- ಹವ್ಯಾಸಿ ತಾಳಮದ್ದಳೆ ಕ್ಷೇತ್ರಕ್ಕೆ ಕೊಡುಗೆಯಿತ್ತ ದಿ ಪಕಳಕುಂಜ, ದಿ.ಸೀತಾರಾಮರಿಗೆ ಕುಂಬಳೆಯಲ್ಲಿ ಶ್ರದ್ಧಾಂಜಲಿ ನುಡಿನಮನ
- ಹವ್ಯಾಸಿ ತಾಳಮದ್ದಳೆಯ ವಾರದ,ಕೂಟದಿಂದಲೇ ಮಹಾನ್ ಕಲಾವಿದರ ಉದಯ : ಎಂ.ನಾ.
ಕುಂಬಳೆ: ಹವ್ಯಾಸಿ ತಾಳಮದ್ದಳೆ ಕ್ಷೇತ್ರದ ಬೆಳವಣಿಗೆಗೆ ಅನನ್ಯ ಕೊಡುಗೆ ಇತ್ತ ಕಲಾವಿದರಾದ ಪಕಳಕುಂಜ ಶ್ಯಾಂಭಟ್ ಮತ್ತು ಕುಂಬಳೆ ಶೇಡಿಕ್ಕಾವಿನ ಪಾರ್ತಿಸುಬ್ಬ ಯಕ್ಷಗಾನ ಕಲಾಸಂಘದ ಸ್ಥಾಪಕ ಸದಸ್ಯ ಸೀತಾರಾಮ ಶೇಡಿಗುಮ್ಮೆ ಅವರ ಅಗಲಿಕೆಗೆ ಕುಂಬಳೆ ಶೇಡಿಕಾವಿನ ಪಾರ್ತಿಸುಬ್ಬ ಯಕ್ಷಗಾನ ಕಲಾಸಂಘದ ಸಭಾಭವನದಲ್ಲಿ ವಿಶೇಷ ತಾಳಮದ್ದಳೆಯೊಂದಿಗೆ ನುಡಿನಮನ ನಡೆಯಿತು.
ಫೆ.2 ಭಾನುವಾರ ಅಪರಾಹ್ನ ನಡೆದ ಕಾರ್ಯಕ್ರಮವನ್ನು ಶೇಡಿಕಾವು ಶ್ರೀ ಶಂಕರನಾರಾಯಣ ಕ್ಷೇತ್ರದ ಅರ್ಚಕ ನಾರಾಯಣ ಅಡಿಗ ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮೌನ ಪ್ರಾರ್ಥನೆಯೊಂದಿಗೆ ಅಗಲಿದ,ಕಲಾವಿದರ ಸ್ಮೃತಿ ಚಿತ್ರಕ್ಕೆ ಪುಷ್ಪಾರ್ಚನೆ ನಡೆಯಿತು.
ಬಳಿಕ ನಡೆದ ಶ್ರದ್ಧಾಂಜಲಿ ಸಹಿತ ನುಡಿನಮನ ಕಾರ್ಯಕ್ರಮದಲ್ಲಿ “ಕಣಿಪುರ’ ಮಾಧ್ಯಮದ ಪತ್ರಕರ್ತ ಎಂ.ನಾ.ಚಂಬಲ್ತಿಮಾರ್ ಮಾತನಾಡಿ ” ಇಡೀ ತಾಳಮದ್ದಳೆ ಕ್ಷೇತ್ರದ ಬುನಾದಿ ಹವ್ಯಾಸಿ ಸಂಘವನ್ನೇ ಆಶ್ರಯಿಸಿದೆ. ಅಲ್ಲಿ ಖ್ಯಾತ, ಖ್ಯಾತಿಹೀನ ಎಂಬುದಕ್ಕೆ ಅರ್ಥವೇ ಇಲ್ಲ..ಹವ್ಯಾಸಿ ಸಂಘಗಳ ವಾರದ ಕೂಟ, ವಾರ್ಷಿಕ ಕೂಟಗಳಿಂದಲೇ ಮಹಾನ್ ಕಲಾವಿದರು ಉದಿಸಿದ್ದಾರೆ. ಈ ನಿಟ್ಟಿನಲ್ಲಿ ಶೇಡಿಗುಮ್ಮೆ ಸೀತಾರಾಮ ಎಂಬ ಟೈಲರ್ ಹವ್ಯಾಸಕ್ಕೆ ಅರ್ಥ ಹೇಳಿ ಕಲಾಭಿರುಚಿಯ ಮನೆ, ಸಂಘಟನಾ ಕೊಡುಗೆ ಕೊಟ್ಟರೆ , ಪಕಳಕುಂಜ ಶ್ಯಾಂಭಟ್ಟರು ಎಲ್ಲಾ ದರ್ಜೆಯ ಅರ್ಥಧಾರಿಗಳ ಜತೆಗೃ ಪಾಲ್ಗೊಂಡು ಹವ್ಯಾಸಿ ವಾರದ ಕೂಟ ಪ್ರೀತಿಸಿದವರು, ಪೀಳಿಗೆ ರೂಪಿಸಿದವರು. ಈ ಪರಂಪರೆ ಬೆಳೆಯಬೇಕು ಎಂದರು.
ಅಗಲಿದ ಮಹನೀಯರಿಬ್ಬರ ಜತೆಗೆ ಒಡನಾಡಿದ.ಅರ್ಥ ಹೇಳಿದ ಶೇಡಿಕ್ಕಾವು ಪಾರ್ತಿಸುಬ್ಬ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ಅಶೋಕ .ಕೆ. ಕುಂಬ್ಳೆ ಅಧ್ಯಕ್ಷತೆ ವಹಿಸಿ, ಪ್ರಾಸ್ತಾವಿಕ ಮಾತನಾಡಿದರು.
ಹಿರಿಯ ಕಲಾವಿದರಾದ ಗೋಪಾಲ ನಾಯಕ್ ಸೂರಂಬೈಲು , ಬಾಲಕೃಷ್ಣ ಆಚಾರ್ಯ ನೀರ್ಚಾಲು ಅಗಲಿದ ಮಹನೀಯರ ಜತೆಗಿನ ರಂಗದ ಅನುಭವ ಮೆಲುಕಿ, ನಮನ ಸಲ್ಲಿಸಿದರು.
ದಿ. ಸೀತಾರಾಮರ ಪುತ್ರ ಶ್ರೀಪತಿ ಕೆ ಉಪಸ್ಥಿತರಿದ್ದರು.
ಕಾರ್ಯಕ್ರಮದಂಗವಾಗಿ “ಸುಧನ್ವಮೋಕ್ಷ” ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಶ್ರೀ ಹರಿ ಹೊಳ್ಳ ಮಧೂರು, ತಲ್ಪನಾಜೆ ಶಿವಶಂಕರ ಭಟ್, ಪುಂಡಿಕಾಯ್ ರಾಜೇಂದ್ರ ಪ್ರಸಾದ, ಲಕ್ಷ್ಮೀಶ ಬೇಂಗ್ರೋಡಿ, ಕೃಷ್ಣಮೂರ್ತಿ ಪಾಡಿ, ನವೀನಚಂದ್ರ ನಾಯ್ಕಾಪು, ಮುರಳೀಧರ ಶೇಡಿಕಾವು, ಸುಬ್ರಹ್ಮಣ್ಯ ಭಟ್ ಬೇಂಗ್ರೋಡಿ ಪಾಲ್ಗೊಂಡರು.
ಮುಮ್ಮೇಳದಲ್ಲಿ ಶಿವರಾಮ ಭಂಡಾರಿ ಕಾರಿಂಜ, ಸದಾಶಿವ ಗಟ್ಟಿ ನಾಯ್ಕಾಪು, ಗೋಪಾಲಕೃಷ್ಣ ನಾಯಕ್ ಸೂರಂಬೈಲು, ಉದಯಶಂಕರ ಮಜಲು, ಪ್ರದೀಪ ಕುಂಬಳೆ, ಸದಾಶಿವ ಮುಳಿಯಡ್ಕ, ಬಾಲಕೃಷ್ಣ ಆಚಾರ್ಯ, ಅಶೋಕ ಕುಂಬ್ಳೆ ಭಾಗವಹಿಸಿದರು.
ಸುಜನಾ ಶಾಂತಿಪಳ್ಳ ನಿರೂಪಿಸಿದರು. ಮುರಳೀಧರ ಶೇಡಿಕಾವ್ ವಂದಿಸಿದರು.