- ಆರಿಕ್ಕಾಡಿ ಕೋಟೆಯಿಂದ ನಿಧಿ ಅಪಹರಣ ಯತ್ನ : ಆರೋಪಿ ಮುಜೀಬ್ ಕಂಬಾರ್ ವಿರುದ್ಧ ಮುಸ್ಲಿಂ ಲೀಗ್ ಶಿಸ್ತು ಕ್ರಮ
- ಪಕ್ಷದ ಸ್ಥಾನಮಾನಗಳಿಂದ ಅಮಾನತು, ಸ್ಪಷ್ಟೀಕರಣ ನೀಡಲು ನಿರ್ದೇಶ
- ಗ್ರಾ ಪಂ.ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡದೇ ಮೌನ ಪಾಲನೆ
ಕುಂಬಳೆ ಆರಿಕ್ಕಾಡಿ ಕೋಟೆಯಿಂದ ನಿಧಿ ಅಪಹರಿಸಲು ಯತ್ನಿಸಿದ ಮುಸ್ಲಿಂ ಲೀಗ್ ನಾಯಕ, ಮೊಗ್ರಾಲ್ ಪುತ್ತೂರು ಗ್ರಾ.ಪಂ. ಉಪಾಧ್ಯಕ್ಷ ಮುಜೀಬ್ ಕಂಬಾರ್ ನನ್ನು ಮುಸ್ಲಿಂ ಲೀಗ್ ಪಕ್ಷ ಮತ್ತು ಪೋಷಕ ಸಂಘಟನೆಗಳ ಸ್ಥಾನ ಮಾನಗಳಿಂದ ಅಮಾನತು ಮಾಡಲಾಗಿದೆ.
ಆತನ ಮೇಲೆ ದಾಖಲಾದ ಕೇಸು ಮತ್ತು ಕೇಳಿಬಂದ ಅಪವಾದಗಳ ಹಿನ್ನೆಲೆಯಲ್ಲಿ ಪಕ್ಷದ ಜಿಲ್ಲಾ ಘಟಕಕ್ಕೆ ಸ್ಪಷ್ಟೀಕರಣ ನೀಡಬೇಕೆಂದೂ ನಿರ್ದೇಶಿಸಲಾಗಿದೆ. ಮುಸ್ಲಿಂಲೀಗ್ ಜಿಲ್ಲಾಧ್ಯಕ್ಷ ಕಲ್ಲಟ್ರ ಮಾಹಿನ್ ಹಾಜಿ ಹಾಗೂ ಜಿಲ್ಲಾ ಪದಾಧಿಕಾರಿಗಳು ಪ್ರಕಟಣೆಯಲ್ಲಿ ಈ ವಿಷಯ ತಿಳಿಸಿದ್ದಾರೆ.
ಆಪಾದಿತನಾದ ಮುಜೀಬ್ ವಿರುದ್ಧ ಪಕ್ಷ ಶಿಸ್ತುಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಮುಸ್ಲಿಂಲೀಗ್ ಮೊಗ್ರಾಲ್ ಪುತ್ತೂರು ಪಂಚಾಯತ್ ಘಟಕ, ಕಾಸರಗೋಡು ಮಂಡಲ ಘಟಕ ಜಿಲ್ಲಾ ಘಟಕವನ್ನು ಒತ್ತಾಯಿಸಿತ್ತು. ಈ ಹಿನ್ನೆಲೆಯಲ್ಲಿ ಪಕ್ಷದ ಹುದ್ದೆಗಳಿಂದ ಅಮಾನತುಗೈದು ಸ್ಪಷ್ಟೀಕರಣ ಕೋರಲಾಗಿದೆ.
ಇದೇ ವೇಳೆ ಗ್ರಾ.ಪಂ.ಉಪಾಧ್ಯಕ್ಷ ಸ್ಥಾನಕ್ಕೆ ಮುಜೀಬ್ ಕಂಬಾರ್ ಈ ತನಕ ರಾಜೀನಾಮೆ ನೀಡದೇ ಮುಂದುವರಿಯುತ್ತಿರುವುದರ ಕುರಿತು ಪಕ್ಷ ಯಾವುದೇ ಚಕಾರ ಎತ್ತಲಿಲ್ಲ. ಗ್ರಾ ಪಂ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನಿಡಬೇಕೆಂದು ಬಯಸಿ ಎಡರಂಗ, ಐಎನ್ಎಲ್, ಬಿಜೆಪಿ ಪಂಚಾಯತ್ ಮಾರ್ಚ್ ನಡೆಸಿದ್ದುವು. ಆಪಾದಿತನಾಗಿ ಕೇಸು ಹೊಂದಿದ ವ್ಯಕ್ತಿ ಗ್ರಾ.ಪಂ. ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಕಾಂಗ್ರೆಸ್ ಪಕ್ಷವೂ ಬಯಸಿತ್ತು.