- ಅಪಾರ ಯಶಸ್ಸಿನ ಪ್ರದರ್ಶನ ದಾಖಲೆ ಕಂಡ ‘ಶಿವದೂತೆ ಗುಳಿಗೆ’ ಬೆನ್ನಲ್ಲೇ ಮತ್ತೊಂದು ಅದ್ದೂರಿ ನಾಟಕ
- ತುಳು ರಂಗಭೂಮಿಯಲ್ಲಿ ಕೌತುಕದ ಸಂಚಲನ ಸೃಷ್ಟಿಸಿದ ಶಿವಾಜಿ..!
- ಮೊದಲ ಪ್ರದರ್ಶನಕ್ಕೆ ಮುನ್ನವೇ 69 ವೇದಿಕೆಗಳು ಬುಕ್ಕಿಂಗ್!
ಕರಾವಳಿ ರಂಗಭೂಮಿಯಲ್ಲಿ ಪ್ರದರ್ಶನ ದಾಖಲೆಯ ಇತಿಹಾಸದೊಂದಿಗೆ ಹೊಸ ಅಲೆ ಎಬ್ಬಿಸಿದ “ಶಿವದೂತೆ ಗುಳಿಗೆ” ನಾಟಕದ ಹವಾ ಇನ್ನು ನಿಂತಿಲ್ಲ. ಈ ಮಧ್ಯೆ ನಿರ್ದೇಶಕ ವಿಜಯ ಕುಮಾರ್ ಕೊಡಿಯಾಲ್ ಬೈಲ್ ಮತ್ತೊಮ್ಮೆ ವಿನೂತನ ಪರಿಕಲ್ಪನೆಯ ” ಶಿವಾಜಿ” ನಾಟಕದೊಂದಿಗೆ ಕರಾವಳಿ ರಂಗಭೂಮಿಗೆ ವಿಶಿಷ್ಟ ಕಾಣಿಕೆ ನೀಡಲು ಸಜ್ಜಾಗಿದ್ದಾರೆ.
ನೂತನ ನಾಟಕವನ್ನು ಮಾ. 6ರಂದು ಕಟೀಲು ಸನ್ನಿಧಿಯಲ್ಲಿ ಪ್ರಾಯೋಗಿಕ ಪ್ರದರ್ಶನ ಏರ್ಪಡಿಸಿ, ಬಳಿಕ ಮಾ.13ರಂದು ಮಂಗಳೂರು ಪುರಭವನದಲ್ಲಿ ಪ್ರದರ್ಶಿಸಿ ಲೋಕಾರ್ಪಣೆ ಮಾಡಲು ಸಿದ್ದತೆ ನಡೆದಿದೆ.
ಶಿವದೂತ ಗುಳಿಗೆ ಮಾದರಿಯಲ್ಲೇ ಈ ನಾಟಕ ಕೂಡಾ ಸಿನಿಮೀಯ ದೃಶ್ಯ ಪರಿಕಲ್ಪನಾ ಹಿನ್ನೆಲೆಯಲ್ಲಿ ಅತಿ ವಿನೂತನ ಪರಿಕಲ್ಪನೆಯಲ್ಲಿ ಮೂಡಿಬರಲಿದೆಯೆಂದು ನಿರ್ದೇಶಕ ವಿಜಯ ಕುಮಾರ್ ಕೊಡಿಯಾಲ್ ಬೈಲ್ ತಿಳಿಸಿದ್ದಾರೆ. ಪ್ರದರ್ಶನ ಪೂರ್ವದಲ್ಲೇ “ಶಿವಾಜಿ” ಬೇಡಿಕೆ ಗಳಿಸಿದ್ದು, ತುಳುನಾಡಿನಲ್ಲಿ 69 ವೇದಿಕೆಗಳು ಮುಂಗಡ ಬುಕ್ಕಿಂಗ್ ಆಗಿವೆ. ಇದು ರಂಗಭೂಮಿಯಲ್ಲಿ ಕೊಡಿಯಾಲ್ ಬೈಲ್ ಅವರ ನಾಟಕಗಳ ಮೇಲಿನ ಭರವಸೆ, ಜನಪ್ರಿಯತೆಯ ಸಂಕೇತವಾಗಿದೆ.
- ‘ಶಿವಾಜಿ’ ಯ ವಿಶೇಷ..
ಈ ನಾಟಕಕ್ಕೆ ಮಹಾರಾಷ್ಟ್ರದಲ್ಲೇ ರಂಗವಿನ್ಯಾಸ, ಮುನ್ನುಡಿ ಬರೆಯಲಾಗಿದೆ. ತುಳು ರಂಗಭೂಮಿ ಕಂಡರಿಯದ ಅದ್ದೂರಿ ರಂಗವಿನ್ಯಾಸ ಬಳಕೆಯಾಗಲಿದೆ. ರಂಗಕರ್ಮಿ, ಕವಿ, ನ್ಯಾಯವಾದಿ ಶಶಿರಾಜ್ ಕಾವೂರು ಅವರ,”ಶಿವಾಜಿ” ಕಥೆ , ವಿಜಯಕುಮಾರ್ ಕೊಡಿಯಾಲ್ ಬೈಲ್ ರಂಗಕಲ್ಪನೆಯಲ್ಲಿ ನಾಟಕವಾಗುತ್ತಿದ್ದು ದೃಶ್ಯಗಳು ಅದ್ದೂರಿತನದಿಂದ ಕಣ್ಣಿಗೆ ಹಬ್ಬವಾಗಲಿದೆ. ಅಟ್ಟು 2.15 ತಾಸಿನ ನಾಟಕದಲ್ಲಿ ಪ್ರೀತೇಶ್ ಕುಮಾರ್ ಬಲ್ಲಾಳ್ ಶಿವಾಜಿ ಪಾತ್ರದಲ್ಲಿ ಕಾಣಿಸಲಿದ್ದಾರೆ.
ಶಿವಾಜಿಯ ಪೂರ್ಣ ಕತೆಯವನ್ನು ಒಂದು ನಾಟಕದಲ್ಲಿ ತೋರಿಸಲಾಗದು. ಆದ್ದರಿಂದ ರಂಗಭೂಮಿ ಪರಿಕಲ್ಪನೆಯಿಂದ 2.15 ಗಂಟೆಯ ನಾಟಕದಲ್ಲಿ 13 ದೃಶ್ಯಗಳೊಂದಿಗೆ ನಾಟಕ ಮೂಡಿಬರಲಿದೆ.
ನಾಟಕದ ವೇಷಭೂಷಣಗಳೆಲ್ಲ ಮರಾಠ ಪರಂಪರೆಯನ್ನು ಬಿಂಬಿಸಲಿದ್ದು, ಕರಾವಳಿಯ ರಂಗಭೂಮಿಗೆ ಇದೊಂದು ವಿಶಿಷ್ಟ ಅನುಭವದ ದರ್ಶನವಾಗಲಿದೆ. ನಾಟಕ ಪ್ರದರ್ಶನಗೊಂಡ ಬಳಿಕವೇ ಈ ಕುರಿತು ಹೆಚ್ಚು ಚರ್ಚೆ ನಡೆಯಲಿ ಎನ್ನುವ ನಿರ್ದೇಶಕರು ನಾಟಕದ ಬ್ರೋಷರ್ ಗೂ ಕೂಡಾ ಸಿನಿಮ ಟಚ್ ನೀಡಿದ್ದಾರೆ.
ಒಟ್ಟಂದದಲ್ಲಿ ಕರಾವಳಿ ಮತ್ತು ಮುಂಬೈಯಲ್ಲಿ ಶಿವಾಜಿ ನಾಟಕ ಕುತೂಹಲದ ಸಂಚಲನ ಮೂಡಿಸಿದೆ.