- ಕೃಷಿ, ಸಾಹಿತ್ಯ,ಸಿನಿಮ,ಯಕ್ಷಗಾನ,ರಂಗಭೂಮಿಯ ಗಂಭೀರ ಪ್ರಯತ್ನದ ಮೂಲಕ ತುಳುನಾಡನ್ನು ಎತ್ತಿ ಕಟ್ಟಬೇಕು..
- 25ನೇ ವರ್ಷದ ಒಡಿಯೂರು ತುಳು ಸಾಹಿತ್ಯ ಸಮ್ಮೇಳನಾಧ್ಯಕ್ಷ ಭಾಸ್ಕರ ರೈ ಕುಕ್ಕುವಳ್ಳಿ ಆಶಯ
ತುಳು ಭಾಷೆಯ ಸಾಹಿತ್ಯ, ಸಿನಿಮ,ಯಕ್ಷಗಾನಾದಿ ರಂಗಭೂಮಿಯಲ್ಲಿ ಗಂಭೀರ ಚಿಂತನೆಯ ಪ್ರೌಢ, ಪ್ರಬುದ್ಧ ಪ್ರಯೋಗದ ಕೃತಿಗಳು ಬರಬೇಕಾದ ಅಗತ್ಯವಿದೆ ಎಂದು ಶ್ರೀಕ್ಷೇತ್ರ ಒಡಿಯೂರಿನಲ್ಲಿ ನಡೆಯುವ 25ನೇ ವರ್ಷದ ತುಳು ಸಾಹಿತ್ಯ ಸಮ್ಮೇಳನಾಧ್ಯಕ್ಷ ಭಾಸ್ಕರ ರೈ ಕುಕ್ಕುವಳ್ಳಿ ನುಡಿದರು. ಸಮ್ಮೇಳನಾಧ್ಯಕ್ಷತೆಯ ಹಿನ್ನೆಲೆಯಲ್ಲಿ ಅಧ್ಯಕ್ಷರ ಆಶಯವನ್ನು “ಕಣಿಪುರ”ದ ಜತೆ ಹಂಚಿಕೊಂಡ ಅವರು ಒಂದು ಕಾಲದಲ್ಲಿ ಬಂಗಾರದ ಬಟ್ಟಲು ಎಂದೇ ಕರೆಯಲ್ಪಟ್ಟಿದ್ದ ತುಳುನಾಡಿನಲ್ಲಿ ಇಂದೀಗ ಗದ್ದೆ,ಭೂಮಿ, ತೋಟ, ಒರತೆ ಮರೆಯಾಗಿ ಬರಡು ಭೂಮಿಯಾಗುತ್ತಿದೆ. ತುಳುನಾಡನ್ನು ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ ಮರುನಿರ್ಮಿಸುವ, ಎತ್ತಿ ಕಟ್ಟುವ ಕಾಯಕ ತುಳು ಬರಹಗಾರರ,ಮೂಲಕ ನಡೆಯಬೇಕು. ಕವಿ, ಲೇಖಕರಿಗೆ ಈ ಬದ್ಧತೆ ಇದೆ ಎಂದವರು ಆಶಯ ಹಂಚಿಕೊಂಡರು.
ತುಳು ಲೇಖಕ, ಕವಿಗಳಲ್ಲಿ ಬರೆಯುವ ಉತ್ಸಾಹವಿದ್ದರಷ್ಟೇ ಸಾಲದು. ನಾಲ್ಕು ಕಾಲ ಬದುಕುವಂತ, ಉಳಿಯುವಂತ ಸಾಹಿತ್ಯ ರಚನೆಯಾಗಬೇಕು. ನೆಲಮೂಲದ ಗ್ರಾಮ ಸಂಸ್ಕೃತಿಯತ್ತ ಬರಹಗಾರರು ಗಮನಿಸಬೇಕು. ತುಳುವರನ್ನು ಓದಿನೆಡೆಗೆ ಆಕರ್ಷಿಸುವಂತ ರಚನಾತ್ಮಕ ಕೆಲಸಗಳು ಸಾಹಿತ್ಯದಲ್ಲಿ ನಡೆಯಬೇಕೆಂದು ಅವರು ಅಭಿಪ್ರಾಯ ಪಟ್ಟರು.
ತುಳುನಾಡಿನಿಂದ ಅದೆಷ್ಟೋ ಮಂದಿ ರಾಜಕೀಯವಾಗಿ ಉನ್ನತ ಸ್ಥಾನಮಾನ ಗಳಿಸಿದ್ದಾರೆ. ಆದರೆ ಅವರು ತುಳುಭಾಷೆಯತ್ತ ಗಮನಿಸಲಿಲ್ಲ. ಅವರಿಂದಾಗಿ ತುಳು ಸಾಹಿತ್ಯಕ್ಕೆ ಪ್ರಯೋಜನ ದೊರೆತದ್ದೂ ಇಲ್ಲ ಎಂಬುದು ವಿಷಾದನೀಯ ಎಂದ ಅವರು ಉಳಿದೆಲ್ಲ ಭಾಷೆಯಂತೆ ತುಳುವಿಗೂ ರಾಜ್ಯ ಭಾಷೆಯ ಅಂಗೀಕಾರ, ಮನ್ನಣೆ ಸಿಗಬೇಕು. ಭಾಷಾವಾರು ಪ್ರಾಂತ್ಯ ಪುನರ್ ವಿಂಗಡಣೆಯ ವೇಳೆ ತುಳುವನ್ನು ಬದಿಗಿರಿಸಿದ ಅನ್ಯಾಯದಿಂದಾಗಿ ನೆಲಮೂಲದ ಸಂಸ್ಕೃತಿ, ಭಾಷೆ ಇಂದು ಬಸವಳಿಯುತ್ತಿದೆ. ನಾವು ತುಳುವರೆಂದು ಅಭಿಮಾನ ಪಡುವುದರ ಜತೆ ತುಳು ಭಾಷಾ ಸಾಹಿತ್ಯ ಸಂಸ್ಕೃತಿ ಮೆರೆಸುವ ಕೆಲಸವನ್ನೂ ಮಾಡಬೇಕೆಂದು ಅವರು ಸಂದೇಶ ನೀಡಿದರು.
ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಯವರ ನೇತೃತ್ವದಲ್ಲಿ ತುಳು ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಫೆ.6ರಂದು ಅಪರಾಹ್ನ ನಡೆಯುವ ಸಮ್ಮೇಳನದಲ್ಲಿ ಪಾಡ್ದನ ಕಲಾವಿದೆ ಕರ್ಗಿ ಶೆಡ್ತಿ ಅಳದಂಗಡಿ, ಸಿನಿಮ ನಿರ್ಮಾಪಕ ಪುಷ್ಪರಾಜ ರೈ ಮಲಾರ್ ಬೀಡು, ಸಮಾಜಸೇವಕ ಹರೀಶ ಶೆಟ್ಟಿ ಮಾಡ, ಸಾವಯವ ಕೃಷಿಕ ಕೃಷ್ಣಪ್ಪ ಕೇಪು, ಪೋಲೀಸ್ ನೌಕರ ಪ್ರವೀಣ್ ರೈ ನಡುಕೂಟೇಲು ಇವರಿಗೆ ತುಳುಸಿರಿ ಸನ್ಮಾನ ನಡೆಯಲಿದೆ. ತುಳುನಾಡಿನ ಸಂತಪರಂಪರೆ, ಜಾನಪದ ಪರಂಪರೆ, ಸಾಹಿತ್ಯ ಪರಂಪರೆಯ ವಿಚಾರಗೋಷ್ಠಿಯೊಂದಿಗೆ ಸಮ್ಮೇಳನ ಜರಗಲಿದೆ.