- ಇಂದಿನಿಂದ ಮೂರು ದಿನ ತುಳುನಾಡಲ್ಲಿ ಭೂಮಿತಾಯಿ ರಜಸ್ವಲೆಯಾದುದನ್ನು ಸಂಭ್ರಮಿಸಿ ಆರಾಧಿಸುವ ‘ಕೆಡ್ಡಸ”
- ಬತ್ತದ ಬಂಗಾರ ಭೂಮಿ ತುಳುನಾಡಲ್ಲೂ ನಗರೀಕರಣದ ಸ್ಥಿತ್ಯಂತರ : ಕಣ್ಮರೆಯಾಗುತ್ತಿದೆ ನೆಲಮೂಲ ಸಂಸ್ಕೃತಿಯ “ಕೆಡ್ಡಸ” ಆಚರಣೆ..
ತುಳುನಾಡಲ್ಲಿ ಭೂಮಿ ತಾಯಿ ಮುಟ್ಟಾಗಿದ್ದಾಳೆ..ಆಕೆಯನ್ನು ಮೂರು ದಿನ ನೋಯಿಸಬಾರದು…ಬದಲು ಆರಾಧಿಸಬೇಕೆಂದ ಅತ್ಯಪೂರ್ವ ಸಂದೇಶಗಳೊಂದಿಗೆ ತುಳುನಾಡಲ್ಲಿ ನಡೆಯುತ್ತಿದ್ದ “ಕೆಡ್ಡಸ” ಆಚರಣೆ ನಾಡಿಂದ ಮರೆಯಾಗುತ್ತಿದೆಯೇ…?
ಹೊಸ ಪೀಳಿಗೆಗೆ ಹಿಗೊಂದು ಆಚಾರ ಸಂಸ್ಕೃತಿಯ. ಅರಿವಿಲ್ಲದೇ ಹೋಗುತ್ತಿದೆಯೇ ?
ಎಂದು ಪ್ರಶ್ನಿಸಿದರೆ, ಸಮರ್ಥಿಸಬಹುದೇ ಹೊರತು, ಕಾಲಘಟ್ಟ ಕ್ರಮದಂತೆ ಕೆಡ್ಡಸ ಕಣ್ಮರೆಯಾಗುತ್ತಿದೆ..!
ಹೌದು.., ವರ್ಷದಿಂದ ವರ್ಷಕ್ಕೆ ಕೆಡ್ಡಸದ ಆಚರಣೆ ಕುಂಠಿತವಾಗುತ್ತಿದೆ! ಪರಿಣಾಮ ಭೂಮಿಯನ್ನು ಹೆಣ್ಣೆಂದು ಪೂಜಿಸುವ ಉತ್ಕೃಷ್ಟ, ಉದಾತ್ತ ಚಿಂತನೆಯ ಆಚರಣೆ -ಮಹತ್ವ ಹೊಸ ಪೀಳಿಗೆಗೆ ಕೈ ದಾಟದೇ ಹೋಗುತ್ತಿದೆ. ಕಾರಣ ಮನೆ, ಮನೆಯಲ್ಲಿ ಆಚರಿಸುತ್ತಿದ್ದ ಕೆಡ್ಡಸ ಈಗ ಹಳ್ಳಿಗೆ ಸೀಮಿತವಾಗಿದೆ. ಕೆಲವೆಡೆ ತರವಾಡು ಮನೆಗಷ್ಟೇ ಸೀಮಿತವಾಗಿದೆ. ತನ್ಮೂಲಕ ತುಳುನಾಡಿನ ಭವ್ಯ ಆಚರಣೆಯೊಂದು ನವ ಜನಾಂಗದ ಕೊಂಡಿ ಕಡಿಯುತ್ತಿದೆ..
ಫೆ. 10ರಿಂದ ಮೂರು ದಿನ ಕೆಡ್ಡಸ. ಅಂದರೆ ತುಳುವರ ಪೊನ್ನಿ ಮಾಸ ಮತ್ತು ಮಕರಮಾಸದ 27ನೇ ದಿನದಿಂದ ಮಾಸಾಂತ್ಯದ 3ದಿನ ಭೂಮಿ ತಾಯಿ ರಜಸ್ವಲೆಯಾಗುವ ಕೆಡ್ಡಸ. ಹಿಂದೆ ಕೃಷಿ ಸಂಸ್ಕೃತಿಯೇ ಪ್ರಧಾನವಾಗಿದ್ದಾಗ ಕೆಡ್ಡಸ ಮನೆ,ಮನೆಯ ಆಚರಣೆಯಾಗಿತ್ತು. ಈ ದಿನಗಳಲ್ಲಿ ನೆಲವನ್ನು ಹೂಳುವ, ಬಿತ್ತುವ ಕೆಲಸ ಮಾಡುತ್ತಲೇ ಇರಲಿಲ್ಲ. ಅಮ್ಮಂದಿರು ಮನೆಯಂಗಳಕ್ಕೆ ಸೆಗಣಿ ಸಾರಿಸಿ , ಸ್ವಚ್ಛ ಶುಭ್ರವಾಗಿಸಿ ತುಳಸೀ ಕಟ್ಟೆಯ ಮುಂದೆ ಭೂಮಿ ತಾಯಿಯ ಸ್ನಾನಕ್ಕೆ ಸುವಸ್ತುಗಳನ್ನಿರಿಸುತ್ತಿದ್ದರು. ಮಸಿ ತುಂಡು, ಮಾವಿನ ಎಲೆ, ಕನ್ನಡಿ, ನೊರೆಕಾಯಿ, ಸೀಗೆಕಾಯಿ, ತೆಂಗಿನಕಾಯಿ, ನನ್ನಾರಿ, ಬಾಳೆಹಣ್ಣು, ಕತ್ತಿ, ಚೊಂಬು, ವೀಳ್ಯದೆಲೆ, ಅಡಿಕೆ, ಪೊರಕೆ ಮೊದಲಾದುವನ್ನು ಇರಿಸುವುದು ಸಂಪ್ರದಾಯವಾಗಿತ್ತು.
ಆದರೀಗ ಕಾಲಚಕ್ರ ಬದಲಾಗಿದೆ. ತುಳುನಾಡೆಂಬ ಅನ್ನದಬಟ್ಟಲು ನಗರೀಕರಣಗೊಂಡಿದೆ. ನಗರ ಸಂಸ್ಕೃತಿ ತುಳು ಇಚಾರ,ಆಚರಣೆಗಳನ್ನು ನುಂಗಿ ತೇಗಿದೆ. ಬಿಡುವಿಲ್ಲದ ಜಂಜಾಟದ ಬದುಕಿನಲ್ಲಿ ನೆಲಮೂಲದ ಸಂಸ್ಕೃತಿ ಯ ಆಚರಣೆ ಕೆಲವೇ ಕೆಲವೆಡೆ ಅಳಿದುಳಿದಿದೆ.
ಕೆಡ್ಡಸದ ವಿಶೇಷ..
ಕೆಡ್ಡಸದ ದಿನ ಕುಚ್ಚಿಲಕ್ಕಿಯನ್ನು ಹುರಿದು ಅದಕ್ಕೆ ಬೆಲ್ಲ, ತುಪ್ಪ, ತೆಂಗಿನತುರಿ ಮಿಶ್ರಣ ಭೂಮಿ ತಾಯಿಗಿರಿಸಿ, ಎಲ್ಲರೂ ತಿನ್ನುವ ರೂಢಿ ಇತ್ತು. ಜತೆಗೆ ಅಂದಿನ ಅಡುಗೆಗೆ ನುಗ್ಗೆ, ಬದನೆ ಸಾಂಬಾರು ಮಾಡುವ ಸಂಪ್ರದಾಯಗಳಿತ್ತು. ಮೂರು ದಿನದ ಕೆಡ್ಡಸದಂಗವಾಗಿ ನಡು ಕೆಡ್ಡಸ ದಿನ ಭೇಟೆಗೆ ಹೋಗುವ ಸಂಪ್ರದಾಯವಿತ್ತು. ಭೇಟೆಯಾಡಿ ಸಿಕ್ಕುವ ಪ್ರಾಣಿಯನ್ನು ಮಾಂಸ ಮಾಡಿ ಹಂಚಿ ತಿನ್ನುವ ಜನಪದ ಸಂಪ್ರದಾಯಗಳೂ ಇದ್ದುವು.
ಇದರೀಗ ನಾಡು ನಗರೀಕರಣಗೊಂಡಿದೆ. ಕೃಷಿ ಸಂಸ್ಕೃತಿಯ ಪ್ರತೀಕವಾಗಿದ್ದ ಆಚಾರಗಳು ಕೃಷಿಯೊಂದಿಗೇ ನಶಿಸುತ್ತಿವೆ.