- ಕುಂಬಳೆಯಲ್ಲಿ ಆಡಳಿತದ ಮೇಲೆ ಕಣ್ಣಿರಿಸಿ ವಾರ್ಡುಗಳಿಗೆ ಕತ್ತರಿ
- ಆದರೆ ಯಾವ ಪಕ್ಷಗಳಿಗೂ ಆಕ್ಷೇಪದ ದೂರುಗಳಿಲ್ಲದೇ ವಾರ್ಡು ವಿಭಜನೆಗೆ ಮೌನ
ಕುಂಬಳೆ ಗ್ರಾಮ ಪಂಚಾಯತಿನ ವಾರ್ಡು ವಿಭಜನೆಗಳು ಪೂರ್ಣಗೊಂಡಿದ್ದರೂ ಯಾವುದೇ ಪಕ್ಷಕ್ಕೂ ವಾರ್ಡು ವಿಭಜನೆಯಲ್ಲಿ ಅತೃಪ್ತಿ, ಅಸಮಧಾನಗಳ ದೂರುಗಳಿಲ್ಲದೇ ಇರುವುದು ವಿಶೇಷವೆನಿಸಿದೆ. ಕಾಸರಗೋಡು ಜಿಲ್ಲೆಯ ಅನೇಕ ಪಂಚಾಯತ್ ಗಳ ವಾರ್ಡು ವಿಭಜನೆಯ ಕುರಿತು ರಾಜಕೀಯ ಪಕ್ಷಗಳಿಗೆ ಅಸಮಧಾನದ ದೂರುಗಳಿವೆ. ಕೆಲವೆಡೆ ಪ್ರಕರಣ ನ್ಯಾಯಾಲಯಕ್ಕೂ ತಲುಪಿದೆ. ಆದರೆ ವಾರ್ಡು ವಿಭಜನೆಯ ದೂರು ಸಲ್ಲಿಸಲು ಅವಕಾಶವಿತ್ತರೂ , ಕುಂಬಳೆಯಲ್ಲಿ ಆಡಳಿತ, ವಿಪಕ್ಷ ಸೇರಿದಂತೆ ಯಾರಿಗೂ ದೂರುಗಳೇ ಇಲ್ಲದಿರುವುದು ವಿಶೇಷ ಎನಿಸಿದೆ.
ಮುಸ್ಲಿಂಲೀಗ್ ನೇತೃತ್ವದಲ್ಲಿ ಯು.ಡಿ.ಎಫ್ ಆಡಳಿತ ನಡೆಸುವ ಕುಂಬಳೆ ಗ್ರಾಮ ಪಂಚಾಯತಿನಲ್ಲಿ ವಾರ್ಡು ವಿಭಜನೆಯ ಮೂಲಕ ಒಂದು ವಾರ್ಡು ಹೆಚ್ಚಳಗೊಂಡಿದೆ. ನೂತನವಾಗಿ ಮುಳಿಯಡ್ಕ ವಾರ್ಡು ಅಸ್ತಿತ್ವಕ್ಕೆ ಬರುವುದರೊಂದಿಗೆ ಪಂಚಾಯತಿನ ಒಟ್ಟು ವಾರ್ಡುಗಳ ಸಂಖ್ಯೆ 23ರರಿಂದ 24ಕ್ಕೇರಿದೆ. ವಾರ್ಡು ವಿಭಜನೆಯಿಂದ ಯಾರಿಗೆ ಲಾಭ ಎಂಬ ಪ್ರಶ್ನೆಗೆ ಕುಂಬಳೆ ಗ್ರಾ.ಪಂ.ನಲ್ಲಿ ಎಲ್ಲಾ ಪಕ್ಷೀಯರೂ ನಮಗೇನೂ ತೊಂದರೆ ಆಗಿಲ್ಲ ಎಂದರೂ ನೂತನ ವಾರ್ಡು ವಿಭಜನೆ ಈ ವರೆಗಿನ ರಾಜಕೀಯ ಬಲಾಬಲಗಳನ್ನು ಬುಡಮೇಲಾಗಿಸುವುದು ನಿಶ್ಚಿತ ಎನ್ನಲಾಗಿದೆ.
ಕುಂಬಳೆ ಗ್ರಾ.ಪಂ.ನ ಉಜಾರು, ಇಚ್ಲಂಪಾಡಿ, ಮುಜುಂಗಾವು, ಕೋಟೆಕಾರು, ಶಾಂತಿಪಳ್ಳ, ಮಾಟಂಗುಳಿ, ಕುಂಬಳೆ ಪೇಟೆ, ಕಳತ್ತೂರು ಮೊದಲಾದ ವಾರ್ಡುಗಳ ಗಡಿಯನ್ನು ವಿಭಜಿಸಿ ಪುನರ್ ನಿರ್ಣಯಿಸಲಾಗಿದೆ. ಇದು ಫಲಿತಾಂಶದ ಮೇಲೆ ಯಾವ ಪರಿಣಾಮ ಬೀರಬಹುದೆಂದು ಕಾದು ನೋಡಬೇಕಿದೆ.
ಗ್ರಾ.ಪಂ. ಆಡಳಿತದ ಮೇಲೆ ಕಣ್ಣಿರಿಸಿಯೇ ವಾರ್ಡುಗಳನ್ನು ಕತ್ತರಿಸಲಾಗಿದೆ ಎಂದೆನ್ನಲಾಗುತ್ತಿದ್ದರೂ ಈ ಕುರಿತಾಗಿ ಆಕ್ಷೇಪದ ದೂರುಗಳಿಲ್ಲದೇ ಇರುವುದರಿಂದ ವಿಭಜನೆಗೆ ಅಂಗೀಕಾರ ದೊರೆಯಲಿದೆ.