- ತಿರುಪತಿ ಲಡ್ಡು ಪ್ರಸಾದ ತಯಾರಿಕೆಗೆ ಪ್ರಾಣಿಗಳ ಕೊಬ್ಬು ಬಳಕೆ ದೃಢ
- ವಿಶೇಷ ಸಿಬಿಐ ತನಿಖಾ ದಳದಿಂದ ನಾಲ್ವರ ಬಂಧನ
ತಿರುಪತಿ ಲಡ್ಡು ತಯಾರಿಸುವಲ್ಲಿ ಪ್ರಾಣಿಗಳ ಕೊಬ್ಬು ಬಳಸಿರುವುದು ದೃಢಗೊಂಡಿದೆ. ಈ ಸಂಬಂಧ ಸಿಬಿಐ ತನಿಖಾಧಿಕಾರಿಗಳು ನಾಲ್ವರನ್ನು ಬಂಧಿಸಿದ್ದಾರೆ.
ಬಂಧಿತರನ್ನು ಭೋಲೆ ಬಾಬ ಡೈರಿಯ ಮಾಜಿ ನಿರ್ದೇಶಕ ಉತ್ತರಾಖಂಡದ ರೂರ್ಕಿ ನಿವಾಸಿ ಬಿಪಿನ್ ಜೈನ್, ಪೊಮಿಲ್ ಜೈನ್, ವೈಷ್ಣವಿ ಡೈರಿ ಸಿಇಒ ಅಪೂರ್ವ ವಿನಯಕಾಂತ್ ಚಾವ್ಡ ಮತ್ತು ಎಆರ್ ಡೈರಿಯ ವ್ಯವಸ್ಥಾಪಕ ನಿರ್ದೇಶಕ ರಾಜು ರಾಜಶೇಖರನ್ ಎಂಬವರೆಂದು ಗುರುತಿಸಲಾಗಿದೆ.
ಬಂಧಿತರನ್ನು ತಿರುಪತಿ ನ್ಯಾಯಾಲಯದಲ್ಲಿ ಹಾಜರುಪಡಿಸಿ ಹೆಚ್ಚುವರಿ ವಿಚಾರಣೆಗಾಗಿ ಪೋಲೀಸ್ ಕಸ್ಟಡಿಗೆ ಪಡೆಯಲಾಗಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ.
ತುಪ್ಪ ಪೂರೈಕೆಯ ಸಂದರ್ಭದಲ್ಲಿ ಪ್ರತಿ ಹಂತದಲ್ಲೂ ಗಂಭೀರ ಪ್ರಮಾದದ ಉಲ್ಲಂಘನೆಗಳು ನಡೆದಿವೆ. ಪ್ರಾಣಿ ಕೊಬ್ಬನ್ನು ಬಳಸಿರುವುದು ಸಿಬಿಐ ತನಿಖೆಯಲ್ಲಿ ಸ್ಪಷ್ಟವಾಗಿದೆ ಎಂದು ಟಿಟಿಡಿ ಮೂಲಗಳು ಹೇಳಿವೆ.
ತುಪ್ಪ ಪೂರೈಕೆಗೆ ವೈಷ್ಣವಿ ಡೈರಿಯ ಪ್ರತಿನಿಧಿಗಳು ಎಆರ್ ಡೈರಿ ಹೆಸರಲ್ಲಿ ಟೆಂಡರ್ ಪಡೆದಿದ್ದರು. ಈಸಂದರ್ಭ ನಕಲಿ ಸೀಲು, ನಕಲಿ ದಾಖಲೆ ಪತ್ರಗಳನ್ನು ಸಲ್ಲಿಸಿತ್ತು. ಉತ್ತರಾಖಂಡದ ರೂರ್ಕಿಯ ಭೋಲೆ ಬಾಬಾ ಡೈರಿಯಿಂದ ತುಪ್ಪ ಖರೀದಿಸುವುದಾಗಿ ವೈಷ್ಣವಿ ಡೈರಿ ನಕಲಿ ದಾಖಲೆ ಸೃಷ್ಠಿಸಿತ್ತು. ಭೋಲೆ ಬಾಬಾ ಡೈರಿಗೆ ಇಷ್ಟೊಂದು ಪ್ರಮಾಣದ ತುಪ್ಪ ಪೂರೈಸುವ ಸಾಮರ್ಥ್ಯವಿಲ್ಲ. ಹೀಗಾಗಿ ತುಪ್ಪದಲ್ಲಿ ಅಕ್ರಮ ನಡೆದಿರುವುದು ಸ್ಪಷ್ಟವಾಗಿ ನಾಲ್ವರನ್ನು ಬಂಧಿಸಲಾಗಿದೆ.
ತಿರುಪತಿ ಲಡ್ಡು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬು ಬಳಕೆಯಾಗಿದೆ ಎಂಬ ಆರೋಪ ಕೇಳಿಬಂದಾಗ ದೇಶದಲ್ಲೇ ಅದು ಸಂಚಲನ ಸೃಷ್ಟಿಸಿತ್ತು. ಈ ಪ್ರಕರಣ ಸಂಬಂಧ ತನಿಖೆ ನಡೆಸಲು ಸುಪ್ರೀಂ ಕೋರ್ಟಿನ ನಿರ್ದೇಶನದ ಮೇರೆಗೆ ವಿಶೇಷ ಸಿಬಿಐ ದಳದ ತನಿಖಾ ತಂಡವನ್ನು ನೇಮಿಸಲಾಗಿತ್ತು.





