂಪಿಗೆ ಹೆಚ್ಚಿನ ಅವಕಾಶ ದೊರಕುತ್ತಿದ್ದು ಹಿರಿಯ ಜೀವ ಮನೆಯಲ್ಲಿಯೇ ಉಳಿದುಕೊಂಡು ಕೌಟುಂಬಿಕ ಒಡನಾಟವನ್ನು ಮರೆತು ಬಿಡುವಂತಹ ವಿದೇಶೀ ಸಂಸ್ಕೃತಿಗೆ ಮಾರು ಹೋಗುತ್ತಿದೇವೆ.
ಇಂತಹ ಹಲವು ಪ್ರಕರಣಗಳಿಂದ ನಾವಿಂದು ನಮ್ಮ ಆರೋಗ್ಯ ಸಂಪತ್ತನ್ನು ಕಳೆದುಕೊಳ್ಳುತ್ತಿದ್ದೇವೆ. ಗಳಿಸಿದ್ದೆಲ್ಲವನ್ನು ಆರೋಗ್ಯ ರಂಗಕ್ಕೆ ಧಾರೆ ಎರೆಯುತ್ತಿದ್ದೇವೆ.ಹಲವು ರೋಗಗಳಿಗೆ ಓನ್ಲೈನ್ ಚಿಕಿತ್ಸೆ ಮಾಡುವಲ್ಲಿಯೂ ನಾವು ಹೆಸರು ಗಳಿಸಿದ್ದೇವೆ.
ಮನೆ ಮಠವನ್ನು ಮಾರಾಟ ಮಾಡಿ ಆಸ್ಪತ್ರೆ ಫೀಸು ಭರಿಸಬೇಕಾದ ಸ್ಥಿತಿಯಲ್ಲಿ ಪರದಾಡುತ್ತಿದ್ದೇವೆ. ಎಲ್ಲವೂ ನಮ್ಮಿಂದಲೇ.ನಾವು ಸೇವಿಸಿದ ಆಹಾರದಿಂದಲೇ…!
ಅತಿ ಹಿರಿಯರು ಹೇಳುತ್ತಿದ್ದರಂತೆ,”ಕಡಿಮೆ ತಿನ್ನು ಹೆಚ್ಚು ಕಾಲ ಜೀವಿಸು.”
ಆದರೆ ಇದೀಗ,ಧ್ಯೇಯ ಬಲಾಗಿದೆ. “ಹೆಚ್ಚು ತಿನ್ನು,ಬೇಗ ಬೇಗ ತಿನ್ನು ಮತ್ತು ಹಾಸಿಗೆಯಲ್ಲಿ ಮಲಗಿಕೊಂಡೇ ದೀರ್ಘಕಾಲ ಜೀವಿಸು”.
ಏನಂತೀರಿ ನೀವು..?
- ಬಣ್ಣವೂ…ಎಣ್ಣೆಯೂ…..
- ಕರಿದ ಮತ್ತು ರಂಗು ರಂಗಿನ ತಿಂಡಿಗಳಿಗೆ ಬಳಕೆದಾರರು ಹೆಚ್ಚು. ಅವುಗಳನ್ನು ಆಸ್ವಾದಿಸಿ ತಿನ್ನುತ್ತಾ ಸಮಯ ಕಳೆಯುವ ಯುವ ಜನಾಂಗವೊಂದು ಇದೀಗ ಸಿಧ್ಧಗೊಳ್ಳುತ್ತಿದೆ. ಭಾರತೀಯ ಆಹಾರ ಪಧ್ಧತಿಗೆ ತದ್ವಿರುಧ್ದವಾದದ್ದು ಮಾತ್ರವಲ್ಲದೆ ಬಳಕೆಗೆ ಅನುಮತಿ ಇರದ ಹತ್ತು ಹಲವು ಹಾನಿಕಾರಕ ರಾಸಾಯನಿಕಗಳಿಂದಾಗಿ ಹೊರಗಿನ ಆಹಾರ ವೈವಿಧ್ಯತೆ ಹೆಸರುಮಾಡಿದೆ.
- ಕುಳಿತು ತಿನ್ನಲು ಸಾಧ್ಯವಿಲ್ಲದಿರುವಾಗ ಪಾರ್ಸೆಲ್ ಅಥವಾ ಹೋಂ ಡೆಲಿವರಿಯು ನಮ್ಮೆಲ್ಲರನ್ನು ಸೆಳೆಯುತ್ತದೆ. ಕೆಲವೊಂದು ವಿಶೇಷ ಸಂದರ್ಭಗಳು ಒ.ಕೆ.ಎನಿಸಿದರೂ ನಿತ್ಯವೂ ಅವುಗಳನ್ನೇ ಬಯಸುವ ಸಂಸ್ಕೃತಿಗೆ ಬಲಿಯಾದರೆ ಆರೋಗ್ಯ ಹದಗೆಡುವುದರಲ್ಲಿ ಸಂಶಯ ಬೇಡ. ಕೆಲವೊಮ್ಮೆ ಒಡನಾಟದ ಕೊರತೆ,ಬರ್ತ್ ಡೇ ,ಮ್ಯಾರೀಜ್ ಡೇ ಮುಂತಾದ ಹಣ ಬಲದ,ದುಂದು ವೆಚ್ಚದ ಕಾರ್ಯಕ್ರಮಗಳೇ ನಮ್ಮನ್ನು ಸೋಲಿಸಿಬಿಡುತ್ತವೆ.
- ಒಟ್ಟಿನಲ್ಲಿ ಏನು ತಿನ್ನಬೇಕೆನ್ನುವ ಸ್ವಾತಂತ್ರ್ಯ ನಮಗಿದ್ದರೂ ಏನು ತಿನ್ನಬಾರದೆಂಬುವುದನ್ನು ನಿರ್ಧರಿಸಲು ಗಟ್ಟಿ ಮನಸ್ಸನ್ನು ಬೆಳೆಸಬೇಕಾಗಿರುವುದು ಇಂದಿನ ತುರ್ತು ಅಗತ್ಯವಾಗಿದೆ.