ಒಡಿಯೂರಿನ ತುಳು ಸಾಹಿತ್ಯ ಸಮ್ಮೇಳನಕ್ಕೆ ರಜತ ಸಂಭ್ರಮ ಬಹುಮುಖೀ ಸಾಧಕ ಭಾಸ್ಕರ ರೈ ಕುಕ್ಕುವಳ್ಳಿ ಅಧ್ಯಕ್ಷತೆಯಲ್ಲಿ ಸಮ್ಮೇಳನ

by Narayan Chambaltimar
  • ಒಡಿಯೂರಿನ ತುಳು ಸಾಹಿತ್ಯ ಸಮ್ಮೇಳನಕ್ಕೆ ರಜತ ಸಂಭ್ರಮ
  • ಬಹುಮುಖೀ ಸಾಧಕ ಭಾಸ್ಕರ ರೈ ಕುಕ್ಕುವಳ್ಳಿ ಅಧ್ಯಕ್ಷತೆಯಲ್ಲಿ ಸಮ್ಮೇಳನ

ಮಂಗಳೂರು: ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನಮ್ ನಲ್ಲಿ ಜರಗುವ 25ನೇ ತುಳು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ,ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಮಾಜಿ ಸದಸ್ಯ, ತುಳು – ಕನ್ನಡ ಸಾಹಿತಿ ಹಾಗೂ ಹಿರಿಯ ಯಕ್ಷಗಾನ ಅರ್ಥಧಾರಿ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಆಯ್ಕೆಯಾಗಿದ್ದಾರೆ. ಇದೇ 2025 ಫೆಬ್ರವರಿ 6ರಂದು ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರ ಮಾರ್ಗದರ್ಶನದೊಂದಿಗೆ ‘ತುಳು ಬಾಸೆ ಸಂಸ್ಕೃತಿದ ಜಾಗೃತಿಗಾದ್’ಎಂಬ ಧ್ಯೇಯ ವಾಕ್ಯದೊಂದಿಗೆ ಒಡಿಯೂರು ಶ್ರೀ ದತ್ತಾಂಜನೇಯ ಕ್ಷೇತ್ರದಲ್ಲಿ ಸಮ್ಮೇಳನ ನಡೆಯಲಿದೆ.

ಶಿಕ್ಷಣ, ಸಾಹಿತ್ಯ, ಕಲೆ ಮತ್ತು ಮಾಧ್ಯಮ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಭಾಸ್ಕರ ರೈ ಕುಕ್ಕುವಳ್ಳಿ ಓರ್ವ ಬಹುಮುಖೀ ಸಾಧಕರು. ಪುತ್ತೂರು ತಾಲೂಕು ಇರ್ದೆ ಗ್ರಾಮದ ಪ್ರತಿಷ್ಠಿತ ಬಾಲ್ಯೊಟ್ಟು ಗುತ್ತು ಮನೆತನದಲ್ಲಿ ಜನಿಸಿದವರು. ಭಾರತೀಯ ಅಂಚೆ ಇಲಾಖೆಯಲ್ಲಿ 14 ವರ್ಷ ಸೇವೆ ಸಲ್ಲಿಸಿದ ಬಳಿಕ ಚೇಳಾಯರು, ಗುರುಪುರ ಸರಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಪ್ರಾಂಶುಪಾಲರಾಗಿ, ರಾಜ್ಯಶಾಸ್ತ್ರ ಪ್ರಾಧ್ಯಾಪಕರಾಗಿ ನಿವೃತ್ತರಾದರು.
ಯಕ್ಷಗಾನ ತಾಳಮದ್ದಳೆ ಕ್ಷೇತ್ರದ ಪ್ರಮುಖ ಅರ್ಥಧಾರಿ, ಹವ್ಯಾಸಿ ವೇಷಧಾರಿಯಾಗಿ, ಪುರಾಣ ಪ್ರವಚನಕಾರರಾಗಿಯೂ ಅವರು ಪ್ರಸಿದ್ಧರು. ಆಕಾಶವಾಣಿ ಮತ್ತು ದೂರದರ್ಶನ ಕಲಾವಿದರು. ಶಿಕ್ಷಣ ಸಂಪನ್ಮೂಲ ವ್ಯಕ್ತಿಯಾಗಿ ಬಾನುಲಿ ಪಠ್ಯಗಳನ್ನು ರಚಿಸಿದ್ದಾರೆ. ಧ್ವನಿಸುರುಳಿ ಸಾಕ್ಷ್ಯ ಚಿತ್ರಗಳಿಗೆ ಸಾಹಿತ್ಯ ಮತ್ತು ಗೀತೆಗಳನ್ನು ಬರೆದಿದ್ದಾರೆ. ಪ್ರಪ್ರಥಮ ತುಳುವಾರ್ತಾ ವಾಹಿನಿ ನಮ್ಮ ಕುಡ್ಲ, ಸಹಾಯ ಟಿವಿ,ವಿ4, ಡೈಜಿ ವರ್ಲ್ಡ್, ರೇಡಿಯೋ ಸಾರಂಗ್, ಕ್ಯಾಡ್ ಮೀಡಿಯಾಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ದೇಶ ವಿದೇಶಗಳ ಯಕ್ಷಗಾನ ಮತ್ತು ಸಾಹಿತ್ಯ ಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ.

ಕೃತಿಗಳು :
ಕನ್ನಡ – ತುಳು ಲೇಖಕರಾಗಿರುವ ಕುಕ್ಕುವಳ್ಳಿ ಅವರು ಹಲವು ಕೃತಿಗಳನ್ನು ಬರೆದು ಪ್ರಕಟಿಸಿದ್ದಾರೆ. ಏಕಾಂತದಿಂದ ಲೋಕಾಂತರಕೆ, ಸೃಷ್ಟಿಸಿರಿಯಲಿ ಪುಷ್ಪವೃಷ್ಟಿ, ಯಕ್ಷಿಕಾ, ಪಂಚದುರ್ಗಾ, ಅಭಿರಾಮ (ಕನ್ನಡ); ಗಾಂಪನ ಪುರಾಣ, ನೆಯಿ – ಪೇರ್, ಸೀಯನ (ತುಳು); ಯಕ್ಷಪ್ರಮೀಳ, ಯಕ್ಷ ಬಂಟರು, ಯಕ್ಷರ ಚೆನ್ನ, ಪುಳಿಂಚ ಸ್ಮೃತಿ – ಕೃತಿ, ಅರ್ಬಿ, ಅಳಿಕೆ ರಾಮಯ್ಯ ರೈ ಶತಮಾನದ ನೆನಪು, ಯಕ್ಷ ಪುರುಷೋತ್ತಮ, ಗಂದಸಾಲೆ (ಸಂಪಾದಿತ); ನೀಲಾಂಜನ, ಭರಣಿ ಜ್ಯೋತಿ, ಜಯ ಜನಾರ್ದನ, ಶ್ರೀ ಆದಿ ಮಹೇಶ್ವರಿ, ಪುಣ್ಯನೆಲ ಪೆರಣಂಕಿಲ (ದ್ವನಿ ಸುರುಳಿ ಸಾಹಿತ್ಯ); ಜನ್ಮ ರಹಸ್ಯ, ರಂಭಾ ಶಾಪ, ಹರಣ ಹಾರಿತು ಎರೆಯ ನೆಡೆಗೆ, ತುಳುನಾಡ ಬಲಿಯೇಂದ್ರ, ಗರತಿ ಮಂಗನೆ, ದಳವಾಯಿ ದೇವುಪೂಂಜೆ, ಜನ್ಮ ರಹಸ್ಯ (ನಾಟಕ); ಘೋರ ಮಾರಕ, ಗುನ್ಯಾಸುರ ವಧೆ, ಉಳ್ಳಾಲ ರಾಣಿ ಅಬ್ಬಕ್ಕ, ಕ್ರಾಂತಿ ಕಹಳೆ, ಸ್ವಾತಂತ್ರ್ಯ ಸಮರ, ಕಲಿ ಪ್ರಳಯ, ವಜ್ರನಾಭ ವೃತ್ತಾಂತ, ಸಾವಯವ ವಿಜಯ, ವಾತಾಸುರ ಬಂಧನ – ಕರ್ಕಶಾಸುರ ವಧೆ, ನಾರಾಯಣಾಸ್ತ್ರ – ಕೊರೋನಾಸ್ತ್ರ, ಜೀವಜಲ – ದೇವನೆಲ (ಜನಜಾಗ್ರತಿ ಯಕ್ಷಗಾನ ಪ್ರಸಂಗ ಸಾಹಿತ್ಯ). ನಮ್ಮ ಸಂಪರ್ಕ,ಮದಿಪು, ಸದಾಶಯ ಪತ್ರಿಕೆಗಳ ಸಂಪಾದಕರಾಗಿ ಕೆಲಸ ಮಾಡಿದ್ದಾರೆ.
ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ (2004) ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ (2008) ಸದಸ್ಯರಾಗಿದ್ದ ಭಾಸ್ಕರ ರೈ ಅವರು ಮಂಗಳೂರಿನಲ್ಲಿ ಪ್ರಪ್ರಥಮ ಮಹಿಳಾ ಯಕ್ಷಗಾನ ಸಮ್ಮೇಳನವನ್ನು ಸಂಘಟಿಸಿದ್ದರು. 2015 ರಲ್ಲಿ ಮೈಸೂರು ದಸರಾ ಕವಿಗೋಷ್ಠಿಯಲ್ಲಿ ತುಳು ಭಾಷೆಯನ್ನು ಪ್ರತಿನಿಧಿಸಿದ್ದಾರೆ. ಪ್ರಸ್ತುತ ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನ, ಯಕ್ಷಾಂಗಣ ಮಂಗಳೂರು, ಕರ್ನಾಟಕ ಯಕ್ಷಭಾರತಿ ಪುತ್ತೂರು ಸಂಸ್ಥೆಗಳ ಅಧ್ಯಕ್ಷರಾಗಿದ್ದಾರೆ.
ಪ್ರಶಸ್ತಿಗಳು
ಅಂತಾರಾಷ್ಟ್ರೀಯ ಆರ್ಯಭಟ, ಜಿಲ್ಲಾ ರಾಜ್ಯೋತ್ಸವ, ಕಾರಂತ ಸದ್ಭಾವನ, ಸೌರಭ, ಸಾಧನ, ನೂಪುರ, ವಿದ್ಯಾರತ್ನ, ಯುಎಇ ಬಂಟ ವಿಭೂಷಣ, ಪೆರ್ಮೆದ ತುಳುವೆ, ಶೇಣಿ ಶತಮಾನೋತ್ಸವ, ಮುಂಬೈ ಯಕ್ಷರಕ್ಷಾ, ಕುದುರೆಮುಖ ಕನ್ನಡ ಸಂಘದ ರಾಜ್ಯೋತ್ಸವ ಪ್ರಶಸ್ತಿಗಳು ಅವರಿಗೆ ಸಂದಿವೆ.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00