ಅಸನ,ವಸನ,ವಸತಿಗಾಗಿ ಮನುಷ್ಯ ಭೂಲೋಕವನ್ನು ಬರಿದುಮಾಡುತ್ತಿದ್ದಾನೆ. ನೆಲ-ಜಲ,ವನ-ಬನವನ್ನು ನಾಶಮಾಡುತ್ತಾ ಪಾಕೃತಿಕ ಸಂಪನ್ಮೂಲಗಳನ್ನು ತನ್ನ ಆಡಂಬರಕ್ಕೆ ಬಳಸುತ್ತಿದ್ದಾನೆ. ಆದರೆ,ವನ್ಯ ಮೃಗಗಳನ್ನು ಮರೆತುಬಿಟ್ಟು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿಕೊಂಡಿದ್ದಾನೆ..
ಹಸಿವು ನೀಗಿಸಲಿರುವ ಓಟದಲ್ಲಿ…
ವಾನರ ಸೈನ್ಯ ನಾಡು ನೋಡಿದಾಗ…
ಹದಿಮೂರು ಮಂಗಗಳ ಗುಂಪು. ಬೆಳಗ್ಗೆ ಬಂದರೆ ಸಂಜೆ ಹಿಂತಿರುಗುವುದು. ಪಪ್ಪಾಯಿ,ಪೇರಳೆ ತಿಂದರೂ ಅಡ್ಡಿಯಿಲ್ಲ. ಸೀಯಾಳಗಳೂ ಖಾಲಿಯಾಗುತ್ತಿವೆ. ಒಂದೆರಡಲ್ಲ,ಕಳೆದ ಮೂರು ವಾರಗಳಿಂದ ಉಪಟಳ ತಪ್ಪಿದ್ದಲ್ಲ. ಮರದಿಂದ ಮನೆಯ ಮಾಡಿಗೆ ಹಾರುತ್ತಾ ಹಂಚುಗಳನ್ನೂ ಕೆಳಗೆ ಬೀಳಿಸಿವೆ. ಏನು ಮಾಡಲಿ.? ಅರಣ್ಯ ಇಲಾಖೆಗೆ ಮಾಹಿತಿ ನೀಡುವಿರಾ..?
ಸಹಾಯಕ್ಕಾಗಿ ಹಾತೊರೆದ ಮಾತುಗಳಿಗೆ ಉತ್ತರಿಸಲು ಕಾಲಾವಕಾಶ ತೆಗೆದುಕೊಂಡೆ. ಕೃಷಿ ಪ್ರಧಾನ ವ್ಯವಸ್ಥೆಯಲ್ಲಿ ಬದುಕು ಕಂಡುಕೊಳ್ಳುವ ಸಾಮಾನ್ಯ ನಾಗರಿಕರನ್ನು ಸಂರಕ್ಷಿಸಬೇಕು. ಹಸಿವು ನೀಗಿಸಲು ಕಾಡು ಬಿಟ್ಟು ನಾಡು ಸುತ್ತುವ ಪ್ರಾಣಿಗಳನ್ನು ಪ್ರೀತಿಸಲೂ ಬೇಕು. ಹಾವು ಸಾಯದಂತೆಯೂ,ಕೋಲು ಮುರಿಯದಂತೆಯೂ ಮನುಷ್ಯ ವನ್ಯ ಪ್ರಾಣಿ ಸಂಘರ್ಷಕ್ಕೆ ವಿರಾಮ ನೀಡಲು ಸಾಧ್ಯವೇ..? ನೋಡೋಣ ಹೊತ್ತು ಕಳೆದು ಸಂಪರ್ಕಿಸುವೆ ಎನ್ನುತ್ತಾ ಮಾತು ಮುಗಿಸಿದೆ.
ಮೈದಾನದಲ್ಲಿ ಆಟ ಮುಂದುವರಿಯುತ್ತಿತ್ತು. ಮಕ್ಕಳೆಲ್ಲರೂ,”ಮಂಗ,ಮಂಗ….ಒಂದಲ್ಲ..ಮತ್ತೊಂದು..” ನೋಡುವುದೇನು.? ಆರು ಸದಸ್ಯರನ್ನೊಳಗೊಂಡ ವಾನರರ ಸೈನ್ಯವೊಂದು ಮರದಿಂದ ಮರಕ್ಕೆ ಹಾರುತ್ತಾ ತಮ್ಮ ಆಟವನ್ನು ಪ್ರದರ್ಶಿಸಲು ಪ್ರಾರಂಭಿಸಿದವು. ಇಬ್ಬರ ಕೈಯಲ್ಲಿ ಹಣ್ಣುಗಳಿದ್ದವು. ಉಳಿದವರು ಹುಡುಕುತ್ತಿದ್ದರು.
“ಸರ್,ಇದೇ ರೀತಿಯ ಮಂಗಗಳ ಗುಂಪು ನಮ್ಮನೆಗೂ ಬಂದಿದ್ದವು. ಅಪ್ಪ ಬಟ್ಟಲು ಬಡಿದು ಶಬ್ದ ಮಾಡಿದರೂ ಅವುಗಳು ಕದಲಲಿಲ್ಲ. ಸೀಯಾಳ ಕುಡಿದ ನಂತರವೇ ನಮ್ಮ ತೋಟವನ್ನು ಬಿಟ್ಟು ಹೋದವು” ಎಂದು ಅಯನ್ ಹೇಳಿದನು.
“ನಮ್ಮ ತೋಟಕ್ಕೆ ನಿತ್ಯವೂ ಬರುತ್ತವೆ. ಆದರೆ,ನಮಗೇನೂ ತೊಂದರೆ ಮಾಡುವುದಿಲ್ಲ. ಮರದಲ್ಲಿ ಆಟವಾಡಿಕೊಂಡಿರುತ್ತವೆ.” ಎನ್ನುವ ಅಭಿಪ್ರಾಯ ಮುಂದಿಟ್ಟಳು ಅವನಿ.
ಸದ್ಯಕ್ಕೆ ವಾನರ ಕುಟುಂಬಗಳು ನಾಡಿಗಿಳಿಯುವುದು ಸಾಮಾನ್ಯವಾಗಿಬಿಟ್ಟಿದೆ. ಕೆಲವು ವರ್ಷಗಳ ಮೊದಲು ಒಂದೋ,ಎರಡೋ ಮಾತ್ರ ಕೆಲ ದಿನಗಳ ಪ್ರವಾಸಕ್ಕಾಗಿ ನಾಡಿನ ಸಂಪರ್ಕಕ್ಕೆ ಬರುತ್ತಿದ್ದವು. ಆದರೆ,ಇಂದು ಕುಟುಂಬ ಸಮೇತ,ಮರಿ-ಮೊಮ್ಮಕ್ಕಳ ಸೈನ್ಯದೊಂದಿಗೆ ನಾಡಿಗೆ ಆಗಮಿಸಲು ಆರಂಭಿಸಿರುವುದು ಕೃಷಿ ಕುಟುಂಬಗಳ ನಿದ್ದೆಗೆಡಿಸಿರುವುದಂತೂ ಸತ್ಯ.
ಹಲವು ಅಧ್ಯಯನ ವರದಿಗಳ ಪ್ರಕಾರ ಕಾಡು ಬರಿದಾಗುತ್ತಿರುವುದು ಬೆಳಕಿಗೆ ಬಂದಿದೆ. ಅನ್ಯದೇಶೀಯ ಸಸ್ಯ ಸಂಪತ್ತು ಕಾಡನ್ನು ಆವರಿಸಿದೆ. ಎಲ್ಲಾ ಕಾಲಗಳಲ್ಲಿ ಹರಿಯುತ್ತಿದ್ದ ನೀರಝರಿಗಳು ಕಣ್ಮರೆಯಾಗಿವೆ. ನಿರಂತರ ಹಣ್ಣುಗಳನ್ನು ನೀಡುತ್ತಿದ್ದ ಕೋಟಿ ಕೋಟಿ ಮರಗಳಿಗೆ ಕೊಡಲಿ ಏಟು ಬಿದ್ದದೆ. ಕೋರ್ ಜೋನ್,ಬಫರ್ ಜೋನ್ ಮುಂತಾದ ವಿಭಜನೆಯಲ್ಲಿಯೂ ಮನುಷ್ಯನ ಹಸ್ತಕ್ಷೇಪ ಕಾಡು ಪ್ರಾಣಿಗಳ ಹೊಟ್ಟೆಗೆ ಆಹಾರ ಸಿಗದಂತೆ ಮಾಡಿದೆ. ಜೆ.ಸಿ.ಬಿ,ಬುಲ್ಡೋಜರ್ ಗಳ ಕಂಪನಕ್ಕೆ ಸ್ವಚ್ಛಂದವಾಗಿ ವಿಹರಿಸುತ್ತಾ ತಮ್ಮ ಪಾಡಿಗೆ ತಾವಿರುತ್ತಿದ್ದ ಪ್ರಾಣಿ ಸಂಕುಲದ ಆರೋಗ್ಯ ಹದಗೆಟ್ಟಿದೆ.
ಅಭಿವೃದ್ಧಿಯ ವೇಗದಲ್ಲಿ ಮನುಷ್ಯ ವರ್ಗದ ವ್ಯವಸ್ಥೆಗಳಿಗಾಗಿ ಕಾಡು ಸಾಯುತ್ತಿದೆ. ಜನಸಂಖ್ಯೆಯ ಹೆಚ್ಚಳದಿಂದಾಗಿ,ವಾಹನ ದಟ್ಟಣೆ ಮುಂದುವರಿದು ಎಷ್ಟು ಅಗಲವಾದರೂ ಸಾಕಾಗದ ರಸ್ತೆ ಜಾಲ ಕಾಡೊಳಗೆ ಹೊಕ್ಕು ಆವಾಸ ವ್ಯವಸ್ಥೆಯನ್ನು ಬುಡ ಮೇಲುಗೊಳಿಸಿದೆ. ಆಹಾರ-ನೀರು ಕಾಡೊಳಗೆ ಸಿಗದಿರುವಾಗ ಕಾಡು ನಾಡಿನ ವ್ಯತ್ಯಾಸ ತಿಳಿಯದೆ ಮಾತು ಬಾರದ ಮೃಗಗಳೂ ಓಟ ಮುಂದುವರಿಸುತ್ತಿವೆ. ಗ್ರಾಮಗಳಿಗೂ,ಪಟ್ಟಣಗಳಿಗೂ ಗುಳೇ ಹೊರಡುತ್ತಿವೆ. ಯಾಕೆಂದರೆ,ಮಾನವ ರಾಶಿ ಕಾಡಿನೊಳ ಹೊಕ್ಕರೆ,ಕಾಡುವಾಸಿಗಳು ನಾಡಿಗಲ್ಲದೆ ಇನ್ನೆಲ್ಲಿಗೆ ಹೋದಾವು ಹೇಳಿ..? ಮನುಕುಲ ಚಂದ್ರನಲ್ಲಿಗೆ ಹೋದರೂ ಬುಧ್ದಿ ಕಲಿಯಲಿಲ್ಲವಲ್ಲವೇ…?
- ವನದ ವ್ಯವಸ್ಥೆ ಸುಧಾರಿಸಬೇಡವೇ..?
ಮನೆಗೊಂದು ಮರ,ಊರಿಗೊಂದು ವನ ಹಿರಿಯರ ಹಿತನುಡಿಗಳು ಎಷ್ಟು ಅರ್ಥಪೂರ್ಣವಲ್ಲವೇ..? ಆದರೆ,ಮನೆ-ಮಠ,ರಸ್ತೆ-ರಿಸೋರ್ಟ್ ನಿರ್ಮಾಣಕ್ಕಾಗಿ ಮನೆಯ ಮರವೂ ಊರಿನ ವನ-ಬನವೂ ಕಣ್ಮರೆಯಾಗಿವೆ. ಕಾಡಂಚಿನಲ್ಲಿ ನಳ ನಳಿಸುತ್ತಿದ್ದ ವನ ಪ್ರದೇಶಗಳಲ್ಲಿ ಕಾಡು ಪ್ರಾಣಿಗಳು ಸ್ವಛ್ಚಂಧವಾಗಿ ವಿಹರಿಸುವ ಕಾಲವೊಂದಿತ್ತು. ಅಲ್ಲಿಂದ ಅವುಗಳು ಎಂದಿಗೂ ಊರಿನ ಕೃಷಿ ಪ್ರದೇಶಗಳಿಗೆ ನುಗ್ಗುತ್ತಿರಲಿಲ್ಲ. ಸಾಕಷ್ಟು ಆಹಾರ,ನೀರು ಲಭ್ಯವಾಗುತ್ತಿತ್ತು. ಒಂದು ವೇಳೆ ಕಡಿಮೆಯಾದರೂ ಹತ್ತಿರದ ಕಾಡೊಳಗೆ ನಿರ್ಭಯವಾಗಿ ಪ್ರವೇಶಿಸುತ್ತಿದ್ದವು. ಅದಕ್ಕಿರುವ ದಾರಿಯೂ ಅವರಿಗೆ ಸುಲಭವಾಗಿ ಸಿಗುತ್ತಿತ್ತು.
ಆದರೆ,ಇಂದು ದಾರಿಯೇ ಇಲ್ಲದಾಗಿದೆ. ಒಂದು ವೇಳೆ ದಾರಿ ದೊರಕಿ ಅದೆಷ್ಟು ಅಲೆದಾಡಿದರೂ ಕಾಡು ಸಿಗದಂತಾಗಿದೆ.! ಸಿಕ್ಕಿದರೂ ಕಾಡು ಬರಿದಾಗಿದೆ,ಕಾಡು ನಾಡಾಗಿ ಪರಿವರ್ತಿತವಾಗಿದೆ.
ನಾಡಂಚಿನ ಕಾಡನ್ನು ಬಿಟ್ಟು ಬಿಡಿ. ಈವಾಗ ಒಂದು ಕಾಡಿನಿಂದ ಇನ್ನೊಂದು ಕಾಡಿಗಿರುವ ಸಂಪರ್ಕ ಕೊಂಡಿ ಕಳಚಿಕೊಂಡಿದೆ. ಕಾಡುಗಳು ಪ್ರತ್ಯೇಕಗೊಂಡಿವೆ. ಆ ಸಣ್ಣ ತುಂಡು ಕಾಡಿನೊಳಗೆ ಆಹಾರ ಮತ್ತು ನೀರಿನ ವ್ಯವಸ್ಥೆ ಬರಿದಾಗಿದೆ. ಇದ್ದರೂ ಮಾನವನ ಬಳಕೆಗಾಗಿ ನದಿ ತಿರುಗಿಸುವಿಕೆ,ಅಣೆ ಕಟ್ಟು ನಿರ್ಮಾಣ,ರಸ್ತೆ ರೈಲು ಯೋಜನೆಗಳಿಂದಾಗಿ ಕಾಡೊಳಗಿನ ಜೈವ ವ್ಯವಸ್ಥೆ ಬುಡಮೇಲಾಗಿದೆ.