ಗುಡ್ಡಗಾಡುಗಳನ್ನೆಲ್ಲಾ ನಿತ್ಯ ಹರಿದ್ವರ್ಣದ ಹಸಿರು ನಳನಳಿಸುವ ಕಾಡಾಗಿಸಿ ಪಶು,ಪಕ್ಷಿ, ವನ್ಯ ಪ್ರಾಣಿಗಳಿಗೆಲ್ಲಾ ನೀರುಣಿಸಿ, ನಿತ್ಯಾಹಾರವನ್ನಿತ್ತ ಕೇರಳದ “ಹಸಿರು ಮನುಷ್ಯ” ಕಲ್ಲೂರ್ ಬಾಲನ್ (75)ವಿಧಿವಶರಾದರು. ಹೃದಯ ಸಂಬಂಧಿ ಕಾಯಿಲೆಯಿಂದ ಪಾಲಕ್ಕಾಡು ಜಿಲ್ಲಾಸ್ಪತ್ರೆಯಲ್ಲಿ ಫೆ.10ರಂದು ಅವರು ಕೊನೆಯುಸಿರೆಳೆದರು.
ಹಸಿರೇ ಉಸಿರೆಂದು ಅಕ್ಷರಾರ್ಥದಲ್ಲಿ ಬದುಕಿದ ಅವರದ್ದು ಭೂಮಿಗೆ ಹಸಿರಿನ ನೆರಳು ನೀಡಿದ ಅಪರೂಪದ ಆದರ್ಶದ ಬದುಕು…
ಪಾಲಕ್ಕಾಡು ಜಿಲ್ಲೆಯ ಕಲ್ಲೂರ್ ಅಂಞಾಟ್ಟು ವೀಟಿಲ್ ವೇಲು -ಕಣ್ಣಮ್ಮ ದಂಪತಿಯ ಮಗನಾಗಿ ಜನಿಸಿದ ಬಾಲಕೃಷ್ಣನ್ ಬಳಿಕ ಕೇರಳವನ್ನೂ ಮೀರಿ ಬೆಳೆದ ಕಲ್ಲೂರ್ ಬಾಲನ್ ಎಂಬ ಪರಿಸರ ಪ್ರೇಮಿಯಾಗಿ ರೂಪುಗೊಂಡದ್ದೊಂದು ಕೌತುಕದ ಕತೆ.
ಬಾಲನ್ ಬಾಲ್ಯದಲ್ಲಿ ತಂದೆಯ ಶೇಂದಿ ಅಂಗಡಿಯಲ್ಲಿದ್ದರು. ಕುಡಿಯಲು ಬಂದವರಿಗೆ ಶೇಂದಿ ಕೊಡುವುದು ಕೆಲಸ. ಆಗ ನಾರಾಯಣಗುರುಗಳ ಉಪದೇಶಾಮೃತದ ಪ್ರಭಾವ ಇವರ ಮೇಲಾಯಿತು. ಅದು ಬದುಕಿನ ದಿಶೆಯನ್ನೇ ಬದಲಾಯಿಸಿತು. ಹೀಗೆ ಶೇಂದಿ ಅಂಗಡಿ ತೊರೆದು ಬರಿದಾದ, ಬರಡು ಭೂಮಿಯಲ್ಲಿ ಮರಗಿಡ ನೆಡಲಾರಂಭಿಸಿದರು. ಈ ಪಯಣಕ್ಕೀಗ ಕೊನೆಯಾದರೂ ಅವರು ನೆಟ್ಟ 50ಲಕ್ಷಕ್ಕೂ ಅಧಿಕ ಮರಗಳು ನಾಡಿಗೆ ನೆರಳುಣಿಸುತ್ತಿವೆ. ಭೂಮಿಗೆ ನೀರುಣಿಸುತ್ತಿವೆ.
ಅವರಿಗೆ ಸೂರ್ಯ ಚಂದ್ರನೇ ದೇವರು. ಹಸಿರೆಲೆಗಳೇ ಆರಾಧನಾ ಮೂರ್ತಿಗಳು. ವರ್ಷದ 365ದಿನವೂ ಪರಿಹರ ದಿನಾಚರಣೆ. ಹೀಗೆ ಬದುಕಿದ ಬಾಲನ್ ನೂರಾರು ಎಕ್ರೆ ಕಾಡು ನಿರ್ಮಿಸಿದ್ದಾರೆ. ಜೀವಜಾಲಕ್ಕೆ ನೀರುಣಿಸಿದ್ದಾರೆ. ನಿತ್ಯವೂ ಹಸಿರು ಅಂಗಿ, ಹಸಿರು ಮುಂಡು, ತಲೆಗೆ ಹಸಿರು ರುಮಾಲು ಸುತ್ತಿ ನಡೆವ ಕಲ್ಲೂರ್ ಬಾಲನ್ ಕೇರಳ ಸರಕಾರದ ವನಮಿತ್ರ ಪ್ರಶಸ್ತಿ ವಿಜೇತರು. ಪಾಲಕ್ಕಾಡ್ ನಿಂದ ಒತ್ತಪಾಲಂ ಮಾರ್ಗಮಧ್ಯೆ ಸಿಗುವ ಕಲ್ಲೂರ್ ಮುಚ್ಚೇರಿ ಎಂಬ ಊರಿನ ಇವರು ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಲಕ್ಷ, ಲಕ್ಷ ವೃಕ್ಷಗಳನ್ನಗಲಿದ್ದಾರೆ.
ಜತೆಗೆ ಅಪಾರ ಪಾರಿಸರಿಕ ಜ್ಞಾನವೂ ಕಣ್ಮರೆಯಾಗಿದೆ.
ಸಾಯುವ ಮುನ್ನ ಒಂದು ಕೋಟಿ ಮರ ನೆಡುವುದು ಅವರ ಕನಸಾಗಿತ್ತು.