- ಅಂಗಿ ತೆಗೆದು ದೇಗುಲ ಪ್ರವೇಶಿಸುತ್ತಿದ್ದ ಸಂಪ್ರದಾಯಕ್ಕೆ ವಿದಾಯ, ಅಂಗಿ ಧರಿಸಿಯೇ ದೇಗುಲ ದರ್ಶನ ಮಾಡಲು ಆರಂಭ..
- ಈಳವ ಕಮಾಜದ ಕ್ಷೇತ್ರ ಪ್ರವೇಶಕ್ಕೆ ಮೇಲ್ವಸ್ತ್ರ ಧರಿಸುವ ಪರಿಷ್ಕರಣೆಗೆ ಆರಂಭ
- ನಾರಾಯಣೀಯಂ ಕ್ಷೇತ್ರಗಳ ಅರ್ಚಕರು ಜನಿವಾರ ಧರಿಸಬೇಕಿಲ್ಲ ಎಂದ ಸ್ವಾಮಿ ಸಚ್ಛಿದಾನಂದ
ಕೇರಳದಲ್ಲಿ ಶ್ರೀನಾರಾಯಣ ಗುರುಗಳು ಪ್ರತಿಷ್ಠೆ ನಡೆಸಿರುವ ಈಳವ ಸಮುದಾಯದ ನಾರಾಯಣೀಯ ಕ್ಷೇತ್ರಗಳ ಅರ್ಚಕರು ಜನಿವಾರ ಧರಿಸಬೇಕಾದುದಿಲ್ಲ ಎಂದು ಶ್ರೀನಾರಾಯಣ ಧರ್ಮಸಂಘಂ ಟ್ರಸ್ಟ್ ಅಧ್ಯಕ್ಷರಾದ ಸ್ವಾಮಿ ಸಚ್ಚಿದಾನಂದ ನಿರ್ದೇಶಿಸಿದ್ದಾರೆ.
ಎರ್ನಾಕುಳಂ ಚೇರಾಯಿ ಗೌರೀಶ್ವರ ಕ್ಷೇತ್ರದಲ್ಲಿ ನಡೆದ ಮೇಲ್ವಸ್ತ್ರ ಧರಿಸಿ ಕ್ಷೇತ್ರ ಪ್ರವೇಶನ ಸಮಾರಂಭದಲ್ಲಿ ಮಾತಾಡಿದ ಸ್ವಾಮೀಜಿ ಕಾಲೋಚಿತ ಪರಿಷ್ಕಾರಗಳಿಂದ ಮಾತ್ರವೇ ಸಮಾಜದ ಮುನ್ನಡೆ ಎಂದರು.
ಕೇರಳದಲ್ಲಿ ದೇವಸ್ವಂ ಮಂಡಳಿಯ ಉದ್ಯೋಗಗಳು ದಲಿತ, ಈಳವ ಸಮುದಾಯಕ್ಕೆ ಲಭಿಸುತ್ತಿಲ್ಲ ವೆಂದೂ, ಇಂದಿಗೂ ಅದು ಮರೀಚಿಕೆಯಾಗಿದೆಯೆಂದೂ ಅವರು ನುಡಿದರು.
ತಿಂಗಳ ಹಿಂದೆ ನಡೆದ ಶಿವಗಿರಿ ತೀರ್ಥಾಟನಾ ಸಮ್ಮೇಳನದಲ್ಲಿ ದೇವಾಲಯ ಪ್ರವೇಶಕ್ಕೆ ಅಂಗಿ ತೆಗೆಯಬೇಕೆಂಬ ನಿಬಂಧನೆಯನ್ನು ಪ್ರಶ್ನಿಸಿದ್ದ ಅವರು ಈ ವಿಷಯದಲ್ಲಿ ಕಾಲೋಚಿತ ಪರಿಷ್ಕಾರ ನಡೆಯಬೇಕೆಂದು ಕರೆ ಇತ್ತಿದ್ದರು. ಇದರಂತೆ ಕೇರಳದ ಎಲ್ಲಾ ನಾರಾಯಣ ಗುರು ಪ್ರತಿಷ್ಠಾ ದೇವಾಲಯಗಳಲ್ಲಿ ದೇಗುಲ ಪ್ರವೇಶಕ್ಕೆ ಅಂಗಿ ಧರಿಸಬಾರದೆಂಬ ನಿಬಂಧನೆಯನ್ನು ಬದಲಿಸಿ ಅಂಗಿ ಧರಿಸಬಹುದೆಂಬ ನಿರ್ಧಾರವಾಗಿದೆ. ಈ ಧಾರ್ಮಿಕ ಕ್ರಾಂತಿಯ ಉದ್ಘಾಟನೆ ಎಂಬಂತೆ ಎರ್ನಾಕುಳಂ ಚೇರಾಯಿ ಗೌರೀಶ್ವರ ಕ್ಷೇತ್ರದಲ್ಲಿ ಅಂಗಿ ಧರಿಸಿ ದೇಗುಲ ಪ್ರವೇಶಿಸಲು ಆರಂಭಿಸಲಾಯಿತು.
ಚೇರಾಯಿ ಗೌರೀಶ್ವರ ದೇವಾಲಯ ನಾರಾಯಣ ಗುರು ಪ್ರತಿಷ್ಠೆ ಮಾಡಿದ ದೇಗುಲ. ಇಲ್ಲಿನ ಜಾತ್ರೆಗೆ ದ್ವಜಾರೋಹಣ ಫೆ.4ರಂದು ನಡೆದಿದ್ದು, ಇದರ ಬೆನ್ನಲ್ಲೇ ದೇವಾಲಯಕ್ಕೆ ಅಂಗಿ ಧರಿಸಿ ಹೋಗುವ ಪರಿಷ್ಕಾರಕ್ಕೆ ನಾಂದಿಯಾಯಿತು. ಈ ಸಮಾರಂಭದಲ್ಲಿ ಮಾತನಾಡುತ್ತಾ ನಾರಾಯಣೀಯ ಕ್ಷೇತ್ರಗಳ ಅರ್ಚಕರು ಜನಿವಾರ ಧರಿಸಬೇಕಾದ ಅಗತ್ಯಗಳಿಲ್ಲ ಎಂದು ಸ್ವಾಮೀಜಿ ನುಡಿದರು.