- ಗತ ಪರಂಪರೆಯ ಪ್ರಗಲ್ಭ ತಾಳಮದ್ದಳೆ ಅರ್ಥದಾರಿ ಕೆ.ವಿ ಗಣಪಯ್ಯ ಇನ್ನಿಲ್ಲ..
- ಕಣ್ಮರೆಯಾದವರು ಶೇಣಿ, ಸಾಮಗ ಪರಂಪರೆಯ ಅನನ್ಯ ಕೊಂಡಿ..
ಯಕ್ಷಗಾನದ ಅರ್ಥದಾರಿಗಳಲ್ಲಿ ಅಗ್ರಮಾನ್ಯರೆನಿಸಿದ ಕಲಾವಿದ ನಿವೃತ್ತ ಶಿಕ್ಷಕ ಕೆ.ವಿ ಗಣಪಯ್ಯ ಅಲ್ಪಕಾಲದ ಅಸೌಖ್ಯದಿಂದ ಫೆ.3ರಂದು ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಈ ಮೂಲಕ ಗತಕಾಲದ ಅನುಭವೀ ಪ್ರಗಲ್ಭ ಅರ್ಥದಾರಿಯೊಬ್ಬರ ವಿಯೋಗವಾಗಿದೆ.
1933 ಜೂನ್ 5ರಂದು ಜನಿಸಿದ ಅವರು ಸುದೀರ್ಘ 92 ವರ್ಷಗಳ ತುಂಬು ಜೀವನವನ್ನು ನಡೆ
ಸಿದ್ದಾರೆ.
ಬೆಳ್ತಂಗಡಿ, ಪುತ್ತೂರು, ಸುಳ್ಯ ತಾಲೂಕುಗಳ ಅನೇಕ ಸರಕಾರಿ ಶಾಲೆಗಳಲ್ಲಿ ಹಿಂದಿ ಪಂಡಿತರಾಗಿ, ಮುಖ್ಯೋಪಾಧ್ಯಾಯರಾಗಿ ಮತ್ತು ಪ್ರಭಾರ ಪ್ರಾಂಶುಪಾಲರಾಗಿ ನಿವೃತ್ತಿ ಹೊಂದಿದ್ದರು.
ದೇರಾಜೆ, ಶೇಣಿ, ಪೆರ್ಲ, ಸಾಮಗ ಮುಂತಾದ ಹಿರಿಯ ಅರ್ಥದಾರಿಗಳ ಜೊತೆಗೆ ಸರಿಸಾಟಿಯಾಗಿ ಅರ್ಥಗಾರಿಕೆಯಲ್ಲಿ ಮೆರೆದ ಕೆ.ವಿ.ಗಣಪಯ್ಯನವರು ಹರಿತವಾದ ಮಾತಿನ ವೈಖರಿಯಿಂದ ತಾಳಮದ್ದಳೆಗಳಲ್ಲಿ ಬಿಸಿಯೇರಿಸಿ ಪ್ರಸಿದ್ಧರಾಗಿದ್ದರು.
ಭೀಷ್ಮ, ಕೌರವ, ವಾಲಿ, ತಾಮ್ರಧ್ವಜ , ಇಂತಹ ನೂರಾರು ಪಾತ್ರಗಳನ್ನು ಅವರು ವಿಶಿಷ್ಟವಾಗಿ ಚಿತ್ರಿಸುತ್ತಿದ್ದರು. ಪುರಾಣ ಪ್ರವಚನಗಳಲ್ಲಿಯೂ ಅವರು ಪ್ರಸಿದ್ಧರಾಗಿದ್ದರಿಂದ ಅವರ ಮಾತಿನ ಮಾರುಮಾಲೆಯನ್ನು ಎಲ್ಲರೂ ಇಷ್ಟಪಡುತ್ತಿದ್ದರು. ಅನೇಕ ಯಕ್ಷಗಾನ ಸಂಘ ಸಂಸ್ಥೆಗಳಿಗೆ, ಅರ್ಥಧಾರಿಗಳಿಗೆ ಮಾರ್ಗದರ್ಶಿಯಾಗಿದ್ದರು. ಪುತ್ತೂರಿನ ಶ್ರೀ ಆಂಜನೇಯ ಯಕ್ಷಗಾನ ಸಂಘದಿಂದ ಯಕ್ಷಾoಜನೇಯ ಪ್ರಶಸ್ತಿ, ಉಡುಪಿಯ ಯಕ್ಷ ಕಲಾರಂಗ ಹಾಗೂ ಬೆಳುವಾಯಿ ದೇವಾನಂದ ಭಟ್ಟರ ಯಕ್ಷಕಲಾ ಪ್ರಶಸ್ತಿ ಪುರಸ್ಕೃತರಾಗಿದ್ದರು.
ಶಾಲೆಗಳ ಅಭಿವೃದ್ಧಿ ಹಾಗೂ ಊರಿನ ಹಲವು ದೇವಸ್ಥಾನಗಳ ಜೀರ್ಣೋದ್ಧಾರ ಕಾರ್ಯಗಳಲ್ಲಿಯೂ ಅವರು ಪ್ರವೃತ್ತರಾಗಿದ್ದರು.ಕಾಣಿಯೂರು ನಿಂತಿಕಲ್ಲು ಬಳಿಯ ಆಲಾಜೆ ಎಂಬಲ್ಲಿ ಕೃಷಿಕರಾಗಿ ಅವರು ನಿವೃತ್ತ ಜೀವನವನ್ನು ನಡೆಸುತ್ತಿದ್ದರು.
ಒಳ್ಳೆಯ ಸಾಹಿತ್ಯ, ಸಮರ್ಥ ನಿರ್ವಹಣೆ, ವಾದ, ಭಾವ, ನಿರರ್ಗಳತೆ, ತುಂಬು ಝೆoಕಾರದ ಕಂಠದ ಕಲಾವಿದ ಗಣಪಯ್ಯ ಅವಿಸ್ಮರಣಿಯ ಕಲಾವಿದರೆಂದು ಡಾ. ಯಂ.ಪ್ರಭಾಕರ ಜೋಶಿ ಸಂತಾಪ ಸೂಚಿಸಿದ್ದಾರೆ.
ಕೆ.ವಿ. ಗಣಪಯ್ಯನವರ ನಿಧನದಿಂದ ಯಕ್ಷಗಾನದ ಹಿರಿಯ ಪರಂಪರೆಯ ಕೊಂಡಿಯೊಂದು ಕಳಚಿದಂತಾಗಿದೆಯೆಂದು ಗಣರಾಜ ಕುಂಬ್ಳೆ ತಿಳಿಸಿದ್ದಾರೆ. ಭಾಸ್ಕರ ರೈ ಕುಕ್ಕುವಳ್ಳಿ,. ಕೆ.ಉಮೇಶ ಆಚಾರ್ಯ ಕಾವೂರು, ಉಪ್ಪಿನಂಗಡಿ ಕಾಳಿಕಾಂಬಾ ಯಕ್ಷಗಾನ ಸಂಘದ ಅಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ, ಗುಡ್ಡಪ್ಪ ಬಲ್ಯ ಸಂತಾಪ ಸೂಚಿಸಿದ್ದಾರೆ.