ಉತ್ತರಪ್ರದೇಶದ ಪ್ರಯಾಗ್ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದವರ ಸಂಖ್ಯೆ 50ಕೋಟಿ ದಾಟಿ ಜಾಗತಿಕ ದಾಖಲೆ ನಿರ್ಮಿಸಿದೆ. ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿರುವ ಜನಸಂಖ್ಯೆಯನ್ನು ಕಂಡು ಜಗತ್ತೇ ಬೆರಗಾಗಿದ್ದು, ಇದು ಭಾರತ ಮತ್ತು ಚೀನಾವನ್ನು ಹೊರತು ಪಡಿಸಿ ವಿಶ್ವದ ಯಾವುದೇ ದೇಶದ ಜನಸಂಖ್ಯೆಗಿಂತಲೂ ಹೆಚ್ಚಿದೆ ಎಂಬುದೇ ವಿಶೇಷ.
ವಿಶ್ವಸಂಸ್ಥೆಯ ಜನಗಣತಿಯಂತೆ ಭಾರತ 1.41ಕೋಟಿ, ಚೀನಾ 1.40ಕೋಟಿ ಜನಸಂಖ್ಯೆ ಹೊಂದಿದೆ. ಜಗತ್ತಿನ ಇತರ ದೇಶಗಳು ಇದರ ಅರ್ಧಾಂಶ ಜನಸಂಖ್ಯೆಯನ್ನೂ ಹೊಂದಿಲ್ಲ.
ಜನವರಿ 13ರಂದು ಮಕರ ಸಂಕ್ರಮಣದೊಂದಿಗೆ ಆರಂಭಗೊಂಡ ಕುಂಭಮೇಳವು ಫೆ.26ರಂದು ಸಮಾಪ್ತಿಯಾಗಲಿದೆ. ಈ ಬಾರಿ ಕುಂಭಮೇಳದಲ್ಲಿ 45ಕೋಟಿ ಮಂದಿ ಪಾಲ್ಗೊಳ್ಳುವರೆಂದು ಯು.ಪಿ.ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆರಂಭದಲ್ಲಿ ಹೇಳಿದ್ದರು. ಆದರೆ ಕುಂಭಮೇಳ ಮುಕ್ತಾಯಕ್ಕೆ 11ದಿನಗಳು ಉಳಿದಿರುವಂತೆಯೇ ಪವಿತ್ರ ಸ್ನಾನಗೈದವರ ಸಂಖ್ಯೆ 50ಕೋಟಿ ಮೀರಿದೆ. ಇನ್ನೂ ಒಂದು ಅಮೃತಸ್ನಾನ ಬಾಕಿ ಇರುವುದರಿಂದ ಕುಂಭಮೇಳ ಮುಗಿಯುವಾಗ ಸ್ನಾನಗೈದವರ ಸಂಖ್ಯೆ 60ಕೋಟಿಗೇರುವ ಸಾಧ್ಯತೆಗಳಿವೆ. ಇದು ಜಾಗತಿಕ ದಾಖಲೆಯಾಗಿದೆ. ಎಲ್ಲೆಲ್ಲೂ ಜನಸಾಗರವೇ ತುಂಬಿದ ಪ್ರಯಾಗರಾಜ್ ಪ್ರದೇಶವನ್ನು ಈಗಾಗಲೇ ವಾಹನರಹಿತ ಪ್ರದೇಶವೆಂದು ಘೋಷಿಸಲಾಗಿದೆ.