- ಏತಡ್ಕ ದೇಗುಲ ಬ್ರಹ್ಮಕಲಶ : ಧಾರ್ಮಿಕತೆ ಬದುಕಿನ ಅನುಷ್ಠಾನವಾಗಬೇಕು – ಎಡನೀರು ಶ್ರೀ
- ಹಿಂದೂಗಳು ಕನಿಷ್ಟ ಮೂರು ಮಕ್ಕಳನ್ನು ಪೋಷಿಸಬೇಕು – ಕಜಂಪಾಡಿ
ಬದಿಯಡ್ಕ: ಭಾರತ ದೇಶ ವೇದ ಮತ್ತು ದಾರ್ಶನಿಕ ಪ್ರಕಾಶವನ್ನು ಜಗದೆಡೆಗೆ ಪಸರಿಸಿದ ಪುಣ್ಯ ಭೂಮಿ. ಇಲ್ಲಿಯ ಧರ್ಮ ವೈವಿಧ್ಯಮಯ ಆಚರಣೆಯ ಮೂಲಕ ಸಕಲ ಜೀವರಾಶಿಗಳಿಗೂ ಒಳಿತನ್ನು ಸಾರಿ ಹೇಳಿದ ವಿಶಿಷ್ಟ ಆರಾಧ್ಯ ಋಷಿ ಪರಂಪರೆಯ ಹಿನ್ನೆಲೆಯದ್ದು. ಸತ್ಕರ್ಮದ ಧರ್ಮದ ಆಚರಣೆಯಿಂದ ವ್ಯಕ್ತಿ-ಶಕ್ತಿಯಾಗಿ ಬೆಳೆಯಲು ಕಾರಣವಾಗುತ್ತದೆ ಎಂದು ಶ್ರೀಮದಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳು ಆಶೀರ್ವಚನದಲ್ಲಿ ಅಭಿಪ್ರಾಯಪಟ್ಟರು.
ಕಾಸರಗೋಡು ಜಿಲ್ಲೆಯ ಗಡಿನಾಡ ಗಡಿ ಏತಡ್ಕ ಶ್ರೀ ಸದಾಶಿವ ದೇವಾಲಯದಲ್ಲಿ ಮಂಗಳವಾರ (ಫೆ಼11) ಆರಂಭಗೊಂಡ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಅಂಗವಾಗಿ ಆರಂಭದಿನದಂದು ಸಂಜೆ ನಡೆದ ಧಾರ್ಮಿಕ ಸಭಾಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಆಶೀರ್ವಚನ ನೀಡಿದರು.
ಪ್ರತಿಯೊಬ್ಬ ಮನುಷ್ಯನ ಸದಾಶಯದ ಪ್ರಾರ್ಥನೆ ಸಮಾಜವನ್ನು ಉತ್ಕರ್ಷತೆಗೆ ಕೊಂಡೊಯ್ಯುತ್ತದೆ. ಸಕಲರಿಗೂ ಒಳಿತನ್ನು ಬಯಸುವ ಸದಾಶಿವ ಕಲ್ಪನೆ ನಮ್ಮಲ್ಲಿ ಸಾಕಾರಗೊಳ್ಳುವ ಮೂಲಕ ನಾವೇ ಸ್ವತಃ ಸದಾಶಿವರಾಗಬೇಕು. ಇಂದು ಸಹೃದಯರ ಸಹಕಾರಗಳೊಂದಿಗೆ ಎಲ್ಲೆಡೆ ಆರಾಧನಾಲಯಗಳು ಅಭಿವೃದ್ಧಿಗೊಳ್ಳುತ್ತಿರುವುದು ಭವಿಷ್ಯದ ಸನ್ಮಂಗಲಕರ ಸಮಾಜದ ಸೂಚಕವಾಗಿದೆ.
ಪುಣ್ಯ ಕಾರ್ಯಗಳಲ್ಲಿ ಎಲ್ಲರ ಸಹಕಾರ ಸೋದರ ಭಾವ ಸ್ಪುರಣಗಳೊಂದಿಗೆ ಮಂಗಳಕರವಾಗಿರಲಿ ಎಂದು ಹಾರೈಸಿದರು.
ತಂತ್ರಿವರ್ಯ ಬ್ರಹ್ಮಶ್ರೀ ರವೀಶತಂತ್ರಿ ಕುಂಟಾರು ದಿವ್ಯ ಉಪಸ್ಥಿತರಿದ್ದು ಮಾತನಾಡಿ, ಧಾರ್ಮಿಕ ಸಂಪ್ರದಾಯಗಳು ನಮ್ಮಜೀವನದ ಅನುಷ್ಠಾನದಲ್ಲಿರಬೇಕು. ಈ ಅನುಷ್ಠಾನದಿಂದಲೇ ಸಂಸ್ಕಾರ, ಸಂಸ್ಕೃತಿಗಳ ಜಾಗೃತಿ ಮೂಡಲು, ತನ್ಮೂಲಕ ಸಕಾರಾತ್ಮಕ ಬೆಳವಣಿಗೆಗಳು ಸಾಧ್ಯ. ಈ ನಿಟ್ಟಿನಲ್ಲಿ ಆಗಬೇಕಾದುದೇನು ಎಂಬುದರ ಕ್ರಿಯಾತ್ಮಕ ಚರ್ಚೆ, ಅನುಸಂಧಾನಗಳು ಮೇಳೈಸಿ ಶ್ರದ್ಧಾಕೇಂದ್ರಗಳು ಸಮಾಜಮುಖಿಯಾಗಿ ಬೆಳೆದು ಬೆಳಗುತ್ತದೆ ಎಂದರು.
ಹಿಂದೂ ಕೂಟುಂಬ ಬೆಳೆಯಬೇಕು
ಸಮಾರಂಭದಲ್ಲಿ ಮುಖ್ಯ ಧಾರ್ಮಿಕ ಉಪನ್ಯಾಸ ನೀಡಿದ ಆರ್.ಎಸ್.ಎಸ್ ಕುಟುಂಬ ಪ್ರಬೋಧನ ಪ್ರಮುಖರಾದ. ಕಜಂಪಾಡಿ ಸುಬ್ರಹ್ಮಣ್ಯ ಭಟ್ ಅವರು ಮಾತನಾಡಿ ಕುಟುಂಬವೆಂದರೆ ಮೂರರಿಂದ ನಾಲ್ಕು ತಲೆಮಾರುಗಳು ಜೊತೆಜೊತೆಗೆ ಬದುಕುವ ವ್ಯವಸ್ಥೆಯಾಗಿದ್ದು, ಅದಿಂದು ಮರೀಚಿಕೆಯಾಗುತ್ತಿರುವುದು ಕಳವಳಕಾರಿ. ಈ ನಿಟ್ಟಿನಲ್ಲಿ ಕನಿಷ್ಠ ಮೂರು ಮಕ್ಕಳನ್ನು ಪರಿಪೋಶಿಸುವ ಧೈರ್ಯವನ್ನು ನಮ್ಮಧರ್ಮ ಕೈಗೆತ್ತಿಕೊಳ್ಳಬೇಕು.ತುಂಬು ಸಂಸಾರದಕುಟುಂಬದ ಮೂಲಕ ಮನೆ ನಿಜವಾಗಿಯೂ ಮಂತ್ರಾಲಯವಾಗಿ ಬದುಕಿನ ಸಾರ್ಥಕ್ಯಕ್ಕೆ ನೆಲೆಯೊದಗಿಸುತ್ತದೆಎಂದರು. ಸ್ವದೇಶಿ ಮಾನಸಿಕತೆ, ಆ ಬಗೆಗಿನ ಜಾಗೃತಿ ನಮ್ಮದಾದಾಗ ನೆಮ್ಮದಿಯ ಮನೆ, ಸಮಾಜ ನಿರ್ಮಾಣ ಸಾಧ್ಯಎಂದರು.
ಹಿರಿಯಧಾರ್ಮಿಕ ಮುಂದಾಳು ವಸಂತ ಪೈ ಬದಿಯಡ್ಕ, ಧಾರ್ಮಿಕ, ಸಾಮಾಜಿಕ ಮುಂದಾಳು ಕೆ.ಕೆ.ಶೆಟ್ಟಿ ಮುಂಡಪ್ಪಳ್ಳ, ಗೌರವಾಧ್ಯಕ್ಷ. ಡಾ.ವೈ.ಸುಬ್ರಾಯ ಭಟ್ ಉಪಸ್ಥಿತರಿದ್ದು ಮಾತನಾಡಿದರು.
ಪುನಃಪ್ರತಿಷ್ಠಾ ಬ್ರಹ್ಮಕಲಶ ಸಮಿತಿಅಧ್ಯಕ್ಷ ವೈ.ಶ್ಯಾಮ ಭಟ್ ಬೆಂಗಳೂರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸಂಚಾಲಕ ಚಂದ್ರಶೇಖರಏತಡ್ಕ ವಂದಿಸಿದರು.ರಮೇಶ್ ವೈ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದೇವಾಲಯದ ಪುನಃನಿರ್ಮಾಣದಲ್ಲಿಕಾರ್ಯನಿರ್ವಹಿಸಿದ ಶೇಖರಆಚಾರ್ಯ ಬಾಯಾರು, ದೀಕ್ಷಿತ್‌ರೈ, ಜಗದೀಶ್ ಪೆರಡಾಲ ಮೊದಲಾದವರನ್ನು ಗೌರವಿಸಿ ಸನ್ಮಾನಿಸಲಾಯಿತು.ದೇವಾಲಯದ ಸುತ್ತುಪೌಳಿಗಳನ್ನು ವಿವಿಧ ದಾನಿಗಳ ನೆರವಿಂದ ನಿರ್ಮಿಸಲಾಗಿದ್ದು, ಎಡನೀರು ಶ್ರೀಗಳು ಉದ್ಘಾಟಿಸಿದರು