- ವಿಷು ಹಬ್ಬಕ್ಕೆ ಶಬರಿಮಲೆಯಲ್ಲಿ ಜಾಗತಿಕ ಅಯ್ಯಪ್ಪ ಭಕ್ತ ಸಂಗಮ
ನಡೆಸಿ , ಚಿನ್ನದ ಲಾಕೆಟ್ ಮಾರಲು ದೇವಸ್ವಂ ಯೋಜನೆ - ಶಬರಿಮಲೆಯಲ್ಲಿ ಭಕ್ತರ ಹೆಚ್ಚಳದೊಂದಿಗೆ ಆದಾಯವೂ ಹೆಚ್ಚಿದ ಹಿನ್ನೆಲೆಯಲ್ಲಿ ದೇವಸ್ವಂ ನಿಂದ ಹೊಸ ಯೋಚನೆ
ಈ ಬಾರಿಯ ಶಬರಿಮಲೆ ತೀರ್ಥಾಟನಾ ಋತು ಯಶಸ್ವಿಯಾಗಿ ಮುಗಿದ ಬೆನ್ನಲ್ಲೇ ಮುಂಬರುವ ವಿಷು ಹಬ್ಬವನ್ನು ಕೂಡಾ ತೀರ್ಥಾಟನಾ ಋತುವಿನಂತೆಯೇ 50ರಾಷ್ಟ್ರಗಳಿಂದ ಅಯ್ಯಪ್ಪ ಭಕ್ತರನ್ನು ಬರಮಾಡಿಸಿ ಜಾಗತಿಕ ಅಯ್ಯಪ್ಪ ಭಕ್ತರ ಮಹಾಸಂಗಮ ಏರ್ಪಡಿಸಲು ಸರಕಾರವೇ ಮುಂದಾಗಿದೆ.
ತಿರುವಿದಾಂಕೂರು ದೇವಸ್ವಂ ಮಂಡಳಿ ನೇತೃತ್ವದಲ್ಲಿ ಜಾಗತಿಕ ಅಯ್ಯಪ್ಪ ಭಕ್ತರ ಸಂಗಮವನ್ನು ವಿಷು ಹಬ್ಬಕ್ಕೆ ಆಯೋಜಿಸಲಾಗುವುದೆಂದು ದೇವಸ್ವಂ ಮಂಡಳಿ ಅಧ್ಯಕ್ಷ ಪಿ.ಎಸ್. ಪ್ರಶಾಂತ್ ಪಟ್ಟಣಂತಿಟ್ಟದಲ್ಲಿ ಸುದ್ದಿಗೋಷ್ಟಿ ನಡೆಸಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ನ್ಯಾಯಾಲಯ ಅನುಮತಿ ಇತ್ತರೆ ಅಯ್ಯಪ್ಪ ಚಿತ್ರಗಳ ಲಾಕೆಟ್ ಕೂಡಾ ಬಿಡುಗಡೆ ಮಾಡಲು ಉದ್ದೇಶಿಸಲಾಗಿದೆ . ಎರಡು ಗ್ರಾಂ, ನಾಲ್ಕು ಗ್ರಾಂ, ಆರು, ಎಂಟು ಗ್ರಾಂ ತೂಕದ ಅಯ್ಯಪ್ಪನ ಉಬ್ಬುಶಿಲ್ಪದ ಚಿನ್ನದ ಲಾಕೆಟ್ ತಯಾರಿಸಿ ವಿಷು ಕಾಣಿಕೆಯಾಗಿ ಭಕ್ತರಿಗೆ ನೀಡಲು ಉದ್ದೇಶಿಸಲಾಗಿದೆ ಎಂದು ದೇವಸ್ವಂ ಮಂಡಳಿ ಅಧ್ಯಕ್ಷರು ತಿಳಿಸಿದ್ದಾರೆ.
ಈ ಬಾರಿಯ ಶಬರಿಮಲೆ ತೀರ್ಥಾಟನಾ ಋತು ವಿವಾದ ರಹಿತವಾಗಿ ಯಶಸ್ವಿಯಾಗಿ ಮುಗಿದಿದೆ. ಕಳೆದ ಬಾರಿಗಿಂತ 86ಕೋಟಿ ರೂ ಆದಾಯ ಹೆಚ್ಚಳಗೊಂಡಿದೆ. 55ಲಕ್ಷಕ್ಕೂ ಅಧಿಕ ಅಯ್ಯಪ್ಪ ಭಕ್ತರು ದರ್ಶನ ನಡೆಸಿದ್ದು, ಹಿಂದಿನ ವರ್ಷಕ್ಕಿಂತ ಐದೂವರೆ ಲಕ್ಷ ಭಕ್ತರು ಹೆಚ್ಚಳಗೊಂಡಿದ್ದರು. ಈ ಮೂಲಕ 86ಕೋಟಿ ರೂಗಳ ಆದಾಯ ಹೆಚ್ಚಳವಾಗಿದೆ. ಈ ಬಾರಿ ಒಟ್ಟು 440ಕೋಟಿ ರೂ ಆದಾಯ ಲಭಿಸಿದ್ದು, ಕೇವಲ ಅರವಣ ಪಾಯಸ ಪ್ರಸಾದ ಮಾರಾಟದಿಂದಲೇ 191ಕೋಟಿ ರೂ ಲಭಿಸಿದೆ. ಕಾಣಿಕೆಯಾಗಿ 126 ಕೋಟಿ ಲಭಿಸಿದೆ. ಮಂಡಲ – ಮಕರ ಉತ್ಸವ ನಿರ್ವಹಣೆಗೆ 147 ಕೋಟಿ ರೂ ವೆಚ್ಚವಾಗಿದೆಯೆಂದು ಅಧ್ಯಕ್ಷರು ತಿಳಿಸಿದ್ದಾರೆ.
ಶಬರಿಮಲೆಗೆ ಭಕ್ತರ ಹೆಚ್ಚಳ ಮತ್ತು ಆದಾಯದ ಹೆಚ್ಚಳ ಪರಿಗಣಿಸಿ ಕೇರಳೀಯರ ವರ್ಷಾರಂಭವಾದ ವಿಷು ಹಬ್ಬವನ್ನು ಶಬರಿಮಲೆಯಲ್ಲಿ ಅಯ್ಯಪ್ಪ ಭಕ್ತರ ಸಮಾವೇಶ ನಡೆಸುವ ಮೂಲಕ ಮತ್ತೊಮ್ಮೆ ಆದಾಯದ ಮೇಲೆ ಕಣ್ಣಿರಿಸಿ ಜಾಗತಿಕ ಅಯ್ಯಪ್ಪ ಭಕ್ತ ಸಮಾವೇಶ ನಡೆಸಲು ದೇವಸ್ವಂ ಮಂಡಳಿ ಮುಂದಾಗಿರುವುದು ವಿವಾದವಾಗುವ ಸಾಧ್ಯತೆಗಳಿವೆ.